ಕರ್ನಾಟಕ

karnataka

ETV Bharat / state

ಆನ್​ಲೈನ್ ಜೂಜು ನಿಷೇಧಿಸಲು ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಸಭೆ ತೀರ್ಮಾನ

ಆನ್​ಲೈನ್ ಗ್ಯಾಮ್ಲಿಂಗ್ ನಿಷೇಧಿಸುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಕಂಪ್ಯೂಟರ್, ಮೊಬೈಲ್, ಎಲೆಕ್ಟ್ರಾನಿಕ್ ಸಾಧನ ಬಳಸಿ ಆನ್‌ಲೈನ್ ಮೂಲಕ ಹಣದ ವ್ಯವಹಾರ ನಡೆಯುವ ಜೂಜಾಟವನ್ನು ನಿಷೇಧಿಸಲು ಈ ವಿಧೇಯಕ ತರಲಾಗುತ್ತಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು..

amend Karnataka Police Act to ban online gambling
ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಸಭೆ ತೀರ್ಮಾನ

By

Published : Sep 4, 2021, 3:17 PM IST

Updated : Sep 4, 2021, 8:05 PM IST

ಬೆಂಗಳೂರು :ಆನ್​ಲೈನ್ ಜೂಜು ನಿಷೇಧಿಸುವ ನಿಟ್ಟಿನಲ್ಲಿ ಕರ್ನಾಟಕ‌ ಪೊಲೀಸ್ ಕಾಯ್ದೆಗೆ ತಿದ್ದುಪಡಿ ವಿಧೇಯಕ ತರಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ, ಆನ್​ಲೈನ್ ಗ್ಯಾಮ್ಲಿಂಗ್ ನಿಷೇಧಿಸುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ

ಕಂಪ್ಯೂಟರ್, ಮೊಬೈಲ್, ಎಲೆಕ್ಟ್ರಾನಿಕ್ ಸಾಧನ ಬಳಸಿ ಆನ್‌ಲೈನ್ ಮೂಲಕ ಹಣದ ವ್ಯವಹಾರ ನಡೆಸುವ ಜೂಜಾಟವನ್ನು ನಿಷೇಧಿಸಲು ಈ ವಿಧೇಯಕವನ್ನ ತರಲಾಗುತ್ತಿದೆ.‌ ಈ‌ ಸಂಬಂಧ ಹೈಕೋರ್ಟ್​ನಲ್ಲಿ ರಿಟ್ ಪಿಟಿಷನ್ ಇತ್ತು. ಅದರನ್ವಯ ಇದೀಗ ಮುಂದಿನ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸಲಾಗುವುದು ಎಂದರು.

ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಆನ್​ಲೈನ್ ಗ್ಯಾಂಬ್ಲಿಂಗ್ ಮಟ್ಟ ಹಾಕಲಾಗುತ್ತದೆ. ಹಣದ ವ್ಯವಹಾರ ನಡೆಸುವ, ಎಲೆಕ್ಟ್ರಾನಿಕ್ ಹಣದ ವಹಿವಾಟು ನಡೆಸುವ ಆನ್​ಲೈನ್ ಗೇಮಿಂಗ್ ನಿಷೇಧಿಸುವ ಸಂಬಂಧವೂ ಈ ತಿದ್ದುಪಡಿ ಕಾಯ್ದೆಯಲ್ಲಿ ವ್ಯಾಖ್ಯಾನಿಸಲಾಗಿದೆ.

ಡಿಮಿಲಿಟೇಷನ್ ಕಮಿಷನ್ ರಚನೆಗೆ ನಿರ್ಧಾರ :ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿನ ಡಿಮಿಲಿಟೇಷನ್ ಸಂಬಂಧ ಡಿಮಿಲಿಟೇಷನ್ ಕಮಿಷನ್ ರಚಿಸಲು ಸಂಪುಟ ಸಭೆ ‌ನಿರ್ಧರಿಸಿದೆ. ಆ ಮೂಲಕ ತಾಪಂ, ಜಿಪಂ ಚುನಾವಣೆ ಮುಂದೂಡಲು ಸರ್ಕಾರ ಚಿಂತನೆ ನಡೆಸಿದೆ.

