ಕರ್ನಾಟಕ

karnataka

ರಾಜ್ಯ ಸರ್ಕಾರದ ಹಣಕಾಸು ವ್ಯವಹಾರಗಳಲ್ಲಿ ಲೋಪದೋಷ: ಸಿಎಜಿ ವರದಿಯಲ್ಲೇನಿದೆ?

By

Published : Jul 12, 2023, 7:11 AM IST

ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ರಾಜಸ್ವ ಕೊರತೆ, ವಿಲೇವಾರಿಯಾಗದೆ ಬಾಕಿ ಉಳಿದ ಪ್ರಕರಣಗಳು ಹಾಗೂ ಇತರ ವಿಚಾರಗಳ ಬಗ್ಗೆ ಉಲ್ಲೇಖಿಸಲಾಗಿದೆ.

cag-report-mentions-loopholes-in-karnataka-government-financial-affairs
ರಾಜ್ಯ ಸರ್ಕಾರದ ಹಣಕಾಸು ವ್ಯವಹಾರಗಳಲ್ಲಿ ಲೋಪದೋಷ: ಸಿಎಜಿ ವರದಿಯಲ್ಲೇನಿದೆ?

ಬೆಂಗಳೂರು:2021-22ರ ಅಂತ್ಯಕ್ಕೆ 37.37 ಕೋಟಿ ರೂಪಾಯಿ ಮೊತ್ತದ ಹಣ ದುರುಪಯೋಗ, ನಷ್ಟ ಸಂಭವಿಸಿದ್ದು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ತಿಳಿಸಿದೆ. ಮಂಗಳವಾರ ವಿಧಾನಮಂಡಲದ ಉಭಯಸದನದಲ್ಲಿ ಮಾರ್ಚ್ 2022ಕ್ಕೆ ಕೊನೆಗೊಂಡ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಲಾಯಿತು.

ವರದಿಯಲ್ಲಿ ಹಣಕಾಸುಗಳ ವ್ಯವಹಾರದ ವಿಶ್ಲೇಷಣಾತ್ಮಕ ವಿಮರ್ಶೆ ಮಾಡಲಾಗಿದ್ದು, ಐದು ಆಧ್ಯಾಯಗಳಲ್ಲಿ ರಚಿಸಲಾಗಿದೆ. ಅವಲೋಕನ, ರಾಜ್ಯದ ಹಣಕಾಸು ವ್ಯವಹಾರಗಳು, ಆಯವ್ಯಯ ನಿರ್ವಹಣೆ, ಲೆಕ್ಕಗಳ ಗುಣಮಟ್ಟ ಮತ್ತು ಆರ್ಥಿಕ ನಿರೂಪಣಾ ಪದ್ಧತಿಗಳು ಮತ್ತು ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳ ಮೇಲೆ ವರದಿ ಬೆಳಕು ಚೆಲ್ಲಿದೆ. ಅದರಂತೆ 2021-22ರ ಅಂತ್ಯಕ್ಕೆ 37.37 ಕೋಟಿ ರೂ‌. ಮೊತ್ತದ ಹಣದ ದುರುಪಯೋಗ, ನಷ್ಟ ಸೇರಿ 61 ಪ್ರಕರಣಗಳು ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿದೆ ಎಂದು ಸಿಎಜಿ ವರದಿ ಉಲ್ಲೇಖಿಸಿದೆ.

ಅಕ್ರಮ ಗಣಿಗಾರಿಕೆಯಿಂದ ಆದಾಯ ನಷ್ಟ:2017-2018ರವರೆಗೆ 8,29,56,835 ಟನ್​ಗಳಷ್ಟು ಖನಿಜವನ್ನು ಗುತ್ತಿಗೆ ಪ್ರದೇಶದ ಹೊರಗಡೆಯಿಂದ ತೆಗೆಯಲಾಗಿದೆ. ಸುಮಾರು 5,28,85,063 ಟನ್ ಖನಿಜವು ಪರವಾನಗಿ ಇಲ್ಲದೆ ರವಾನೆಯಾಗಿದೆ. ಇದರಿಂದ ಒಟ್ಟು ಆದಾಯ ನಷ್ಟವಾಗಿರುವುದು 1.18 ಕೋಟಿ ರೂಪಾಯಿ ರಾಜಧನ, ದಂಡ ವಸೂಲು ಮಾಡಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿ ತಿಳಿಸಿದೆ.‌

