ಬೆಂಗಳೂರು: ಯಶವಂತಪುರ ರಣಕಣದಲ್ಲಿ ಚುನಾವಣಾ ಕಾವು ಜೋರಾಗಿದೆ. ಇಂದು ಮೂರು ಪ್ರಮುಖ ಪಕ್ಷದ ಅಭ್ಯರ್ಥಿಗಳು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿ, ಮತಯಾಚನೆ ಮಾಡಿದರು. ಯಶವಂತಪುರ ರಣಕಣದ ಇಂದಿನ ಸಮಗ್ರ ಚಿತ್ರಣ ಇಲ್ಲಿದೆ
ಕಾಂಗ್ರೆಸ್ ಅಭ್ಯರ್ಥಿ ಪಿ.ನಾಗರಾಜ ಅಂದು ಬದ್ಧ ವೈರಿ ಇಂದು ದೋಸ್ತಿ!: ಅಂದು ಪರಸ್ಪರ ವೈರಿಗಳಾಗಿದ್ದ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಎಸ್.ಟಿ.ಸೋಮಶೇಖರ್ ಇಂದು ದೋಸ್ತಿಗಳಾಗಿದ್ದಾರೆ. ಒಂದು ಕಾಲದಲ್ಲಿ ಪರಸ್ಪರ ಸೆಣೆಸಾಡಿದ್ದ ಉಭಯ ನಾಯಕರು ಇಂದು ಒಂದೇ ವೇದಿಕೆ ಹಂಚಿಕೊಂಡು ಮತಯಾಚನೆ ಮಾಡಿದರು.
ಹೌದು, ಸಂಸದೆ ಶೋಭಾ ಕರಂದ್ಲಾಜೆ ಜತೆಗೂಡಿ ಎಸ್.ಟಿ.ಸೋಮಶೇಖರ್ ಕ್ಷೇತ್ರಾದ್ಯಂತ ಭರ್ಜರಿ ಪ್ರಚಾರ ಸಭೆಗಳನ್ನು ನಡೆಸಿದರು. ದೊಡ್ಡ ಆಲದಮರ, ದೊಡ್ಡಬೆಲೆ, ಗೌಡರಹಟ್ಟಿ, ಹೆಮ್ಮಿಗೆಪುರ ವಾರ್ಡ್, ಕೆಂಗೇರಿ ಉಪನಗರ ಬಂಡೇಮಠದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರವಾಗಿ ಪ್ರಚಾರ ಸಭೆ ನಡೆಸಿದರು. ಈ ಬಾರಿ ಸೋಮಶೇಖರ್ ಗೆದ್ದರೆ ಕೇವಲ ಶಾಸಕರಾಗಿ ಇರುವುದಿಲ್ಲ. ಸೋಮಶೇಖರ್ ಗೆದ್ದರೆ ಈ ಬಾರಿ ಸಚಿವರಾಗಿ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಸಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ಮತದಾರರ ಮನವೊಲಿಕೆ ಮಾಡಿದರು.
ಕೈ ಅಭ್ಯರ್ಥಿಯ ಏಕಾಂಗಿ ಪ್ರಚಾರ!:ಇನ್ನು ಯಶವಂತಪುರ ಕಾಂಗ್ರೆಸ್ ಅಭ್ಯರ್ಥಿ ಪಾಳ್ಯ ನಾಗರಾಜ್ ಏಕಾಂಗಿಯೇ ಮತಯಾಚನೆಗಿಳಿದಿದ್ದಾರೆ. ಪ್ರಮುಖ ಕಾಂಗ್ರೆಸ್ ನಾಯಕರು ಕ್ಷೇತ್ರ ಪ್ರಚಾರದತ್ತ ಮುಖ ಮಾಡಿಲ್ಲ. ತಮ್ಮ ಕೆಲ ಬೆಂಬಲಿಗರ ಜತೆಗೂಡಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ನಾನು ಕ್ಷೇತ್ರದ ಎಲ್ಲ ಮುಖಂಡರನ್ನು ಭೇಟಿ ಮಾಡಿ ಮನವೊಲಿಕೆ ಮಾಡುತ್ತಿದ್ದೇನೆ. ನನಗೆ ಸಮಯ ಕಡಿಮೆ ಇದೆ. ನಾನು ಅಭ್ಯರ್ಥಿ ಎಂದು ಹೇಳಿ ನಾಯಕರನ್ನು ಕರೆದುಕೊಂಡು ಬರುತ್ತಾ ಇದ್ದೇನೆ. ಆದರೆ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಲೀಡರ್ ಗಳಿಗೆ ಬೆದರಿಕೆ ಒಡ್ಡುತ್ತಿದ್ದರೆ ಎಂದು ಪಾಳ್ಯ ನಾಗರಾಜ್ ಆರೋಪಿಸಿದರು.
ಜವರಾಯಿ ಗೌಡರಿಂದಲೂ ಮತಯಾಚನೆ:ಇತ್ತ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡರೂ ಮನೆ ಮನೆಗೆ ತರಳಿ ಮತಯಾಚನೆ ಮಾಡಿದರು. ಕ್ಷೇತ್ರದ ಮುಖಂಡರನ್ನು ಭೇಟಿಯಾಗಿ ಬೆಂಬಲ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ ಎಸ್. ಟಿ.ಸೋಮಶೇಖರ್ ಪರ ಕೆಲಸ ಮಾಡುವಂತೆ ಬಿಜೆಪಿ ಆಫರ್ ಕೊಟ್ಟಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ. ನಿನಗೂ ಎಂ ಎಲ್ ಸಿ ಮಾಡುತ್ತೇನೆ. ಬೋರ್ಡ್ ಅಧ್ಯಕ್ಷಗಿರಿ ಕೊಡುತ್ತೇವೆ ಅಂತ ಆಫರ್ ನೀಡಿದ್ದರು. ನಾನು ಎರಡು ಬಾರಿ ಸೋತಿರ ಬಹುದು, ಆದರೆ, ಮತ ಹಾಕಿದವರನ್ನು ವಂಚಿಸಲ್ಲ ಎಂದು ತಿಳಿಸಿದರು.