ಬೆಂಗಳೂರು:ಚಾಮರಾಜಪೇಟೆ ಬೆಂಗಳೂರು ನಗರದ ಪ್ರಮುಖ ವಿಧಾನಸಭೆ ಕ್ಷೇತ್ರಗಳಲ್ಲೊಂದು. ಚುನಾವಣೆ ಹೊಸ್ತಿಲಲ್ಲಿ ಕ್ಷೇತ್ರದಲ್ಲಿ ಮತಕಾವು ಹೆಚ್ಚಿದೆ. ಸದ್ಯ ಚಾಮರಾಜಪೇಟೆಯ ಚುನಾವಣಾ ಅಖಾಡ ಹೇಗಿದೆ ಎಂಬ ವರದಿ ಇಲ್ಲಿದೆ.
ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಏರುತ್ತಿರುವ ಉರಿ ಬಿಸಿಲಿನಲ್ಲಿ ರಾಜಕೀಯ ಕಾವೂ ಹೆಚ್ಚಾಗುತ್ತಿದೆ. ಬೆಂಗಳೂರು ನಗರದ ಪ್ರಮುಕ ವಿಧಾನಸಭೆ ಕ್ಷೇತ್ರವಾದ ಚಾಮರಾಜಪೇಟೆ ಈ ಬಾರಿಯ ಚುನಾವಣೆಯಲ್ಲಿ ಹೊಸ ರಾಜಕೀಯ ಲೆಕ್ಕಾಚಾರದೊಂದಿಗೆ ಕುತೂಹಲಕ್ಕೆ ಕಾರಣವಾಗಿದೆ. ಚಾಮರಾಜಪೇಟೆ ಸದ್ಯ ಕಾಂಗ್ರೆಸ್ ಭದ್ರಕೋಟೆ. ಕಾಂಗ್ರೆಸ್ ಮಿಗಿಲಾಗಿ ಹಾಲಿ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರ ಭದ್ರಕೋಟೆಯಾಗಿದೆ. ಜೆಡಿಎಸ್‌ನಲ್ಲಿದ್ದಾಗ ಹೆಚ್.ಡಿ.ಕುಮಾರಸ್ವಾಮಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಜಮೀರ್, 2008, 2013ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಜಯಿಸಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಒಟ್ಟು ನಾಲ್ಕು ಬಾರಿ ಗೆದ್ದು ಬೀಗಿರುವ ಜಮೀರ್ ಈ ಬಾರಿನೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವಿನ ಬಲವಾದ ವಿಶ್ವಾಸದಲ್ಲಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದ ಮತದಾರರೇ ನಿರ್ಣಾಯಕವಾಗಿರುವ ಈ ಕ್ಷೇತ್ರವು ಜೆಡಿಎಸ್ ಹಿಡಿತದಿಂದ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ತೆಕ್ಕೆಗೆ ಜಾರಿತು. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದರೂ ಜಮೀರ್ ಪ್ರಭಾವ ಕ್ಷೇತ್ರದಲ್ಲಿ ಕುಂದಿಲ್ಲ. ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ ಜಮೀರ್ ಅಹಮ್ಮದ್ ವೈಯ್ಯಕ್ತಿಕ ವರ್ಚಸ್ಸೇ ಹೆಚ್ಚು. ಆ ವರ್ಚಸ್ಸಿನಿಂದಲೇ ಜಮೀರ್ ಹ್ಯಾಟ್ರಿಕ್ ಗೆಲುವು ಸಾಧಿಸಲು ಸಾಧ್ಯವಾಗಿದೆ. ಅದರಲ್ಲೂ ಕೊರೊನಾ ಸಂದರ್ಭದಲ್ಲಿ ಎಲ್ಲಾ ಜಾತಿ, ಧರ್ಮದವರ ಅಂತ್ಯಸಂಸ್ಕಾರಕ್ಕೆ ಜಮೀರ್ ಅಹ್ಮದ್ ಸಹಾಯ ಮಾಡಿದ್ದರು.
ಬದಲಾದ ರಾಜಕೀಯ ಲೆಕ್ಕಾಚಾರ:ಮೇಲ್ನೋಟಕ್ಕೆ ಜಮೀರ್ ಅಹಮ್ಮದ್ ಖಾನ್ ಚಾಮರಾಜಪೇಟೆ ಕ್ಷೇತ್ರದಲ್ಲಿ ಮೇಲುಗೈ ಹೊಂದಿದ್ದಾರೆ. ಆದರೆ, ಈ ಬಾರಿ ಚಾಮರಾಜಪೇಟೆಯ ಅಖಾಡದಲ್ಲಿ ಹೊಸ ಚುಮಾವಣಾ ವಿಚಾರ, ಲೆಕ್ಕಾಚಾರ ಹೊರ ಹೊಮ್ಮಿದೆ. ಇತ್ತ ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಯಾರೂ ಎಂಬುದು ಇನ್ನೂ ಅಂತಿಮವಾಗಿಲ್ಲ. ಜೆಡಿಎಸ್ ಹಾಗೂ ಬಿಜೆಪಿ ತನ್ನ ಹುರಿಯಾಳುಗಳನ್ನು ಕಣಕ್ಕಿಳಿಸಿದ ಬಳಿಕ ಕ್ಷೇತ್ರದ ಚುನಾವಣಾ ರಣಕಣ ರೋಚಕವಾಗಲಿದೆ.