ನಷ್ಟದಲ್ಲಿರುವ ಕಂಪನಿಗಳಲ್ಲಿ ಹೂಡಿಕೆ:ಸರ್ಕಾರ 2018-19ರಿಂದ 2021-22ರವರೆಗೆ ನಿರಂತರವಾಗಿ ನಷ್ಟದಲ್ಲಿರುವ ಕಂಪನಿ/ನಿಗಮಗಳಲ್ಲಿ 42,194.32 ಕೋಟಿ ರೂ. ಹೂಡಿಕೆ ಮಾಡಿದೆ. ಇದರಿಂದ ಒಟ್ಟು ನಷ್ಟ 23,030.09 ಕೋಟಿ ರೂ. ಆಗಿದೆ ಎಂದು ತಿಳಿಸಿದೆ. ರಾಜ್ಯ ಸರ್ಕಾರ ಭಾರಿ ನಷ್ಟದಲ್ಲಿರುವ ಸಾರ್ವಜನಿಕ ವಕಯದ ಉದ್ದಿಮೆಗಳ ಕಾರ್ಯಾಚರಣೆಯನ್ನು ಪರಿಶೀಲಿಸಬೇಕು. ಹೂಡಿಕೆ ಹಿಂತೆಗೆತ, ಪುನಶ್ಚೇತನ, ಮುಚ್ಚುವಿಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದೆ.

ರಾಜಸ್ವ ವೆಚ್ಚದಲ್ಲಿ ಗಣನೀಯ ಏರಿಕೆ:ಒಟ್ಟು ರಾಜಸ್ವ ವೆಚ್ಚದ ಪೈಕಿ ಶೇ 80ರಷ್ಟು ಸಂಬಳ, ಬಡ್ಡಿ ಪಾವತಿ, ಪಿಂಚಣಿ, ಸಹಾಯಧನ, ಹಣಕಾಸಿನ ನೆರವು, ಆಡಳಿತಾತ್ಮಕ ವೆಚ್ಚ ಸೇರಿದಂತೆ ಬದ್ಧವೆಚ್ಚಕ್ಕೆ ಹೋಗುತ್ತದೆ ಎಂದು ಸಿಎಜಿ ವರದಿ ತಿಳಿಸಿದೆ. ಹೀಗಾಗಿ ವೇತನ, ಪಿಂಚಣಿ, ಬಡ್ಡಿ ವೆಚ್ಚ ಅನಿವಾರ್ಯವಾಗಿರುವುದರಿಂದ ಹೆಚ್ಚುತ್ತಿರುವ ಸಹಾಯಧನ, ಸಹಾಯಾನುದಾನ ಮೇಲಿನ ವೆಚ್ಚಗಳ ಮೇಲೆ ಸರ್ಕಾರ ಹೆಚ್ಚಿನ ಗಮನಹರಿಸಬೇಕು ಎಂದು ಸಿಎಜಿ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಸ್ವೀಕೃತಿಯಲ್ಲಿ ಹೆಚ್ಚಳ:2004-2005ನೇ ಸಾಲಿನಿಂದ ರಾಜಸ್ವ ಹೆಚ್ಚಳವನ್ನು ದಾಖಲಿಸಿದ್ದ ರಾಜ್ಯವು 2020-21ರಲ್ಲಿ ಮೊದಲ ಬಾರಿಗೆ ರಾಜಸ್ವ ಕೊರತೆಯನ್ನು ಅನುಭವಿಸಿದ್ದು, 2021-22ನೇ ಸಾಲಿನಲ್ಲಿಯೂ ಮುಂದುವರೆದಿದೆ. ರಾಜಸ್ವ ಕೊರತೆಯು 13,666 ಕೋಟಿ ರೂ. ಆಗಿತ್ತು. ಕಳೆದ ಮೂರು ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಜಿಎಸ್‌ಡಿಪಿಯ ಶೇಕಡ 3ಕ್ಕಿಂತ ಕಡಿಮೆ ಇರುವಂತೆ ಮತ್ತು 2020-21, 2021-2022ರ ಅವಧಿಯಲ್ಲಿ ಶೇಕಡ 4ಕ್ಕಿಂತ ಕಡಿಮೆ ಇರುವಂತೆ ಗಮನಹರಿಸುವಲ್ಲಿ ರಾಜ್ಯ ಯಶಸ್ವಿಯಾಗಿದೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2021-22ರ ಅವಧಿಯಲ್ಲಿ ರಾಜ್ಯ ಸರ್ಕಾರ ತನ್ನ ರಾಜಸ್ವ ಸ್ವೀಕೃತಿಯಲ್ಲಿ ಶೇಕಡ 24.92ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಶೇಕಡ 62ರಷ್ಟು ರಾಜಸ್ವ ಸ್ವೀಕೃತಿಯು ರಾಜ್ಯ ಸ್ವಂತ ತೆರಿಗೆ ಆದಾಯದಿಂದ ಬಂದಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

