ಎಫ್ಡಿಎ ಅಕ್ರಮ ಪ್ರಕರಣ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಹೋರಾಟಕ್ಕೆ ಕರೆ: ರವಿಕುಮಾರ್ ಬೆಂಗಳೂರು: ಕಲಬುರಗಿ ಮತ್ತು ಯಾದಗಿರಿಯಲ್ಲಿ ನಡೆದಿರುವ ಎಫ್ಡಿಎ ಪರೀಕ್ಷಾ ಅಕ್ರಮ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ನವೆಂಬರ್ 4 ರಂದು ಎರಡೂ ಜಿಲ್ಲೆಗಳಲ್ಲಿ ಬಿಜೆಪಿ ಪ್ರತಿಭಟನೆಗೆ ಕರೆ ನೀಡಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಪ್ರಥಮ ದರ್ಜೆ ಗುಮಾಸ್ತ ಹುದ್ದೆಗೆ ಪರೀಕ್ಷೆ ನಡೆಯಿತು. ಕಲಬುರಗಿ, ಯಾದಗಿರಿಯಲ್ಲಿ ಸಾಕಷ್ಟು ಗೋಲ್ ಮಾಲ್ ಆಗಿರುವುದು ಹೊರ ಬಂದಿದೆ. ಸಾಮಾನ್ಯವಾಗಿ ಓಎಂಆರ್ ಶೀಟ್ ಹೊರಬರಲ್ಲ ಆದರೂ ಓಎಂಆರ್ ಶೀಟ್ನ ಜೆರಾಕ್ಸ್ ಹೇಗೆ ಹೊರಗೆ ಬಂತು? ಬ್ಲೂಟೂತ್ ಹೇಗೆ ಉಪಯೋಗಿಸಿದರು? ಪರೀಕ್ಷಾ ಸಮಯ ಮುಕ್ತಾಯವಾದರೂ ಕೆಲವರಿಗೆ ಹೆಚ್ಚುವರಿ ಸಮಯ ನೀಡಲಾಗಿದೆ. ಆ ವಿದ್ಯಾರ್ಥಿಗಳು ಯಾರು? ಇದರ ಹಿಂದಿರುವ ಕಿಂಗ್ ಪಿನ್ ಯಾರು? ಎನ್ನುವ ವಿಷಯ ಇರಿಸಿಕೊಂಡು ನವೆಂಬರ್ 4 ರಂದು ಕಲಬುರಗಿ ಮತ್ತು ಯಾದಗಿರಿಯಲ್ಲಿ ಹೋರಾಟಕ್ಕೆ ಕರೆ ನೀಡಿದ್ದೇವೆ ಎಂದರು.
ಈ ಅಕ್ರಮದ ಕಿಂಗ್ ಪಿನ್ ಡಿ ಆರ್ ಪಾಟೀಲ್ ಅವರನ್ನು ಇನ್ನೂ ಬಂಧಿಸಿಲ್ಲ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಸಚಿವ ಪ್ರಿಯಾಂಕ್ ಖರ್ಗೆ ಒಪ್ಪುತ್ತಿಲ್ಲ, ಡಿ ಆರ್ ಪಾಟೀಲ್ ಈ ಹಿಂದೆ ನಡೆದಿರುವ ಪಿಎಸ್ಐ ಪರೀಕ್ಷಾ ಅಕ್ರಮದ ಗೋಲ್ ಮಾಲ್ ಕೇಸ್ನಲ್ಲೂ ಇದ್ದಾರೆ. ಈಗ ಎಫ್ಡಿಎ ಪರೀಕ್ಷಾ ಅಕ್ರಮದಲ್ಲಿಯೂ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ರೀತಿ ಪರೀಕ್ಷಾ ಕೇಂದ್ರವನ್ನೇ ಅಕ್ರಮಕ್ಕೆ ಬಳಸಿಕೊಂಡರೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಆದರೆ, ಸರ್ಕಾರ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸದೇ ನಾಟಕ ಮಾಡುತ್ತಿದೆ. ಪ್ರಿಯಾಂಕ್ ಖರ್ಗೆ ಸರಿಯಾದ ತನಿಖೆಗೆ ಅವಕಾಶ ನೀಡದೇ ನಾಟಕ ಮಾಡುತ್ತಿದ್ದಾರೆ. ಹಾಗಾಗಿ ಬಿಜೆಪಿ ಹೋರಾಟಕ್ಕೆ ಕರೆ ನೀಡಿದೆ ಎಂದರು.
ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳ ಬಂಧನ: ಇತ್ತೀಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ವಿವಿಧ ನಿಗಮಗಳ ಖಾಲಿ ಹುದ್ದೆಗಳ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳನ್ನು ಕಲಬುರಗಿ ಎರಡು ಪರೀಕ್ಷಾ ಕೇಂದ್ರಗಳಿಂದ ಹಾಗೂ ಯಾದಗಿರಿಯ ಪರೀಕ್ಷಾ ಕೇಂದ್ರದಿಂದ ಪೊಲೀಸರು ಬಂಧಿಸಿದ್ದರು. ಅದಲ್ಲದೇ ಹೊರಗಡೆ ವಾಹನದಲ್ಲಿ ಕುಳಿತು ಬ್ಲೂಟೂತ್ ಮೂಲಕ ಅಭ್ಯರ್ಥಿಗಳಿಗೆ ಕೀ ಆನ್ಸರ್ ಹೇಳಿ ಕೊಡುತ್ತಿದ್ದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ಕೈಗೊಂಡಿದ್ದರು. ವಿಚಾರಣೆ ವೇಳೆ ಓರ್ವ ಅಭ್ಯರ್ಥಿ ಈ ಪರೀಕ್ಷಾ ಅಕ್ರಮದಲ್ಲೂ ಡಿ ಆರ್ ಪಾಟೀಲ್ ಕೈವಾಡ ಇರುವುದಾಗಿ ಬಾಯಿ ಬಿಟ್ಟಿದ್ದನು.
ಇದನ್ನೂ ಓದಿ :ಕಲಬುರಗಿಯಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳು.. ಓರ್ವನ ಬಂಧನ, ಆರು ಮಂದಿ ವಶಕ್ಕೆ