ಬೆಂಗಳೂರು: ಕಪ್ಪತ್ತಗುಡ್ಡ, ಬುಕ್ಕಾಪಟ್ಟಣ, ಕಾಮಸಂದ್ರ, ನಾಗರಹೊಳೆ ಹಾಗು ಕಾವೇರಿ ವಿಸ್ತರಿತ ವನ್ಯಜೀವಿ ಧಾಮ ಸೇರಿದಂತೆ ರಾಜ್ಯದ 6 ಅರಣ್ಯ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಲು ಇಂದು ವಿಧಾನಸೌಧದಲ್ಲಿ ನಡೆದ ಸಂಪುಟ ಉಪ ಸಮಿತಿ ಸಭೆ ತಾತ್ವಿಕ ಅನುಮೋದನೆ ನೀಡಿದೆ.
ಅರಣ್ಯ ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭಾರತ ಸರ್ಕಾರ 2011ರಲ್ಲಿ ಹೊರಡಿಸಿರುವ ಮಾರ್ಗಸೂಚಿ ಮತ್ತು ಕೇಂದ್ರ ಅರಣ್ಯ ಪರಿಸರ ಸಚಿವಾಲಯದ ಮಾರ್ಗಸೂಚಿಗಳನ್ವಯ ಈ ವಲಯಗಳಲ್ಲಿ ಉತ್ತೇಜಕ ಚಟುವಟಿಕೆ, ನಿರ್ಬಂಧಿತ ಚಟುವಟಿಕೆ ಮತ್ತು ನಿಷೇಧಿತ ಚಟುವಟಿಕೆ ಎಂದು ವರ್ಗೀಕರಿಸಲಾಗಿದೆ.
ಗೋದವರ್ಮನ್ ವಿರುದ್ಧ ಭಾರತ ಸರ್ಕಾರದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದ ಅನುಸಾರ ಅರಣ್ಯ ಸಂರಕ್ಷಿತ ಪ್ರದೇಶಗಳಾದ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಧಾಮಗಳ ಸುತ್ತಮುತ್ತ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡುವುದು ಅಗತ್ಯ ಎಂದು ಸಭೆಗೆ ತಿಳಿಸಲಾಯಿತು.
ಕಪ್ಪತ್ತಗುಡ್ಡ ವನ್ಯಜೀವಿಧಾಮದ ವಿಸ್ತೀರ್ಣ 244.15 ಚದರ ಕಿಲೋ ಮೀಟರ್ ಇದ್ದು, ಇದರಲ್ಲಿ ಒಟ್ಟು 322.695 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ (ಇಎಸ್ ಝಡ್) ಪ್ರಸ್ತಾಪಿಸಲಾಗಿದೆ. ಈ ಪೈಕಿ 23.804 ಚ.ಕಿ.ಮೀ ಅರಣ್ಯ ಪ್ರದೇಶ ಮತ್ತು 298.890 ಚ.ಕಿ.ಮೀ. ಅರಣ್ಯೇತರ ಪ್ರದೇಶ ಸೇರಿದೆ.
ಬುಕ್ಕಾಪಟ್ಟಣದಲ್ಲಿ ಚಿಂಕಾರ ವನ್ಯಜೀವಿ ಧಾಮದ ಒಟ್ಟು ವಿಸ್ತೀರ್ಣ 136.11 ಚದರ ಕಿ.ಮೀಟರ್ ಇದ್ದು, ಅದರ ಒಟ್ಟು ಪರಿಸರ ಸೂಕ್ಷ್ಮ ಪ್ರದೇಶ 157.0862 ಚ.ಕಿ.ಮೀ. ಪ್ರಸ್ತಾಪಿಸಲಾಗಿದೆ.ಅರಣ್ಯ ಪ್ರದೇಶ 18.5662 ಚ.ಕಿ.ಮೀ. ಆದರೆ, ಅರಣ್ಯೇತರ ಪ್ರದೇಶ 138.52 ಚ.ಕಿ.ಮೀ ಎಂದು ತಿಳಿಸಲಾಯಿತು.
ಕಾಮಸಂದ್ರ ವನ್ಯಜೀವಿ ಧಾಮದ ಒಟ್ಟು ವಿಸ್ತೀರ್ಣ 78.62 ಚ.ಕಿ.ಮೀ. ಇದ್ದು, ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿ 93.27 ಚ.ಕಿ.ಮೀಟರ್ ಎಂದು ಪ್ರಸ್ತಾಪಿಸಲಾಗಿದೆ. ಅದರಲ್ಲಿ ಅರಣ್ಯೇತರ ಇ.ಎಸ್.ಝಡ್ ವ್ಯಾಪ್ತಿ 93.27 ಆಗಿದೆ.
ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ (ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶ) ಒಟ್ಟು ವಿಸ್ತೀರ್ಣ 643.39 ಚ.ಕಿ.ಮೀ ಆಗಿದ್ದು, ಅದರ ಪರಿಸರ ಸೂಕ್ಷ್ಮ ಪ್ರದೇಶ 573.97 ಪ್ರಸ್ತಾಪಿಸಲಾಗಿದೆ. ಅದರಲ್ಲಿ 302.36 ಅರಣ್ಯ ಮತ್ತು 271.61 ಅರಣ್ಯೇತರ ಪ್ರದೇಶವಿದೆ ಎಂದು ಸಂಪುಟ ಉಪ ಸಮಿತಿ ಸಭೆಯಲ್ಲಿ ತಿಳಿಸಲಾಯಿತು.
ಅಣಶಿ ರಾಷ್ಟ್ರೀಯ ಉದ್ಯಾನ ಮತ್ತು ದಾಂಡಿ ವನ್ಯಜೀವಿಧಾಮದಲ್ಲಿ 669.06 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಪ್ರಸ್ತಾಪಿಸಲಾಗಿದೆ. 448.81 ಚ.ಕಿ.ಮೀ ಅರಣ್ಯ ಮತ್ತು 220.25 ಅರಣ್ಯೇತರ ಪ್ರದೇಶವಾಗಿದೆ. ಕಾವೇರಿ ವಿಸ್ತರಿತ ವನ್ಯಜೀವಿ ಧಾಮದಲ್ಲಿ 53.39 ಚ.ಕಿ.ಮೀ. ಅರಣ್ಯ ವಿಸ್ತೀರ್ಣವಿದ್ದು, ಅದರಲ್ಲಿ145.369 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಪ್ರಸ್ತಾಪಿಸಲಾಗಿದೆ. ಈ ಪೈಕಿ 143.663 ಅರಣ್ಯ ಮತ್ತು 1.706 ಚ.ಕಿ.ಮೀ. ಅರಣ್ಯೇತರ ಪ್ರದೇಶ ಎಂದು ತಿಳಿಸಲಾಯಿತು.
ಪರಿಸರ ಸೂಕ್ಷ್ಮ ವಲಯಗಳ ಅಧಿಸೂಚನೆ ಹೊರಡಿಸುವ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಚಿಸಲಾದ ಸಚಿವ ಸಂಪುಟದ ಉಪಸಮಿತಿಯ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಕಂದಾಯ ಸಚಿವ ಕೃಷ್ಣಭೈರೇಗೌಡ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮೀನುಗಾರಿಕೆ ಸಚಿವ ಮಾಂಕಾಳ ವೈದ್ಯ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
ಪರಿಹಾರದ ಚೆಕ್ ವಿತರಣೆ: ಇದೇ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಆಲೂರು ಬಳಿ ಗಾಯಗೊಂಡಿದ್ದ ಆನೆಗೆ (ಭೀಮ) ಅರಿವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಆನೆ ದಾಳಿಗೆ ಒಳಗಾಗಿ ಮೃತಪಟ್ಟಿದ್ದ ಶಾರ್ಪ್ ಶೂಟರ್ ಎಚ್.ಎಚ್.ವೆಂಕಟೇಶ್ ಅವರ ಪುತ್ರ ಮೋಹಿತ್ ಮತ್ತು ಮಿಥುನ್ ಅವರಿಗೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು 10 ಲಕ್ಷ ರೂ ಪರಿಹಾರದ ಚೆಕ್ ನೀಡಿ ಸಾಂತ್ವನ ಹೇಳಿದರು. ನಿಯಮಾನುಸಾರ ಈಗಾಗಲೇ ಮೃತ ವೆಂಕಟೇಶ್ ಅವರು ಪತ್ನಿ ಜಿ.ಎಸ್.ಮಂಜುಳಾ ಅವರಿಗೆ ಅರಣ್ಯ ಸಚಿವರು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದ ವೇಳೆ 15 ಲಕ್ಷ ರೂ. ಚೆಕ್ ವಿತರಿಸಿದ್ದರು.
ಇದನ್ನೂಓದಿ:ಮೈಸೂರು ದಸರಾ: 10 ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳು- ಸಂಪೂರ್ಣ ವಿವರ..