21 ಇಲಾಖೆಗಳು 25 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಅನುದಾನವನ್ನು ಪಡೆದಿರುವ ಸಂಸ್ಥೆಗಳಿಗೆ ಸಂಬಂಧಪಟ್ಟಂತೆ ಮಾಹಿತಿಯನ್ನು ಒದಗಿಸಿಲ್ಲ. ವೈಯಕ್ತಿಕ ಠೇವಣಿ (ಪಿಡಿ) ಖಾತೆಗಳಲ್ಲಿ ದೊಡ್ಡ ಮೊತ್ತದ ಹಣವನ್ನು ಉಳಿಸಿಕೊಳ್ಳುವುದು, ನಿಷ್ಕ್ರಿಯ ಪಿಡಿ ಖಾತೆಗಳನ್ನು ಮುಕ್ತಾಯಗೊಳಿಸದಿರುವುದು ಮತ್ತು ಬಳಕೆ ಮಾಡದ ಮೊತ್ತವನ್ನು ಸಂಚಿತನಿಧಿಗೆ ವರ್ಗಾವಣೆ ಮಾಡದಿರುವುದು ಶಾಸಕಾಂಗದ ಹಣಕಾಸು ನಿಯಂತ್ರಣ ನೀತಿಗಳಿಗೆ ವಿರುದ್ಧವಾಗಿದೆ. 2020-21ನೇ ಸಾಲಿನಲ್ಲಿ 3,989 ಕೋಟಿ ರೂ. ಇದ್ದ ಪಿಡಿ ಖಾತೆಗಳ ಮುಕ್ತಾಯ ಮೊತ್ತ 2021-22ನೇ ಸಾಲಿನಲ್ಲಿ 4,105 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಲಾಗಿದೆ.

ಹಣ ಲೋಪವಾಗುವುದನ್ನು ತಪ್ಪಿಸಲು ವರ್ಷದ ಕೊನೆಯಲ್ಲಿ ವೆಚ್ಚ ಮಾಡುವುದನ್ನು ತಪ್ಪಿಸಬೇಕು. ನಿರ್ದಿಷ್ಟ ಉದ್ದೇಶಗಳಿಗೆ ಬಿಡುಗಡೆಯಾದ ಅನುದಾನಗಳಿಗೆ ಸಂಬಂಧಿಸಿದಂತೆ ಇಲಾಖೆಗಳು ಬಳಕೆ ಪ್ರಮಾಣಪತ್ರಗಳನ್ನು ನಿಗದಿತ ಸಮಯದಲ್ಲಿ ಸಲ್ಲಿಸುವುದನ್ನು ಸರ್ಕಾರವು ಖಚಿತಪಡಿಸಿಕೊಳ್ಳಬೇಕು. ಸಲ್ಲಿಸದಿರುವ ನಿಯಂತ್ರಣಾಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಎಜಿ ವರದಿ ಸಲಹೆ ನೀಡಿದೆ.

For All Latest Updates

ABOUT THE AUTHOR

...view details