ಈ ಹಿನ್ನೆಲೆ ಪಂಚಾಯತ್ ರಾಜ್ ಡಿ‌ಲಿಮಿಟೇಷನ್ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಪ್ರತ್ಯೇಕ ಡಿಲಿಮಿಟೇಷನ್ ಕಮಿಷನ್ ರಚನೆ‌ ಮಾಡಿ, ನಿವೃತ್ತ ಎಸಿಎಸ್‌ ಆಯೋಗದ ಅಧ್ಯಕ್ಷರಾಗಿರುತ್ತಾರೆ. ಚುನಾವಣೆ ಆಯೋಗದ ಹೊರೆ ಕಡಿಮೆ ಮಾಡುವುದು ಉದ್ದೇಶವಾಗಿದೆ ಎಂದರು.

ಚುನಾವಣಾ ಆಯೋಗ ಮಾಡಿದ ಪುನರ್ ವಿಂಗಡಣೆ ಬಗ್ಗೆ ಆಕ್ಷೇಪಣೆಯನ್ನೇ ಆಲಿಸಿರಲಿಲ್ಲ. ಆಯೋಗಕ್ಕೂ ಮತ್ತು ಪುನರ್ ವಿಂಗಡಣೆಗೂ ಸಂಬಂಧವಿಲ್ಲ. ಯಾರೋ ಬಂದರು, ಜನಸಂಖ್ಯೆ ಆಧಾರ ಇಲ್ಲದೇ ಪುನರ್ ವಿಂಗಡಣೆ ಮಾಡಿದರು. ಇದರಿಂದ ಕೋರ್ಟ್​ನಲ್ಲಿ ಆಕ್ಷೇಪಣೆ ಸಲ್ಲಿಸಲಾಗಿತ್ತು.

ಈಗ ಕ್ಷೇತ್ರ ಮರುವಿಂಗಡನಾ ಆಯೋಗದ ಮೂಲಕ ಹೊಸದಾಗಿ ಮರುವಿಂಗಡನೆ ಆಗಬೇಕಿರುವ ಸಂಬಂಧ ಕೋರ್ಟ್​ಗೆ ವಿವರಣೆ ಕೊಡುತ್ತೇವೆ. ಅನುಮತಿ ಕೊಟ್ಟರೆ ಈಗ ಆಗಿರುವ ಮರುವಿಂಗಡನೆ ಮತ್ತೆ ಪರಿಷ್ಕರಿಸಲಾಗುತ್ತದೆ.

