ಕರ್ನಾಟಕ

karnataka

ETV Bharat / state

ಆಶಾದಾಯಕ: ರಾಜ್ಯದಲ್ಲಿ ಸಿಸೇರಿಯನ್​ಗಿಂತ​ ಸಾಮಾನ್ಯ ಹೆರಿಗೆ ಪ್ರಮಾಣವೇ ಹೆಚ್ಚು! - ಸಿಸೇರಿಯನ್​ ಹೆರಿಗೆ

ಇನ್ನೊಂದು ಜೀವಕ್ಕೆ ಜೀವ ಕೊಡುವ ಹೆರಿಗೆ ಪ್ರಕ್ರಿಯೆಯು ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಹೆಣ್ಣು ತನ್ನ ಜೀವನದಲ್ಲೇ ಸಾರ್ಥಕತೆ ಭಾವನೆ ಹೊಂದುವ ಸಮಯವದು. ಆದ್ರೆ ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಆವಿಷ್ಕಾರಗಳಿಂದ ಇಂದು ಅದೆಷ್ಟೂ ಹೆಣ್ಣು ಜೀವಗಳು ಸಿಸೇರಿಯನ್​ ಅಥವಾ ಸಿ-ಸೆಕ್ಷನ್​​ ಪ್ರಸವ ಪ್ರಕ್ರಿಯೆಗೆ ಮೊರೆ ಹೋಗುತ್ತಿದ್ದಾರೆ. ಸಾಮಾನ್ಯ ಹೆರಿಗೆಗೆ ಅವಕಾಶಗಳಿದ್ದರೂ ಕೂಡ ಸಿಸೇರಿಯನ್​ ಪ್ರಸವಕ್ಕೆ ಆದ್ಯತೆ ನೀಡುತ್ತಿದ್ದಾರೆ. ಆದ್ರೆ ಅಂಕಿ-ಅಂಶಗಳ ಪ್ರಕಾರ ಸಿಸೇರಿಯನ್​ ಹೆರಿಗೆಗಿಂತ ಸಾಮಾನ್ಯ ಹೆರಿಗೆಗಳ ಪ್ರಮಾಣವೇ ಹೆಚ್ಚು..

caesarian deliveries lesser than normal deliveries
ಆಶಾದಾಯಕ: ಸಿಸೇರಿಯನ್​ ಹೆರಿಗೆಗೆ ಮೊರೆ ಹೋದರೂ ಸಾಮಾನ್ಯ ಹೆರಿಗೆ ಪ್ರಮಾಣವೇ ಹೆಚ್ಚು!

By

Published : Mar 3, 2021, 2:52 PM IST

ತಾಯ್ತನ ಒಂದು ಅದ್ಭುತ ಅನುಭವ. ಹೆಣ್ಣು ತನ್ನ ಜೀವನದಲ್ಲೇ ಸಾರ್ಥಕತೆ ಹೊಂದುವ ಸಮಯವದು. ಆದ್ರೆ ಹೆರಿಗೆ ಸಮಯದಲ್ಲಿ ಆ ಹೆಣ್ಣು ಜೀವ ಪಡುವ ಕಷ್ಟ ಅಷ್ಟಿಷ್ಟಲ್ಲ. ಹೆರಿಗೆ ನೋವು ತಾಳಲಾರದೆಯೋ ಅಥವಾ ವೈದ್ಯಕೀಯ ಕ್ಷೇತ್ರದ ಆವಿಷ್ಕಾರಕ್ಕೆ ಮಾರು ಹೋಗಿಯೋ ಇದೀಗ ಅದೆಷ್ಟೋ ಮಹಿಳೆಯರು ಸಿಸೇರಿಯನ್​ ಹೆರಿಗೆಗೆ ಒತ್ತು ನೀಡುತ್ತಿದ್ದಾರೆ. ಆದ್ರೆ ಒಂದಿಷ್ಟು ಪ್ರದೇಶಗಳಲ್ಲಿ ಸಾಮಾನ್ಯ ಹೆರಿಗೆ ಪ್ರಮಾಣ ಕೂಡ ಹೆಚ್ಚೇ ಇದೆ. ಅದರಲ್ಲೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಹೆರಿಗೆಯೇ ಹೆಚ್ಚು. ಈ ಕುರಿತ ಅವಲೋಕನ ಇಲ್ಲಿದೆ.

ರಾಜ್ಯ ಮಟ್ಟದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 2018-2019ರಲ್ಲಿ 4,27,305 ಸಾಮಾನ್ಯ ಹೆರಿಗೆ, 1,37,244 ಸಿಸೇರಿಯನ್ ಹೆರಿಗೆ ಆಗಿವೆ. ರಾಜ್ಯ ಮಟ್ಟದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ 2018-2019ರಲ್ಲಿ 2,03,337 ಸಾಮಾನ್ಯ ಹೆರಿಗೆ, 1,42,641 ಸಿಸೇರಿಯನ್ ಹೆರಿಗೆ ಆಗಿವೆ. ಸಾಮಾನ್ಯ ಹೆರಿಗೆ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಸಿಸೇರಿಯನ್ ಹೆರಿಗೆ ಕಡಿಮೆ ಇರುವುದು ಆಶಾದಾಯಕ ಬೆಳವಣಿಗೆ.

