ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳು ಹಾಗೂ ಹಸಿರು ಇಂಧನ ಬಳಕೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ರಾಜ್ಯ ಸರ್ಕಾರ ಜುಲೈ 1 ರಿಂದ 6 ರವರೆಗೆ ಒಂದು ವಾರ ಎಲ್ಲ ಎಸ್ಕಾಂ ವ್ಯಾಪ್ತಿಯಲ್ಲಿ ಇವಿ ಅಭಿಯಾನ ಆಯೋಜಿಸಿದೆ. ಅಭಿಯಾನದ ಭಾಗವಾಗಿ ಬೆಸ್ಕಾಂ ವತಿಯಿಂದ ಅರಮನೆ ಮೈದಾನದಲ್ಲಿ ಜುಲೈ 1ರಿಂದ ಜುಲೈ 3 ರವರೆಗೆ ʼಇವಿ ಎಕ್ಸ್ ಪೋʼ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ 250ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳ ಆರಂಭಕ್ಕೆ ಮುಖ್ಯಮಂತ್ರಿ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.
ಬೆಸ್ಕಾಂನ ಇವಿ ಮಿತ್ರ ಆ್ಯಪ್, ಇವಿ ಚಾರ್ಜಿಂಗ್ ಸ್ಟೇಷನ್ ಮತ್ತು ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಏಕ ಗವಾಕ್ಷಿಯಲ್ಲಿ ಅನುಮತಿ ಪಡೆದ ಯೋಜನೆಗಳನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ.
“ಇವಿ ಅಭಿಯಾನ”ದ ಅಂಗವಾಗಿ ಜುಲೈ 2 ರಂದು ಬೆಳಗ್ಗೆ 6 ರಿಂದ 9 ಗಂಟೆಗೆ ಇವಿ ರ್‍ಯಾಲಿ ಏರ್ಪಡಿಸಲಾಗಿದೆ. ವಿಧಾನ ಸೌಧದಿಂದ ಅರಮನೆ ಮೈದಾನದವರೆಗೆ ಇವಿ ರ್‍ಯಾಲಿ ಸಾಗಲಿದ್ದು, ಸುಮಾರು 300 ಕ್ಕೂ ಹೆಚ್ಚು ವಾಹನಗಳು ಪಾಲ್ಗೊಳ್ಳಲಿವೆ. ವಿದ್ಯುತ್ ಚಾಲಿತ ವಾಹನಗಳ ಉತ್ಪಾದಕರು, ಪೂರೈಕೆದಾರರು ಮತ್ತು ಬಳಕೆದಾರರನ್ನು ಒಂದೇ ಸೂರಿನಡಿಯಲ್ಲಿ ತಂದು ಪರಸ್ಪರ ಸಮನ್ವಯ ಸಾಧಿಸಲು ʼಇವಿ ಎಕ್ಸ್ ಪೋ ನೆರವಾಗಲಿದೆ.
ಎಕ್ಸ್ ಪೋ ಉದ್ದೇಶ: ಉತ್ಪಾದಕರು, ಪೂರೈಕೆದಾರರು ಮತ್ತು ಬಳಕೆದಾರರಿಗೆ ವಿದ್ಯುತ್ ಚಲನಶೀಲತೆ ಕುರಿತು ಸಮಗ್ರ ಮಾಹಿತಿ ನೀಡುವ ಸಲುವಾಗಿ ಇವಿ ಎಕ್ಸ್ ಪೋ ಹಮ್ಮಿಕೊಳ್ಳಲಾಗಿದೆ. ಇವಿ ಉತ್ತೇಜನಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ನೀತಿಗಳ ಕುರಿತು ಮಾಹಿತಿ ಒದಗಿಸುವುದೇ ಇವಿ ಎಕ್ಸ್ ಪೋದ ಮುಖ್ಯ ಉದ್ದೇಶಗಳಲ್ಲೊಂದಾಗಿದೆ. ವಿದ್ಯುತ್ ಚಲನಶೀಲತೆ ಕುರಿತು ಸರ್ಕಾರ ಕೈಗೊಂಡ ಕಾರ್ಯಕ್ರಮಗಳು ಉತ್ಪಾದಕರ ಮತ್ತು ಗ್ರಾಹಕರ ನಿರೀಕ್ಷೆಗಳಿಗೆ ಪೂರಕವಾಗಿದೆಯೇ ಎನ್ನುವುದನ್ನು ಅರಿಯಲು ಇವಿ ಎಕ್ಸ್ ಪೋ ಸಹಕಾರಿಯಾಗಲಿದೆ. ಇವಿ ವಲಯದಲ್ಲಿ ಇತ್ತೀಚೆಗೆ ಆಗಿರುವ ತಂತ್ರಜ್ಞಾನ ಬೆಳವಣಿಗೆ, ಹೊಸ ಸವಾಲುಗಳು, ನಿರೀಕ್ಷೆಗಳು ಮತ್ತು ಸವಾಲುಗಳನ್ನು ಬಗೆಹರಿಸಲು ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಅರಿಯಲು ಇವಿ ಎಕ್ಸ್ ಪೋ ನೆರವಾಗಲಿದೆ.