ಬೆಂಗಳೂರು: ನಾಳಿನ ಪರಿಷತ್ ಅಧಿವೇಶನದಲ್ಲಿ ಮಾತಾಡಲು ಮಾಹಿತಿ ಪಡೆದಿದ್ದೇನೆ. ಈ ಅಧಿವೇಶನ ಕರೆದಿರುವುದು ಅನಧಿಕೃತ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದರು.
ಪದ್ಮನಾಭ ನಗರದ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಪ್ಪತ್ತು ವರ್ಷಗಳ ಇತಿಹಾಸದಲ್ಲಿ ಕಾರ್ಯದರ್ಶಿ ಹತ್ತಿರ ಪತ್ರ ಬರೆಸಿಲ್ಲ. ಅಧಿವೇಶನ ಕರೆದಿರುವುದು ಹಿಂದೆ ಯಾವಾಗಲೂ ನಡೆದಿಲ್ಲ ಎಂದರು.
ಗೋಹತ್ಯೆ ನಿಷೇಧ ವಿಧೇಯಕ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜೆರ್ಸಿ ಹಸು ಗಂಡು ಕರು ಹಾಕಿದರೆ ಸಾಕುವವರು ಯಾರು? ಗೋವು ಸಾಗಿಸುವಾಗ ಹಿಡಿದು ಕೊಂದರೂ ತಪ್ಪಿಲ್ಲ ಎಂಬ ನಿಯಮ ಸರಿಯಲ್ಲ. ದೇವೇಗೌಡರ ಜನ್ಮದಿನದಂದು ಬರಲು ಆಗಲಿಲ್ಲ. ಹೀಗಾಗಿ, ಇಂದು ಬಂದು ಆರೋಗ್ಯ ವಿಚಾರಿಸಿದೆ. ಗೋ ಹತ್ಯೆ ವಿಧೇಯಕದ ಬಗ್ಗೆ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.
ಪಕ್ಷ ಸೇರ್ಪಡೆ ವಿಚಾರದಲ್ಲಿ ಗೌಡರ ಅಭಿಪ್ರಾಯದ ಬಗ್ಗೆ ಕೇಳಿದ ಪ್ರಶ್ನೆಗೆ, ತಂದೆ ಮಗನಿಗೆ ಬೇಡ ಅಂತಾರಾ? ರಾಜಕೀಯ ನಿರ್ಧಾರ ತೆಗೆದುಕೊಳ್ಳುವಾಗ ಎಲ್ಲರ ಅಭಿಪ್ರಾಯ ತೆಗೆದುಕೊಳ್ಳಬೇಕಾಗುತ್ತದೆ. ನಾಳೆಯಿಂದ ಅಭಿಪ್ರಾಯ ಸಂಗ್ರಹಿಸಲು ಪ್ರವಾಸ ಹೋಗುತ್ತಿದ್ದೇನೆ. ನಂತರ ತಿಳಿಸುವುದಾಗಿ ಹೇಳಿದ್ದೇನೆ ಎಂದರು.
ಕಾಂಗ್ರೆಸ್ನೊಂದಿಗಿನ ಆತ್ಮೀಯತೆ ಈಗಲೂ ಇದೆ. ಅದೇ ರೀತಿ ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಮನೆಗೆ ಈಗಲೂ ಹೋಗುತ್ತೇನೆ. ನನಗೆ ಯಾರೂ ಮೇಲೂ ವ್ಯಕ್ತಿಗತ ದ್ವೇಷ ಇಲ್ಲ. ನಾನೊಬ್ಬ ಅಜಾತಶತ್ರು. ಡಿ.ಕೆ.ಶಿವಕುಮಾರ್ ಕೂಡ ಮನೆಗೆ ಬಂದಿದ್ದರೂ ಎಲ್ಲರ ಅಭಿಪ್ರಾಯ ಪಡೆದು ತಿಳಿಸುವುದಾಗಿ ಹೇಳಿದ್ದೇನೆ ಎಂದರು.
ಗೋ ಹತ್ಯೆ ವಿಧೇಯಕದ ಬಗ್ಗೆ ರೈತ ಸಂಘದ ಜೊತೆ ಯಡಿಯೂರಪ್ಪ ಚರ್ಚಿಸಿಲ್ಲ. ನಾನು ಮುಸ್ಲಿಂ ನಾಯಕ ಅಲ್ಲ. ಸಿದ್ದರಾಮಯ್ಯ ಅವರನ್ನು ಕುರುಬರ ನಾಯಕ ಅನ್ನಲಾಗುತ್ತಾ? ನಾವು ಇದ್ದಾಗ ಮುಸ್ಲಿಂ ಸಮುದಾಯದಕ್ಕೆ ಗೌಡರು ಮೀಸಲು ಕೊಟ್ಟಿದ್ದರು. ಪಕ್ಷದ ಒಳಗೆ ಎಲ್ಲರೂ ಕೂತಿದ್ದಾರೆ. ನಾವು ನಿಂತಿದ್ದೇವೆ. ಅದು ನೋವಾಗುತ್ತದೆ. ಕಾಂಗ್ರೆಸ್ ಪೋಸ್ಟರ್ನಲ್ಲಿ ಎಲ್ಲೂ ಮುಸ್ಲಿಂಮರ ಪೋಟೋ ಇಲ್ಲ. 13 ಉಪ ಚುನಾವಣೆ, ಶಿರಾ ಉಪ ಚುನಾವಣೆ ಏನಾಯ್ತು? ಸೋತೆವು. ನಾನು ಅಂದೂ ಪ್ರಚಾರಕ್ಕೆ ಹೋಗಲಿಲ್ಲ. ನನ್ನ ಕೊಡುಗೆ ಅದರಲ್ಲಿ ಇಲ್ಲ. ಯಾರು ಏನೇ ಮಾಡಿದ್ರು ಮುಂದೆ ಸಂಪೂರ್ಣ ಬಹುಮತ ಬರುತ್ತೆ ಎಂದು ಎದೆತಟ್ಟಿ ಹೇಳಲಾಗದು ಎಂದು ಇಬ್ರಾಹಿಂ ಹೇಳಿದರು.
ಸಿಎಂ ಯಡಿಯೂರಪ್ಪ ಅವರು ಕೋಡಿಹಳ್ಳಿ ಚಂದ್ರಶೇಖರ್ ಹತ್ತಿರ ಹೋಗಿ ಚರ್ಚೆ ಮಾಡುವಂತಾಗಿದೆ. ಅದು ಸಚಿವರು ಹೋಗಿಲ್ಲ, ನಂದೀಶ್ ರೆಡ್ಡಿ ಕಳಿಸಿದ್ದಾರೆ. ಸರ್ಕಾರದ ವ್ಯವಸ್ಥೆ ಎಲ್ಲಿಗೆ ತಂದಿದ್ದಾರೆ. 4 ದಿನದಿಂದ ಬಸ್ಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದೇವೇಗೌಡರಲ್ಲಿ ಆಡಳಿತದ ಪರಿಜ್ಞಾನ ಇತ್ತು ಎಂಬುದನ್ನು ದೇಶ ನೋಡಿದೆ. ಗೌಡರ ಸಲಹೆ ಎಲ್ಲರೂ ಪಡೆಯುವುದು ಉತ್ತಮ ಎಂಬುದು ನನ್ನ ಭಾವನೆ ಎಂದರು.