ಕರ್ನಾಟಕ

karnataka

ETV Bharat / state

ಬಿಎಸ್​​​ವೈ ಸಂಪುಟ ಭರ್ತಿ: 12 ಜಿಲ್ಲೆಗಳಿಗಿಲ್ಲ ಕ್ಯಾಬಿನೆಟ್ ಪ್ರಾತಿನಿಧ್ಯ!

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಂಪುಟ ಬಹುತೇಕ ಭರ್ತಿಯಾಗಿದೆ. ಆದರೂ ರಾಜ್ಯದ 12 ಜಿಲ್ಲೆಗಳಿಗೆ ಕ್ಯಾಬಿನೆಟ್​​​ನಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ.

By

Published : Jan 13, 2021, 6:37 PM IST

Updated : Jan 13, 2021, 8:35 PM IST

cabinet-representation
ಬಿ.ಎಸ್. ಯಡಿಯೂರಪ್ಪನವರ ಸಂಪುಟ

ಬೆಂಗಳೂರು: ಒಂದು ಸ್ಥಾನ ಹೊರತುಪಡಿಸಿದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಂಪುಟ ಬಹುತೇಕ ಭರ್ತಿಯಾಗಿದೆ. ಆದರೂ ರಾಜ್ಯದ 12 ಜಿಲ್ಲೆಗಳಿಗೆ ಕ್ಯಾಬಿನೆಟ್​​​ನಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ.

ಒಟ್ಟು 34 ಸಂಖ್ಯಾಬಲದ ಮಂತ್ರಿಮಂಡಲದಲ್ಲಿ ಇಂದು ನಡೆದ ಸಚಿವ ಸಂಪುಟ ವಿಸ್ತರಣೆಯಿಂದ 33 ಸ್ಥಾನ ಭರ್ತಿಯಾದಂತಾಗಿದೆ. ಆದರೆ ರಾಜ್ಯದ ಹೆಚ್ಚಿನ ಜಿಲ್ಲೆಗಳಿಗೆ ಸಚಿವ ಭಾಗ್ಯ ದೊರೆತಿಲ್ಲ.

28 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ಮಹಾನಗರಕ್ಕೆ 8 ಸಚಿವ ಸ್ಥಾನ (ಸುರೇಶ್ ಕುಮಾರ್, ಆರ್.ಅಶೋಕ್, ಅಶ್ವತ್ಥ ನಾರಾಯಣ, ವಿ.ಸೋಮಣ್ಣ, ಅರವಿಂದ ಲಿಂಬಾವಳಿ, ಭೈರತಿ ಬಸವರಾಜ್​, ಎಸ್.ಟಿ.ಸೋಮಶೇಖರ್, ಎಸ್​ ಗೋಪಾಲಯ್ಯ) 18 ವಿಧಾನಸಭಾ ಕ್ಷೇತ್ರ ಹೊಂದಿರುವ ಬೆಳಗಾವಿ ಜಿಲ್ಲೆಗೆ 5 ಸಚಿವ ಸ್ಥಾನ (ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ಶ್ರೀಮಂತ ಪಾಟೀಲ್, ಉಮೇಶ್​ ಕತ್ತಿ) ದೊರೆತಂತಾಗಿವೆ. ಚಿಕ್ಕ ಜಿಲ್ಲೆಗಳಲ್ಲಿ ಒಂದಾದ ಹಾವೇರಿ ಜಿಲ್ಲೆಗೆ 3 ಸಚಿವ ಸ್ಥಾನ (ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ್, ಆರ್.ಶಂಕರ್) ಲಭಿಸಿದೆ.

ಬಿಜೆಪಿಯ ಮೊದಲ ಸರ್ಕಾರದಲ್ಲಿ ಪ್ರಾಬಲ್ಯ ಸಾಧಿಸಿದ್ದ ಬಳ್ಳಾರಿ ಜಿಲ್ಲೆಗೆ ಸಂಪುಟದಲ್ಲಿ ಯಾವುದೇ ಪ್ರಾತಿನಿಧ್ಯ ದೊರೆತಿಲ್ಲ. ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮೂಲತಃ ಬಳ್ಳಾರಿ ಜಿಲ್ಲೆಯವರಾದರೂ ಅವರು ಪ್ರತಿನಿಧಿಸುವ ಮೊಳಕಾಲ್ಮೂರು ವಿಧಾನಸಭೆ ಕ್ಷೇತ್ರ ಚಿತ್ರದುರ್ಗ ಜಿಲ್ಲೆಗೆ ಸೇರಿದ್ದರಿಂದ ಬಳ್ಳಾರಿ ಜಿಲ್ಲೆ ಸಚಿವ ಸ್ಥಾನದಿಂದ ವಂಚಿತಗೊಂಡಿದೆ.

ಸಚಿವ ಸ್ಥಾನ ಪ್ರಾತಿನಿಧ್ಯ ಇಲ್ಲದ ಜಿಲ್ಲೆಗಳು

  • ಮೈಸೂರು
  • ಚಾಮರಾಜನಗರ
  • ಕೊಡಗು
  • ಕೋಲಾರ
  • ಬಳ್ಳಾರಿ
  • ದಾವಣಗೆರೆ
  • ಚಿಕ್ಕಮಗಳೂರು
  • ಯಾದಗಿರಿ
  • ಕಲಬುರಗಿ
  • ರಾಯಚೂರು
  • ವಿಜಯಪುರ
  • ಕೊಪ್ಪಳ

ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿನಿಧಿಸುವ ಶಿವಮೊಗ್ಗ ಜಿಲ್ಲೆಗೆ ಎರಡು ಪ್ರಾತಿನಿಧ್ಯ ಸಿಕ್ಕಿದೆ. ಕೆ.ಎಸ್.ಈಶ್ವರಪ್ಪ ಈ ಜಿಲ್ಲೆಯ ಮತ್ತೊಬ್ಬ ಮಂತ್ರಿಯಾಗಿದ್ದಾರೆ.

ಆಪರೇಶನ್ ಕಮಲದಿಂದಾಗಿ ವಲಸೆ ಬಂದವರಿಗೆ ಸಚಿವ ಸ್ಥಾನ ನೀಡುವ ಭರವಸೆಯಿಂದಾಗಿ ಎಲ್ಲಾ ಜಿಲ್ಲೆಗಳಿಗೆ ಸಚಿವ ಸ್ಥಾನದ ಪ್ರಾತಿನಿಧ್ಯ ನೀಡಲಾಗಿಲ್ಲ ಎನ್ನುವ ಸಮರ್ಥನೆಯನ್ನ ಪಕ್ಷದ ಮುಖಂಡರು ನೀಡುತ್ತಾರೆ. ಆದರೂ ಬೆಂಗಳೂರು ನಗರಕ್ಕೆ 8, ಬೆಳಗಾವಿ ಜಿಲ್ಲೆಗೆ 5 ಹಾವೇರಿ ಜಿಲ್ಲೆಗೆ 3 ಸಚಿವ ಸ್ಥಾನದ ಪ್ರಾತಿನಿಧ್ಯ ನೀಡಿದ್ದಕ್ಕೆ ಸಮರ್ಥನೀಯ ಕಾರಣಗಳನ್ನು ಕೊಡಲಾಗುತ್ತಿಲ್ಲ.

Last Updated : Jan 13, 2021, 8:35 PM IST

ABOUT THE AUTHOR

...view details