ಬೆಂಗಳೂರು: ಕಂಪನಿಯೊಂದರ ಕೃತಿ ಸ್ವಾಮ್ಯ (ಕಾಪಿ ರೈಟ್) ವಿವಾದಕ್ಕೆ ಸಂಬಂಧ ಸಿವಿಲ್ ಪ್ರಕರಣ ವಿಚಾರಣಾ ಹಂತದಲ್ಲಿದೆ ಎಂಬ ಕಾರಣಕ್ಕೆ ಕ್ರಿಮಿನಲ್ ಪ್ರಕ್ರಿಯೆಯನ್ನು ತಡೆಹಿಡಿಯುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಮೆಸರ್ಸ್ ಮಂಗಳೂರು ನ್ಯೂ ಸುಲ್ತಾನ್ ಬೀಡಿ ವರ್ಕ್ಸ್ ಕಂಪೆನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಕೃತಿಸ್ವಾಮ್ಯವನ್ನು ಮೊಟಕುಗೊಳಿಸುವುದು ಸಿವಿಲ್ ಪ್ರೊಸಿಡಿಂಗ್ಸ್ ಕೈಗೊಳ್ಳಲು ಕಾರಣವಾಗುತ್ತದೆ. ಜೊತೆಗೆ ಕ್ರಿಮಿನಲ್ ಪ್ರಕ್ರಿಯೆಯನ್ನೂ ಸಹ ಕೈಗೊಳ್ಳಬಹುದಾಗಿದೆ. ಆದರೆ, ಒಂದು ಮುನ್ನೆಚ್ಚರಿಕೆ ಕ್ರಮವಾಗಿದ್ದು, ಪರಿಹಾರವನ್ನೂ ಸಹ ಒದಗಿಸುತ್ತದೆ. ಆದರೆ, ಈ ಎರಡೂ ಪ್ರಕ್ರಿಯೆಗಳ ಫಲಿತಾಂಶ ಒಂದೇ ಅಲ್ಲ. ಸಿವಿಲ್ ವ್ಯಾಜ್ಯ ಬಾಕಿ ಇದೆ ಎಂಬ ಕಾರಣಕ್ಕೆ ಕ್ರಿಮಿನಲ್ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲಾಗದು ಎಂದು ನ್ಯಾಯಪೀಠ ಹೇಳಿದೆ.
ಸಿಆರ್ಪಿಸಿ ಸೆಕ್ಷನ್ 55 ಮತ್ತು 63 ಉಲ್ಲೇಖಿಸಿರುವ ನ್ಯಾಯಪೀಠ, ಕಾಯ್ದೆ ಸಿವಿಲ್ ಮತ್ತು ಕ್ರಿಮಿನಲ್ ಎರಡೂ ಪರಿಹಾರಗಳನ್ನು ಒದಗಿಸುತ್ತದೆ. ಒಂದರ ಫಲಿತಾಂಶ ಮತ್ತೊಂದರ ಫಲಿತಾಂಶದ ಮೇಲೆ ಅವಲಂಬಿತವಾಗಿಲ್ಲ, ಹಾಗಾಗಿ ಈ ಪ್ರಕರಣದಲ್ಲಿ ಪೊಲೀಸರು ಮೂರು ತಿಂಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ ಏನು ?ಅರ್ಜಿದಾರ ಕಂಪೆನಿಯ ಕೃತಿ ಸ್ವಾಮ್ಯಕ್ಕೆ ಸಂಬಂಧಿಸಿದ ವ್ಯಾಜ್ಯದ ಹಿನ್ನೆಲೆಯಲ್ಲಿ ತಾವು ಆರೋಪಿ ವಿರುದ್ಧ ದಾಖಲಿಸಿದ್ದ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿ ವಿಚಾರಣೆ ನಡೆಸುತ್ತಿಲ್ಲ. ಆ ಬಗ್ಗೆ ತನಿಖೆ ನಡೆಸುತ್ತಿಲ್ಲ. ಸಿವಿಲ್ ವ್ಯಾಜ್ಯದಲ್ಲಿ ತಾತ್ಕಾಲಿಕ ನಿರ್ಬಂಧ ಆದೇಶ ಪಡೆಯಲಾಗಿದೆ ಎಂದು ಪೊಲೀಸರು ಕ್ರಿಮಿನಲ್ ವಿಚಾರಣೆ ನಡೆಸುವುದಕ್ಕೆ ಮುಂದಾಗಿಲ್ಲ. ಹೀಗಾಗಿ ತನಿಖೆ ಮುಂದುವರೆಸಲು ನಿರ್ದೇಶನ ನೀಡಬೇಕು ಎಂದು ತನ್ನ ಅರ್ಜಿಯಲ್ಲಿ ಕೋರಲಾಗಿತ್ತು.