ಕರ್ನಾಟಕ

karnataka

ETV Bharat / state

ಪರಿಷತ್ ಚುನಾವಣೆ ನಂತರ ಸಂಪುಟ ಪುನಾರಚನೆ.. ಬಿ ವೈ ವಿಜಯೇಂದ್ರಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ!?

2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯಡಿಯೂರಪ್ಪ ಬೆಂಬಲವಿಲ್ಲದೆ ಗೆಲುವು ಕಷ್ಟಸಾಧ್ಯ ಎಂದು ಮನಗಂಡಿರುವ ಹೈಕಮಾಂಡ್ ನಾಯಕರು ಇದೀಗ ಯಡಿಯೂರಪ್ಪ ಅವರನ್ನು ಮುಂದಿಟ್ಟುಕೊಂಡೆ ಚುನಾವಣೆ ನಡೆಸಬೇಕು. ಅದಕ್ಕೆ ಪುತ್ರನನ್ನೇ ಸಂಪುಟಕ್ಕೆ ತೆಗೆದುಕೊಳ್ಳುವುದರಿಂದ ಹೆಚ್ಚಿನ ಲಾಭವಾಗಲಿದೆ ಎನ್ನುವ ನಿಲುವಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ..

Vijayendra expected for cabinet post
ಸಂಪುಟ ಸ್ಥಾನ ನಿರೀಕ್ಷೆಯಲ್ಲಿ ವಿಜಯೇಂದ್ರ

By

Published : Dec 3, 2021, 7:17 PM IST

ಬೆಂಗಳೂರು :ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾದ ನಂತರ ಮೊದಲ ಬಾರಿಗೆ ಸಂಪುಟ ಪುನಾರಚನೆ ವಿಷಯ ಮುನ್ನಲೆಗೆ ಬಂದಿದೆ. ಭವಿಷ್ಯದ ಚುನಾವಣೆ ದೃಷ್ಟಿಯಿಂದ ಅಸಮರ್ಥರನ್ನು ಕೈಬಿಟ್ಟು ಸಮರ್ಥರಿಗೆ ಮಣೆ ಹಾಕುವುದು ಹಾಗೂ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರರನ್ನ ಸಂಪುಟಕ್ಕೆ ತೆಗೆದುಕೊಳ್ಳುವುದು. ಆ ಮೂಲಕ ಬಿಎಸ್​ವೈ ಅಭಿಮಾನಿಗಳ ಮತ ಬ್ಯಾಂಕ್ ಉಳಿಸಿಕೊಳ್ಳುವ ಕುರಿತು ಪಕ್ಷದ ವಲಯದಲ್ಲಿ ಗಂಭೀರ ಚರ್ಚೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ನಾಲ್ಕು ತಿಂಗಳು ಕಳೆಯುವುದರಲ್ಲಿಯೇ ಸಂಪುಟ ಪುನಾರಚಣೆ ಕುರಿತ ಮಾತುಗಳು ಕೇಳಿ ಬರುತ್ತಿವೆ. ರಾಜ್ಯದ 20 ಸ್ಥಳೀಯ ಸಂಸ್ಥೆಗಳ 25 ವಿಧಾನ ಪರಿಷತ್ ಸ್ಥಾನಕ್ಕೆ ಡಿಸೆಂಬರ್ 10ರಂದು ಚುನಾವಣೆ ನಡೆಯುತ್ತಿದೆ. ಪರಿಷತ್‌​ ಎಲೆಕ್ಷನ್​ ನಂತರ ಸಂಪುಟ ಪುನಾರಚನೆಗೆ ಬೊಮ್ಮಾಯಿ ಕೈ ಹಾಕಲಿದ್ದಾರೆ.

ಸಚಿವರ ಪ್ರಗತಿ ವರದಿ :ಈಗಾಗಲೇ ಹೈಕಮಾಂಡ್ ಬೊಮ್ಮಾಯಿ ಸಂಪುಟ ಸದಸ್ಯರ ಕಾರ್ಯ ನಿರ್ವಹಣೆ ಕುರಿತು ಪ್ರಗತಿ ವರದಿ ತರಿಸಿಕೊಂಡಿದ್ದಾರೆ. ಅದರಲ್ಲಿ 6-8 ಸಚಿವರ ಬಗ್ಗೆ ನಕಾರಾತ್ಮಕ ಅಂಶಗಳಿವೆ. ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪಗಳಿವೆ.