ಈ ಬಾರಿ ಕ್ಷೇತ್ರದ ಚುನಾವಣಾ ಅಜೆಂಡಾ ಬದಲಾಗಿದೆ. ಈದ್ಗಾ ಮೈದಾನ ವಿವಾದ ಈ ಬಾರಿ ಕ್ಷೇತ್ರದ ಪ್ರಮುಖ ಚುಮಾವಣಾ ಅಜೆಂಡಾವಾಗಿದೆ. ಹಾಗಾಗಿ ಈ ಬಾರಿ ಕ್ಷೇತ್ರದ ಚುನಾವಣಾ ಲೆಕ್ಕಾಚಾರ ಸ್ವಲ್ಪ ಬದಲಾವಣೆಯಾಗಿದೆ. ಬಿಜೆಪಿ ಈದ್ಗಾ ಮೈದಾನ ವಿವಾದವನ್ನೇ ಮುಂದಿಟ್ಟುಕೊಂಡೇ ಕಾಂಗ್ರೆಸ್ನ ಜಮೀರ್ ಅಹಮ್ಮದ್ ಅವರನನ್ನು ಹಣಿಯಲು ಕಾರ್ಯತಂತ್ರ ರೂಪಿಸಲಿದೆ. ಗಣೇಶೋತ್ಸವಕ್ಕೆ ಮೈದಾನದಲ್ಲಿ ಅವಕಾಶ ನೀಡದ ಹಾಲಿ ಶಾಸಕ ಜಮೀರ್, ಹಿಂದೂ ವಿರೋಧಿ ಎಂಬ ಅಂಶದೊಂದಿಗೆ ಬಿಜೆಪಿ ಕಣಕ್ಕಿಳಿಯಲಿದೆ.
ಬಿಜೆಪಿಯಿಂದ ಯಾರನ್ನೂ ಕಣಕ್ಕಿಳಿಸಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈದ್ಗಾ ಮೈದಾನ ಅಜೆಂಡಾದೊಂದಿದೆ ಕಣಕ್ಕಿಳಿಯಲಿರುವ ಬಿಜೆಪಿ, ಈ ಬಾರಿ ಅಚ್ವರಿಯ ಪ್ರಬಲ ಅಭ್ಯರ್ಥಿಗೆ ಟಿಕೆಟ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಲಹರಿ ರೆಕಾರ್ಡಿಂಗ್ ಸಂಸ್ಥೆಯ 'ಲಹರಿ ವೇಲು' ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಈದ್ಗಾ ಮೈದಾನದ ಹೋರಾಟದಲ್ಲೂ ಸ್ಥಳೀಯರೊಂದಿಗೆ ವೇಲು ಕಾಣಿಸಿಕೊಂಡಿದ್ದು, ರಾಜಕೀಯಕ್ಕೆ ಬರುವ ಭೂಮಿಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಚಾಮರಾಜಪೇಟೆ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಅಂಬೇಡ್ಕರ್ ಸೇನೆಯ ಅಧ್ಯಕ್ಷ ಸುನಿಲ್‌ಬಾಬು ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೇ ಕ್ಷೇತ್ರದಲ್ಲಿ ಸೈಲೆಂಟ್ ಸುನಿಲ್ ಹೆಸರೂ ಜೋರಾಗಿ ಕೇಳಿ ಬರುತ್ತಿದೆ. ಇದೇ ಕ್ಷೇತ್ರದಲ್ಲಿ ನಡೆದಿದ್ದ ರಕ್ತದಾನ ಶಿಬಿರಕ್ಕೆ ಬಿಜೆಪಿ ಶಾಸಕರು ಹಾಗೂ ಸಂಸದರನ್ನು ಕರೆಸಿ ‘ಸೈಲೆಂಟ್ ಸುನಿಲ್ ಕುಮಾರ್ ಸಂಚಲನ ಸೃಷ್ಟಿಸಿದ್ದರು. ‘ಸೈಲೆಂಟ್ ಸುನಿಲ್’ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟು ಈ ಶಿಬಿರ ಆಯೋಜಿಸಿದ್ದರಲ್ಲದೇ, ಕ್ಷೇತ್ರದಲ್ಲಿ ಅವರ ಪೋಸ್ಟರುಗಳು ರಾರಾಜಿಸುತ್ತಿವೆ.