ರಾಜ್ಯದಲ್ಲಿ ಸಾಮಾನ್ಯ ಹೆರಿಗೆ ಪ್ರಮಾಣವೇ ಹೆಚ್ಚು

ಸಿಲಿಕಾನ್​ ಸಿಟಿಯಲ್ಲಿ ಸಿಸೇರಿಯನ್​ ಹೆರಿಗೆಗಿಂತ ಸಾಮಾನ್ಯ ಹೆರಿಗೆ ಪ್ರಮಾಣವೇ ಜಾಸ್ತಿ. ಹೌದು, ನಗರದ ವಾಣಿವಿಲಾಸ್​ ಆಸ್ಪತ್ರೆಯಲ್ಲಿ 2021ರ ಜನವರಿಯಲ್ಲಿ 679 ಸಾಮಾನ್ಯ ಹೆರಿಗೆಯಾಗಿದ್ರೆ 485 ಸಿಸೇರಿಯನ್ ಹೆರಿಗೆ ಆಗಿದೆ. ಇನ್ನೂ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಸಿಸೇರಿಯನ್​​​ ಹೆರಿಗೆ ಪ್ರಮಾಣ ಶೇ 56ರಷ್ಟು ಇದ್ದರೆ, ಸಾಮಾನ್ಯ ಹೆರಿಗೆ ಪ್ರಮಾಣ ಶೇ 53ರಷ್ಟು ಇದೆ.

ಇನ್ನೂ ವಿಜಯಪುರ ಜಿಲ್ಲೆಯಲ್ಲಿ ಬಹುತೇಕ ಮಹಿಳೆಯರು ಹೆರಿಗೆ ನೋವು ತಾಳಲಾರದೆ ಸಿಸೇರಿಯನ್ ಮೊರೆ ಹೋಗುತ್ತಿದ್ದಾರೆಂದು ತಿಳಿದುಬಂದಿದೆ. ಪ್ರತಿ ತಿಂಗಳು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿರುವ ಒಟ್ಟು 600 ರಿಂದ 700 ಹೆರಿಗೆಗಳ ಪೈಕಿ 350-370ರಷ್ಟು ಸಿಸೇರಿಯನ್​​ ಮೂಲಕವೇ ಆಗುತ್ತಿವೆ.

ಡಬ್ಲ್ಯೂಹೆಚ್ಓ ನಿಯಮ ಪ್ರಕಾರ ಸಿಸೇರಿಯನ್ ಹೆರಿಗೆ ಪ್ರಕರಣಗಳು ಶೇ 15 ಕ್ಕಿಂತ ಕಡಿಮೆ ಇರಬೇಕು. ಆದ್ರೆ ಬೆಣ್ಣೆನಗರಿ ದಾವಣಗೆರೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇಕಡ 23 ರಷ್ಟು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇ 37 ರಷ್ಟು ಹೆರಿಗೆಗಳು ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮೂಲಕವೇ ನಡೆಯುತ್ತಿವೆ. 2020-21ರಲ್ಲಿ ಒಟ್ಟು 18,020 ಹೆರಿಗೆಗಳಾಗಿದ್ದು, ಅವುಗಳ ಪೈಕಿ 3,347 ಸಿಸೇರಿಯನ್ ಡೆಲಿವರಿಗಳಾಗಿವೆ. ಸಿಸೇರಿಯನ್​​ ಹೆರಿಗೆಗೆ ಮೊರೆ ಹೋಗುತ್ತಿದ್ದರೂ, ಸಾಮಾನ್ಯ ಹೆರಿಗೆಗಳ ಪ್ರಮಾಣ ಹೆಚ್ಚಿರುವುದು ಇಲ್ಲಿ ಗಮನಿಸಲೇಬೇಕಾದ ವಿಷಯ.

ಅದೆಷ್ಟೋ ಗರ್ಭಿಣಿಯರು, ಅವರ ಕುಟುಂಬಸ್ಥರು ಜತೆಗೆ ವೈದ್ಯರು ಸಿಸೇರಿಯನ್​​ ಹೆರಿಗೆಗೆ ಒತ್ತು ನೀಡುತ್ತಿದ್ದರೂ ಕೂಡ ಸಾಮಾನ್ಯ ಹೆರಿಗೆಗಳ ಪ್ರಮಾಣ ಹೆಚ್ಚಿರುವುದು ತಿಳಿದು ಬಂದಿದೆ. ಸಿಸೇರಿಯನ್​ ಹೆರಿಗೆಗಳು ಕುಟುಂಬಕ್ಕೆ ಹೊರೆಯಾಗುತ್ತಿರುವುದರ ಜತೆಗೆ ತಾಯಿ-ಮಗುವಿನ ಮೇಲೂ ಪ್ರಭಾವ ಬೀರುತ್ತದೆ. ಹಾಗಾಗಿ ಸೂಕ್ತ ಕಾರಣಗಳಿಲ್ಲದೇ ಸಿಸೇರಿಯನ್​ ಹೆರಿಗೆ ಮಾಡಿಸುವುದನ್ನು ನಿಯಂತ್ರಿಸಲು ಸರ್ಕಾರ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ.

ABOUT THE AUTHOR

...view details