ಇಂತಹವರನ್ನು ಸಂಪುಟದಿಂದ ಕೈಬಿಟ್ಟು 2023ರಲ್ಲಿ ಪಕ್ಷಕ್ಕೆ ಅನುಕೂಲಕರ ವಾತಾವರಣ ಸೃಷ್ಟಿ ಮಾಡಬಲ್ಲ ಪಕ್ಷ ನಿಷ್ಠಾವಂತರು, ಹಿರಿಯರಿಗೆ ಮಣೆ ಹಾಕುವ ಚಿಂತನೆ ಪಕ್ಷದಲ್ಲಿದೆ. ಈ ಸಂಬಂಧ ಹೈಕಮಾಂಡ್ ನಾಯಕರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಯಲ್ಲಿಯೂ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಡಿಸೆಂಬರ್ 10ರ ಪರಿಷತ್ ಚುನಾವಣೆ ನಂತರ ಸಂಪುಟದಲ್ಲಿ ಬದಲಾವಣೆ ಸಾಧ್ಯತೆ ಇದೆ. ಅಧಿವೇಶನ ಮುಗಿಯುತ್ತಿದ್ದಂತೆ ಸಂಪುಟಕ್ಕೆ ಹೊಸ ಮುಖಗಳ ಪರಿಚಯವಾಗಲಿದೆ. ಹೊಸ ವರ್ಷಕ್ಕೆ ಬೊಮ್ಮಾಯಿ ಸಂಪುಟ ಪುನಾರಚನೆ ಬಹುತೇಕ ಆಗಲಿದೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.

ಬಿಎಸ್​ವೈ ಪುತ್ರನಿಗೆ ಮಣೆ :ಇನ್ನು ಈ ಬಾರಿ ಸಂಪುಟ ಪುನಾರಚನೆಯಾದಲ್ಲಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರಗೆ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ. ಸದ್ಯ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ವಿಜಯೇಂದ್ರ ಮಾಸ್ ಲೀಡರ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಎರಡು ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಗಮನ ಸೆಳೆದಿದ್ದಾರೆ.

ಪ್ರತಿ ಚುನಾವಣೆಯಲ್ಲಿಯೂ ಸಂಘಟನಾತ್ಮಕವಾಗಿ ಕೆಲಸ ಮಾಡಿ ಯಡಿಯೂರಪ್ಪನವರ ಉತ್ತರಾಧಿಕಾರಿಯಾಗುವ ಲಕ್ಷಣಗಳು ವಿಜಯೇಂದ್ರರಲ್ಲಿ ಕಾಣುತ್ತಿವೆ. ಹೋದಲ್ಲೆಲ್ಲಾ ಮಾಸ್ ಇಮೇಜ್ ಬೆಳೆಸಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಲಿಂಗಾಯತ ಸಮುದಾಯ ಹಾಗೂ ಯಡಿಯೂರಪ್ಪ ಬೆಂಬಲಿಗರ ಪಡೆ ಪಕ್ಷದ ವಿರುದ್ಧ ಅಸಮಾಧಾನಗೊಂಡಿದೆ.

ವಿಜಯೇಂದ್ರಗೆ ಸಂಪುಟದಲ್ಲಿ ಅವಕಾಶ ನೀಡುವ ಮೂಲಕ ಯಡಿಯೂರಪ್ಪನವರ ಅಭಿಮಾನಿಗಳು,ಬೆಂಬಲಿಗರು ಮತ್ತು ಲಿಂಗಾಯತ ಸಮುದಾಯದ ಅಸಮಾಧಾನ ಶಮನಕ್ಕೆ ಪಕ್ಷ ಚಿಂತನೆ ನಡೆಸಿದೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಕಡೆಗಣಿಸಿದ ಪರಿಣಾಮವನ್ನು ಹಾನಗಲ್ ಸೋಲಿನ ಮೂಲಕ ಪಕ್ಷ ಎದುರಿಸಿದೆ.