ಡಿಲಿಮಿಟೇಷನ್ ಆಯೋಗದ ಮೂಲಕ ಡಿಸಿ ಲೆವೆಲ್‌ನಲ್ಲಿ ತಕರಾರು ಹಾಗೂ ಆಯೋಗ ಮಟ್ಟದಲ್ಲಿ ತಕರಾರು ತೆಗೆಯಲು ಅವಕಾಶ ನೀಡಲಾಗುತ್ತದೆ. ಈ ಮುಂಚಿನ ವ್ಯವಸ್ಥೆಯಲ್ಲಿ ಆ ಅವಕಾಶ ಇದ್ದಿಲ್ಲ. ಒಂದು ವೇಳೆ ಕೋರ್ಟ್ ಅನುಮತಿ ನೀಡದರೆ, ಮತ್ತೆ ಡಿಮಿಲಿಟೇಷನ್ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಗಣೇಶ ಹಬ್ಬದ ಬಗ್ಗೆ ಎರಡು ದಿನದಲ್ಲಿ ನಿರ್ಧಾರ :ಸಂಪುಟ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ತೆಗೆಯುವ ಬಗ್ಗೆ ಚರ್ಚೆ ನಡೆದಿದೆ. ಮುಂದೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು‌ ಎಂದರು. ಎರಡು ದಿನಗಳಲ್ಲಿ ಗಣೇಶ ಚತುರ್ಥಿ ನಿರ್ಬಂಧ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುವುದು. ಕೋವಿಡ್ ಮಾರ್ಗಸೂಚಿಯನ್ವಯ ಹಬ್ಬ ಹೇಗೆ ಮಾಡಬಹುದು ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಕೋವಿಡ್ ಹೆಚ್ಚಿರುವ ಜಿಲ್ಲೆಗಳಲ್ಲಿ ಡಿಸಿಗಳು, ತಜ್ಞರ ಜೊತೆ ಸಮಾಲೋಚಿಸಿ ಸಿಎಂ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಮೈಸೂರು ಅರಮನೆ ಫೋಟೋ ಶೂಟ್ ಪ್ರಕರಣ ಕೈಬಿಟ್ಟ ಸರ್ಕಾರ :ಭಾರೀ ಸದ್ದು ಮಾಡಿದ್ದ ಮೈಸೂರು ಅರಮನೆ ಫೋಟೋ ಶೂಟ್ ಪ್ರಕರಣ ಹಾಗೂ ಚಿನ್ನದ ಲೇಪನ ಪ್ರಕರಣವನ್ನು ಸಚಿವ ಸಂಪುಟ ಸಭೆ ಕೈ ಬಿಟ್ಟಿದೆ.

ಮೈಸೂರು ಅರಮನೆಯ ಗೋಡೆ ಮತ್ತು ಕಂಬಗಳಿಗೆ ಚಿನ್ನದ ಲೇಪನ ಕಾಮಗಾರಿ ಹಾಗೂ ಆನೆಗಳಿಗೆ ನೆಲಹಾಸು ಹಾಕುವ ಕಾಮಗಾರಿಗಳಲ್ಲಿ ಕರ್ತವ್ಯ ಲೋಪವೆಸಗಿರುತ್ತಾರೆಂಬ ಆರೋಪದ ಮೇಲೆ ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ವಿರುದ್ಧ ಉಪ ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಕಲಂ 12(3)ರಡಿ ಮಾಡಿರುವ ಶಿಫಾರಸ್ಸನ್ನು ತಿರಸ್ಕರಿಸಲು ತೀರ್ಮಾನಿಸಲಾಗಿದೆ.

ಅದೇ ರೀತಿ 2016ರಲ್ಲಿ ಭಾರೀ ಸದ್ದು ಮಾಡಿದ್ದ ಮೈಸೂರು ಅರಮನೆ ಒಳಾಂಗಣ ಮತ್ತು ಹೊರಾಂಗಣದಲ್ಲಿ ಚಿತ್ರೀಕರಣ ಪ್ರಕರಣಕ್ಕೂ ಸಚಿವ ಸಂಪುಟ ಸಭೆ ತಿಲಾಂಜಲಿ ಹಾಡಿದೆ. ಚಿತ್ರೀಕರಣ ಮಾಡಲು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ವಿರುದ್ಧ ಉಪ ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಕಲಂ 12(3)ರಡಿ ಮಾಡಿರುವ ಶಿಫಾರಸ್ಸನ್ನು ತಿರಸ್ಕರಿಸಲು ನಿರ್ಧಾರ ಮಾಡಿದೆ.

