ಬೆಂಗಳೂರು: ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳ ಸಂಬಳ ಘಟಕವನ್ನು ಡಿ-ಲಿಂಕ್ ಮಾಡಿ, ರಾಜ್ಯದ ನಿವ್ವಳ ಸ್ವಂತ ರಾಜಸ್ವ ಸ್ವೀಕೃತಿಗಳಲ್ಲಿ ಶೇ. 23ರಷ್ಟನ್ನು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಂಚಿಕೆ ಮಾಡುವುದು. ಗ್ರಾಮ ಪಂಚಾಯತ್ಗಳಿಗೆ ಅನ್‌ಟೈಡ್ ಅನುದಾನವನ್ನು ಅವರ ಜನಸಂಖ್ಯೆ ಮತ್ತು ಪ್ರದೇಶದ ಆಧಾರದ ಮೇಲೆ ಎಲ್ಲಾ ಗ್ರಾಮ ಪಂಚಾಯತ್ಗಳಿಗೆ ಕನಿಷ್ಠ 12 ಲಕ್ಷ ರೂ. ನಿಂದ ಗರಿಷ್ಠ 35 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು ಎಂದು ಶಿಫಾರಸು ಮಾಡಲಾಗಿದೆ.
ವಿಧಾನಸಭೆಯಲ್ಲಿಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪಂಚಾಯತ್ ರಾಜ್ ಸಂಸ್ಥೆಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮೇಲಿನ ಸಂಯೋಜಿತ ವಾರ್ಷಿಕ ತಾಂತ್ರಿಕ ಪರಿಶೀಲನಾ ವರದಿಯನ್ನು ಮಂಡಿಸಿದರು. ಈ ವರದಿಯಲ್ಲಿ ಕೆಲವು ಶಿಫಾರಸುಗಳನ್ನು ಮತ್ತು ಮಾರ್ಪಾಡುಗಳನ್ನು ಉಲ್ಲೇಖಿಸಲಾಗಿದೆ.
ಶಾಸನಬದ್ಧ ಅಭಿವೃದ್ಧಿ ಅನುದಾನವನ್ನು ಗ್ರಾಮ ಪಂಚಾಯತ್ಗಳಿಗೆ ಈ ಕೆಳಗಿನಂತೆ ವಿತರಿಸಬೇಕು..
ವರ್ಗ 1 (ಜನಸಂಖ್ಯೆ 4000 ಕ್ಕಿಂತ ಕಡಿಮೆ): ಪ್ರತಿ ಗ್ರಾಮ ಪಂಚಾಯತ್ಗೆ ವರ್ಷಕ್ಕೆ 9 ಲಕ್ಷ ರೂ.
ವರ್ಗ 2 (ಜನಸಂಖ್ಯೆ 4001ರಿಂದ 8000): ಪ್ರತಿ ಗ್ರಾಮ ಪಂಚಾಯತ್ಗೆ ವರ್ಷಕ್ಕೆ 12 ಲಕ್ಷ ರೂ.
ವರ್ಗ 3 (8000 ಕ್ಕಿಂತ ಹೆಚ್ಚಿನ ಜನಸಂಖ್ಯೆ): ಪ್ರತಿ ಗ್ರಾಮ ಪಂಚಾಯತ್ಗೆ ವರ್ಷಕ್ಕೆ 15 ಲಕ್ಷ ರೂ.
ರಾಜ್ಯದ ಸಾಲರಹಿತ ನಿವ್ವಳ ಸ್ವಂತ ರಾಜಸ್ವ ಸ್ವೀಕೃತಿಗಳಲ್ಲಿ ಶೇ. 35 ರಷ್ಟನ್ನು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಂಚಿಕೆ ಮಾಡಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಜಿಲ್ಲಾ, ತಾಲೂಕು ಪಂಚಾಯತ್ಗಳಿಗೆ ಮತ್ತು ಗ್ರಾಮ ಪಂಚಾಯತ್ಗೆ 7.76 ಅನುಪಾತದಲ್ಲಿ ಹಂಚಿಕೆ ಮಾಡಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ರಾಜ್ಯ ಹಣಕಾಸು ಆಯೋಗಗಳ ಮಾರ್ಪಾಡುಗಳ ವಿವರ ಈ ಕೆಳಕಂಡಂತೆ ಇದೆ.
ಇದನ್ನೂ ಓದಿ:ನಿಲುವಳಿ ಸೂಚನೆ ಮಂಡನೆ ವೇಳೆ ಪ್ರತಿಪಕ್ಷ-ಆಡಳಿತ ಪಕ್ಷದ ಮಾತಿನ ವಾಗ್ವಾದ : ನಿಲುವಳಿ ತಿರಸ್ಕರಿಸಿದ ಸ್ಪೀಕರ್
ರಾಜ್ಯದ ಸಾಲ ರಹಿತ ನಿವ್ವಳ ಸ್ವಂತ ರಾಜಸ್ವ ಸ್ವೀಕೃತಿಗಳಲ್ಲಿ ಶೇ. 32 ರಷ್ಟನ್ನು ಪಂಚಾಯತ್ ರಾಜ್ ಸಂಸ್ಥೆಗಳಿಗೆ ನಿಯೋಜಿಸಲಾಗುವುದು. ಇದು ಸಂಬಳ ವೆಚ್ಚವನ್ನು ಒಳಗೊಂಡಿರುತ್ತದೆ. ಪ್ರತಿ ಗ್ರಾಮ ಪಂಚಾಯತ್ಗೆ ವಾರ್ಷಿಕ 8 ಲಕ್ಷ ರೂ. ಅನುದಾನವನ್ನು ಒದಗಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಸಾಲರಹಿತ ನಿವ್ವಳ ಸ್ವಂತ ರಾಜಸ್ವ ಸ್ವೀಕೃತಿಗಳಲ್ಲಿ ಶೇ. 43 ರಿಂದ ಶೇ. 48 ರಷ್ಟನ್ನು ಸ್ಥಳೀಯ ಸಂಸ್ಥೆಗಳಿಗೆ 2018-2019 ರಿಂದ 2022-2023 ರವರೆಗೆ ಹಂತ ಹಂತವಾಗಿ ಹಂಚಿಕೆ ಮಾಡಲಾಗುವುದು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಹಣವನ್ನು ಮೇಲಿನ ಅವಧಿಯಲ್ಲಿ ರಾಜ್ಯದ ಸಾಲ ರಹಿತ ನಿವ್ವಳ ಸ್ವಂತ ರಾಜಸ್ವ ಸ್ವೀಕೃತಿಗಳಲ್ಲಿ ಶೇ. 10.5 ರಿಂದ ಶೇ. 12ಕ್ಕೆ ಹೆಚ್ಚಿಸಲಾಗುವುದು. ಹೀಗೆ ಐದು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಶೇ. 32.5 ರಿಂದ ಶೇ. 36ರವರೆಗೆ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣ ಹಂಚಿಕೆಯಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.