ಬೆಂಗಳೂರು: ಮಾದಕ ಪದಾರ್ಥಗಳನ್ನು ವಿದೇಶಕ್ಕೆ ಕೊರಿಯರ್ ಮಾಡಲು ನಿಮ್ಮ ಆಧಾರ್ ನಂಬರ್ ಬಳಕೆಯಾಗಿದೆ ಎಂದು ಕರೆ ಮಾಡಿದ್ದ ಸೈಬರ್ ಖದೀಮರು, ಬರೋಬ್ಬರಿ 1.98 ಕೋಟಿ ರೂಪಾಯಿಯನ್ನು ವ್ಯಕ್ತಿಯೊಬ್ಬರ ಖಾತೆಯಿಂದ ವರ್ಗಾವಣೆಕೊಂಡು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
52 ವರ್ಷ ವಯಸ್ಸಿನ ಹೆಚ್.ಎಸ್.ಆರ್ ಲೇಔಟ್ ನಿವಾಸಿಯೊಬ್ಬರು ನೀಡಿರುವ ದೂರಿನ ಅನ್ವಯ ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರ ವ್ಯಕ್ತಿಗೆ ಡಿಸೆಂಬರ್ 2ರಂದು ಕೊರಿಯರ್ ಕಂಪನಿಯವರ ಸೋಗಿನಲ್ಲಿ ಕರೆ ಮಾಡಿದ್ದ ಖದೀಮರು, ''ನಿಮ್ಮ ಆಧಾರ್ ನಂಬರ್ ಬಳಸಿಕೊಂಡು ಮುಂಬೈನಿಂದ ತೈವಾನ್ಗೆ ಅವ್ಯವಹಾರಿಕ ವಸ್ತುಗಳು, ಎಂಡಿಎಂಎ ಮಾದಕ ಪದಾರ್ಥವನ್ನು ಕೊರಿಯರ್ ಮಾಡಲಾಗಿದೆ. ಮುಂಬೈ ಸೈಬರ್ ಕ್ರೈಂ ಠಾಣೆಯಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ'' ಎಂದು ಬೆದರಿಸಿದ್ದರು.
ನಂತರ ಅದನ್ನು ಪರಿಶೀಲಿಸಬೇಕಾಗುತ್ತದೆ ಎಂದು ವಿಡಿಯೋ ಕರೆ ಮಾಡಿ, ಬಳಿಕ ಆನ್‌ಲೈನ್ ಪೇಮೆಂಟ್ ಲಿಂಕ್ ಕಳಿಸಿ, ಓಟಿಪಿ ಪಡೆದುಕೊಂಡು ಬರೋಬ್ಬರಿ 1.98 ಕೋಟಿ ವರ್ಗಾಯಿಸಿಕೊಂಡಿದ್ದಾರೆ. ಹಣ ಕಳೆದುಕೊಂಡ ವ್ಯಕ್ತಿ ಸದ್ಯ ಆಗ್ನೇಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಮೆಜಾನ್ ಕಂಪನಿ ಸರ್ವರ್ ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ವಂಚನೆ:ಅಮೆಜಾನ್ ಕಂಪನಿ ಸರ್ವರ್ ಹ್ಯಾಕ್ ಮಾಡಿ ಕೋಟ್ಯಂತರ ರೂ. ಮೋಸ ಮಾಡುತ್ತಿದ್ದ ಜಾಲವನ್ನು ಬೆಂಗಳೂರಿನ ಯಶವಂತಪುರ ಪೊಲೀಸರು ಇತ್ತೀಚೆಗೆ ಭೇದಿಸಿದ್ದರು. ಈ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರಿಂದ ಬಂಧನಕ್ಕೊಳಗಾದ ಚಿರಾಗ್ ಎಂಬ ಆರೋಪಿಯು ನಗರ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದನು. ಆರೋಪಿ ಆನ್‌ಲೈನ್ ಮುಖಾಂತರ ಐಫೋನ್, ವಿವಿಧ ಕಂಪನಿಗಳ ಮೊಬೈಲ್ಗಳು ಮತ್ತು ಎಲೆಕ್ಟ್ರಾನಿಕ್ ಡಿವೈಸ್ಗಳನ್ನು ಬುಕ್ ಮಾಡುತ್ತಿದ್ದನು. ಡೆಲಿವರಿಯಾದ ಬಳಿಕ ಡ್ಯಾಮೇಜ್ ಆಗಿದೆ ಎಂದು ವಸ್ತುಗಳನ್ನು ವಾಪಸ್ ಕೊಡುವ ಹಾಗೆಯೇ ಕಂಪನಿಯ ಆ್ಯಪ್ನಲ್ಲಿ ತೋರಿಸಿ, ಪಾವತಿಸಿದ್ದ ಹಣವನ್ನು ರಿಫಂಡ್ ಮಾಡಿಸಿಕೊಳ್ಳುತ್ತಿದ್ದನು.
ಇದೇ ರೀತಿ ಖರೀದಿಸಿದ ವಸ್ತುಗಳನ್ನು ತನ್ನಲ್ಲೇ ಇಟ್ಟುಕೊಂಡು ಕಂಪನಿಗೆ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದರು. ನಷ್ಟವಾಗುತ್ತಿರುವ ಕುರಿತು ಇತ್ತೀಚಿಗೆ ಕಂಪನಿ ಪ್ರತಿನಿಧಿಗಳು, ಒಂದೇ ವಿಳಾಸದಿಂದ ನಾಲ್ಕು ಬಾರಿ ಆನ್‌ಲೈನ್‌ನಲ್ಲಿ ವಿವಿಧ ಕಂಪನಿಗಳ ಮೊಬೈಲ್ಗಳನ್ನು ಬುಕ್ ಮಾಡಿದ್ದ ಚಿರಾಗ್ ಮನೆಗೆ ಬಂದಿದ್ದಾರೆ. ಅನುಮಾನಗೊಂಡು ಚಿರಾಗ್ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದರು. ಕಂಪನಿಯ ಡೇಟಾ ಮತ್ತು ಬುಕ್ ಮಾಡಿದ ಆರ್ಡರ್ ಪರಿಶೀಲಿಸಿದ ನಂತರ, ಆರೋಪಿ ವಂಚಿಸಿರುವುದು ಬೆಳಕಿಗೆ ಬಂದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಇದನ್ನೂ ಓದಿ:ಯೂಟ್ಯೂಬರ್ ಮನೆಯ ಸಿಸಿಟಿವಿ ಹ್ಯಾಕ್, ಅಶ್ಲೀಲ ವಿಡಿಯೋ ಶೇರ್; ಆರೋಪಿಗಾಗಿ ಬಲೆ ಬೀಸಿದ ಪೊಲೀಸರು