ಅರಮನೆಯಲ್ಲಿ ಶೂಟಿಂಗ್​ಗೆ ಅನುಮತಿ‌ ಇದೆ ಎಂಬ ಕಾರಣಕ್ಕೆ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಫ್ಲ್ಯಾಶ್ ಇಲ್ಲದೆ ಚಿತ್ರೀಕರಣ ಮಾಡಲು ಅನುಮತಿ ಇದೆ. ಹೀಗಾಗಿ, ಇದರಲ್ಲಿ ಅಧಿಕಾರಿ ತಪ್ಪಿಲ್ಲ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಸಂಪುಟ ಸಭೆಯ ಪ್ರಮುಖ ತೀರ್ಮಾನವೇನು?:

  • ಹೇಮಾವತಿ ನಾಲೆಯಿಂದ ಚಿಕ್ಕನಾಯಕನಹಳ್ಳಿ ತಾಲೂಕಿನ ಆಯ್ದ 26 ಕೆರೆಗಳಿಗೆ ನೀರನ್ನು ಒದಗಿಸುವ ಯೋಜನೆಯಲ್ಲಿನ ಉಳಿಕೆ ಕಾಮಗಾರಿ ಮತ್ತು ಹೆಚ್ಚುವರಿ ಅಡ್ಡಮೋರಿ ಕಾಮಗಾರಿಗಳ 98.50 ಕೋಟಿ ರೂ. ಮೊತ್ತದ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ.
  • ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಬೀಜೋತ್ಪಾದನಾ ಕಾರ್ಯಗಳಿಗೆ ನೀಡಲಾಗಿದ್ದ 10 ಕೋಟಿ ರೂ. ಕ್ಯಾಷ್ ಕ್ರೆಡಿಟ್ ಸೌಲಭ್ಯವನ್ನು 20 ಕೋಟಿ ರೂ.ಗೆ ಹೆಚ್ಚಿಸಿ, ಸರ್ಕಾರದ ಗ್ಯಾರಂಟಿಯನ್ನು ಮುಂದುವರಿಸಲು ತೀರ್ಮಾನ.
  • ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ಇವರಿಗೆ ರಸಗೊಬ್ಬರ ಕಾಪು ದಾಸ್ತಾನು ಯೋಜನೆಗೆ ಬೇಕಾಗಿರುವ 400 ಕೋಟಿ ರೂ. ದುಡಿಯುವ ಬಂಡವಾಳ ಸಾಲ ಸೌಲಭ್ಯಕ್ಕೆ ಸರ್ಕಾರದ ಗ್ಯಾರಂಟಿಯನ್ನು ನೀಡಲು ನಿರ್ಧಾರ.
  • ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು 2021ಕ್ಕೆ ಅನುಮೋದನೆ
  • ರಾಜ್ಯದಲ್ಲಿ ಬಂಡವಾಳ ಹೂಡಿಕೆಗಾಗಿ ಸಮಾಲೋಚಕರು, ಚಿಂತಕ ಪಾಲುದಾರರಾಗಿರುವ ಮೆ|ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಬಿಸಿಜಿ) ಸೇವೆಯನ್ನು ಮುಂದಿನ 12 ತಿಂಗಳ ಅವಧಿಗೆ ವಿಸ್ತರಿಸಲು ಅಸ್ತು. ವರ್ಷಕ್ಕೆ 12 ಕೋಟಿ ರೂ. ರೆಮ್ಯುನರೇಷನ್‌ನೊಂದಿಗೆ ಅವಧಿ ವಿಸ್ತರಣೆ-ತಾಂತ್ರಿಕ ಶಿಕ್ಷಣ ಇಲಾಖೆಯ 3 ವರ್ಷಗಳ ಡಿಪ್ಲೋಮಾ ಕೋರ್ಸ್ ಶಿಕ್ಷಣವನ್ನು ಪಿಯುಸಿಗೆ ತತ್ಸಮಾನ ವಿದ್ಯಾರ್ಹತೆಯೆಂದು (ಉನ್ನತ ಶಿಕ್ಷಣ ಹಾಗೂ ಅನುಕಂಪದ ಆಧಾರದ ನೇಮಕಾತಿಗೆ) ಪರಿಗಣಿಸಲು ತೀರ್ಮಾನ.
  • ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ- 2021(ಅಧ್ಯಾದೇಶ ಬದಲಿ ವಿಧೇಯಕ)ಗೆ ಅನುಮೋದನೆ.
  • ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ- 2021ಗೆ ಅನುಮೋದನೆ.
  • ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಮನೆಗಳ ಟೆಂಡರ್ ಅನುಮೋದನೆಗೆ ಸಂಬಂಧಿಸಿದಂತೆ 27ನೇ ಹಾಗೂ 28ನೇ ಎಸ್​ಎಲ್​ಎಸ್​ಎಂಸಿ ಸಮಿತಿ ಸಭೆಯಲ್ಲಿ ವಿಧಿಸಿದ ಷರತ್ತುಗಳಿಗೆ ವಿನಾಯಿತಿ ಹಾಗೂ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ 2,928 ಮನೆಗಳ 11 ಟೆಂಡರ್‌ಗಳಿಗೆ ಹಾಗೂ 4,556 ಮನೆಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆಗೆ ಸಂಬಂಧಿಸಿದಂತೆ 13ನೇ ಎಸ್​ಎಲ್ಇಸಿಎಹೆಚ್ ಸಭೆ ವಿಧಿಸಿದ ಷರತ್ತುಗಳಿಗೆ ವಿನಾಯತಿ ನೀಡಲು ನಿರ್ಧಾರ.
  • ಕರ್ನಾಟಕ ಗೃಹ ಮಂಡಳಿಯಿಂದ ಸೂರ್ಯನಗರ 2ನೇ ಹಂತದ ವಸತಿ ಯೋಜನೆಗಾಗಿ ಆನೇಕಲ್ ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿ ಭೂಸ್ವಾಧೀನಕ್ಕೆ ಒಳಪಡಿಸಿರುವ ಒಟ್ಟು ವಿಸ್ತೀರ್ಣ 110-18 ಎಕರೆ ಜಮೀನಿಗೆ ಭೂ ಮಾಲೀಕರ ಕೋರಿಕೆಯಂತೆ ಶೇಕಡಾ 50:50 ಅನುಪಾತದಡಿಯಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ.
  • ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟೂರಾದ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರು ಹೋಬಳಿ ವೀರಪುರ ಗ್ರಾಮದಲ್ಲಿ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರವನ್ನು 25 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಅಸ್ತು. ಕೆ.ಆರ್ ಐಡಿಎಲ್‌ನವರು ಇದನ್ನು ನಿರ್ಮಿಸಲಿದ್ದಾರೆ.
  • ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕಿನ ಸವದತ್ತಿ ಗ್ರಾಮದಲ್ಲಿನ ಒಟ್ಟು 32 ಎಕರೆ ಗಾಯರಾಣ ಜಮೀನನ್ನು ಪವನ್ ವಿದ್ಯುತ್ ಯೋಜನೆಗಾಗಿ ಮ:ರೋಹನ್ ಸೋಲಾರ್ ಪವರ್ ಪ್ರೈವೇಟ್ ಲಿಮಿಟೆಡ್ ಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ತೀರ್ಮಾನ.
  • ಬಂಜಾರ ಭವನ ನಿರ್ಮಾಣಕ್ಕಾಗಿ ಉಪಯೋಗಿಸಿಕೊಂಡಿರುವ ಖಾಸಗಿ ಜಮೀನಿಗೆ ಬದಲಾಗಿ ರಾಯಚೂರು ಜಿಲ್ಲೆಯ ರಾಯಚೂರು ತಾಲ್ಲೂಕಿನ ಸಿದ್ದರಾಂಪೂರ ಗ್ರಾಮದ ಸರ್ವೆ ನಂ.106ರಲ್ಲಿ 4.20 ಎಕರೆ ಸರ್ಕಾರಿ ಜಮೀನನ್ನು ರಾಜೇಶ್ ಪಿ. ಪಾಟೀಲ್ ಎಂಬವರಿಗೆ ಮಂಜೂರು ಮಾಡಲು ಅಸ್ತು.