ಆಡಳಿತಾರೂಢ ಪಕ್ಷ ಸ್ವತಃ ಸಿಎಂ ತವರು ಜಿಲ್ಲೆಯಲ್ಲೇ ತನ್ನ ಕ್ಷೇತ್ರವನ್ನು ಗೆಲ್ಲಲು ವಿಫಲವಾಯಿತು. ಇದರಿಂದ ಎಚ್ಚೆತ್ತಿರುವ ಬಿಜೆಪಿ ನಾಯಕರು ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಪರಿಷತ್ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಮೂಲಕ ತಪ್ಪು ತಿದ್ದಿಕೊಳ್ಳುತ್ತಿದ್ದಾರೆ.

2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯಡಿಯೂರಪ್ಪ ಬೆಂಬಲವಿಲ್ಲದೆ ಗೆಲುವು ಕಷ್ಟಸಾಧ್ಯ ಎಂದು ಮನಗಂಡಿರುವ ಹೈಕಮಾಂಡ್ ನಾಯಕರು ಇದೀಗ ಯಡಿಯೂರಪ್ಪ ಅವರನ್ನು ಮುಂದಿಟ್ಟುಕೊಂಡೆ ಚುನಾವಣೆ ನಡೆಸಬೇಕು. ಅದಕ್ಕೆ ಪುತ್ರನನ್ನೇ ಸಂಪುಟಕ್ಕೆ ತೆಗೆದುಕೊಳ್ಳುವುದರಿಂದ ಹೆಚ್ಚಿನ ಲಾಭವಾಗಲಿದೆ ಎನ್ನುವ ನಿಲುವಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ.

ವಿಧಾನಸಭೆ ಸ್ಪರ್ಧೆಗೆ ವಿಜಯೇಂದ್ರ ಒಲವು :ವಿಜಯೇಂದ್ರರನ್ನು ಸಂಪುಟಕ್ಕೆ ಪಡೆದು ವಿಧಾನ ಪರಿಷತ್ ಸ್ಥಾನ ನೀಡಬೇಕು ಎಂದು ಬಿಜೆಪಿ ಚಿಂತನೆ ನಡೆಸಿರುವ ಬೆನ್ನಲ್ಲೇ ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ವರುಣಾ ಕ್ಷೇತ್ರದ ಟಿಕೆಟ್ ಕೊನೆ ಕ್ಷಣದಲ್ಲಿ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ವಿಜಯೇಂದ್ರ, ಚುನಾವಣಾ ರಾಜಕೀಯದ ಕಡೆಗಿನ ಗಮನ ಬಿಟ್ಟು ಸಂಘಟನಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು.

ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ, ಈಗ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದು, ಸಂಘಟನೆಯಿಂದ ಈಗ ಮತ್ತೆ ಚುನಾವಣಾ ರಾಜಕೀಯದತ್ತ ಒಲವು ವ್ಯಕ್ತಪಡಿಸಿದ್ದಾರೆ. 2023ಕ್ಕೆ ರಾಜ್ಯದ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಆದರೆ, ಯಾವ ಕ್ಷೇತ್ರ ಎನ್ನುವುದನ್ನು ಪಕ್ಷ ನಿರ್ಧರಿಸಲಿದೆ ಎಂದು ವಿಜಯೇಂದ್ರ ಬಹಿರಂಗವಾಗಿಯೇ ಹೇಳಿದ್ದಾರೆ. ಹೀಗಾಗಿ, ಪರಿಷತ್ ಮೂಲಕ ವಿಜಯೇಂದ್ರ ಸಂಪುಟ ಸೇರಲಿದ್ದಾರೋ ಅಥವಾ ಸಂಪುಟದಿಂದ ಹೊರಗಿದ್ದು ಮುಂಬರಲಿರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ನಿರ್ಧಾರಕ್ಕೆ ಬದ್ಧವಾಗಿರುತ್ತಾರೋ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಕೋವಿಡ್​​ ರೂಪಾಂತರಿ Omicron​ ಭೀತಿ: ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ

ABOUT THE AUTHOR

...view details