  • ಭದ್ರಾ ಮೇಲ್ದಂಡೆ ಯೋಜನೆ ಪ್ಯಾಕೇಜ್ 1, 2 ಮತ್ತು 3ರ ಕಾಮಗಾರಿಗಳಿಗೆ ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದನ್ವಯ ಅರ್ಜಿದಾರರ ಮನವಿಗಳನ್ನು ಪರಿಗಣಿಸಿ, ಬೆಲೆ ಮರು ನಿಗದಿಪಡಿಸಲು ತೀರ್ಮಾನ. ಅಜ್ಜಂಪುರ ಮತ್ತು ನರಸಿಂರಾಜಪುರ ತಾಲೂಕುಗಳಲ್ಲಿ ಬೆಲೆ ಮರು ನಿಗದಿ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಸುಮಾರು 1,97,00,000 ಹೆಚ್ಚುವರಿ ವೆಚ್ಚ ಆಗಲಿದೆ.
  • ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಗಳಿಗೆ ಯುಪಿಎಸ್ ಮತ್ತು ಬ್ಯಾಟರಿಗಳನ್ನು 12.65 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಿರುವುದಕ್ಕೆ ಸಚಿವ ಸಂಪುಟದ ಘಟನೋತ್ತರ ಅನುಮೋದನೆ
  • ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಗ್ರಾಮಗಳಲ್ಲಿ ಎರಡು ಜಿಟಿಟಿಸಿ ಕೇಂದ್ರಗಳನ್ನು ನಬಾರ್ಡ್ RIDF-27ರ ಯೋಜನೆಯಡಿ 101.97 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರವನ್ನು ಸ್ಥಾಪಿಸಲು ನಿರ್ಧಾರ
  • 2021-22 ಸಾಲಿನಲ್ಲಿ ರಾಜ್ಯದ ಎಲ್ಲಾ ಐಟಿಐಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ನೀಡಲು 13,061 ಟೂಲ್ ಕಿಟ್‌ಗಳನ್ನು 17.18 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಖರೀದಿಸಿ ವಿತರಿಸಲು ಅಸ್ತು.
  • ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ತಿದ್ದುಪಡಿ) ವಿಧೇಯಕ-2021ಕ್ಕೆ (ಅಧ್ಯಾದೇಶ ಬದಲಿ ವಿಧೇಯಕ) ಅನುಮೋದನೆ.
  • ಮೈಸೂರು ಮಹಾನಗರಪಾಲಿಕೆಯ ವಿದ್ಯಾರಣ್ಯಪುರಂ ಡಂಪ್ ಸೈಟ್‌ನಲ್ಲಿರುವ 3.08 ಲಕ್ಷ ಟನ್‌ಗಳಷ್ಟು ಪಾರಂಪರಿಕ ತ್ಯಾಜ್ಯದ ಬಯೋಮೈನಿಂಗ್‌ನ ಅಂದಾಜು 14.38 ಕೋಟಿ ರೂ. ಮೊತ್ತದ ವಿಸ್ತತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ
  • ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಜಕ್ಕೂರಿನಲ್ಲಿ ರಾಜೀವ್ ಗಾಂಧಿ ಏರೋ ಸ್ಪೋರ್ಟ್ಸ್‌ ಸೊಸೈಟಿ ಸ್ಥಾಪನೆ ಮಾಡಿರುವ ಆದೇಶವನ್ನು ಹಿಂಪಡೆದು, ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ನಿರ್ಧಾರ
  • ಮೂರನೇ ಅಲೆ ನಿರ್ವಹಣೆ ಸಂಬಂಧ ವಿವಿಧ ಔಷಧಿಗಳ ಖರೀದಿಗಾಗಿ 17.72 ಕೋಟಿ ರೂ. ಮೊತ್ತಕ್ಕೆ ಅನುಮೋದನೆ
Last Updated : Sep 4, 2021, 8:05 PM IST

ABOUT THE AUTHOR

...view details