ಬೆಂಗಳೂರು: ಕಾವೇರಿ ನದಿ ನೀರು ಬಿಡುಗಡೆ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ರೈತರ ಹಿತ ರಕ್ಷಣೆಯನ್ನೂ ಮಾಡಲಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಕಾವೇರಿ ನದಿ ನೀರು ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ಆಗಿರುವ ವಿಚಾರಣೆಯನ್ನು ಎಎಜಿ ಸಂಪುಟ ಸಭೆಯಲ್ಲಿ ವಿವರಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲಾಗುವುದು. ಸೆ.26ರವರೆಗೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗುವುದು. 8000 ಕ್ಯುಸೆಕ್ಸ್ ಒಳಹರಿವು ಇದೆ. ಈಗಾಗಲೇ 3,000-3,500 ಕ್ಯುಸೆಕ್ಸ್ ನೀರು ಹರಿದು ಹೋಗುತ್ತಿದೆ. ಸೆ.26 ತನಕ ನೀರು ಬಿಡಲಾಗುತ್ತದೆ. ನಾವು ರೈತರ ಹಿತರಕ್ಷಣೆಯನ್ನೂ ಮಾಡುತ್ತೇವೆ. ಕುಡಿಯುವ ನೀರಿನ ರಕ್ಷಣೆಯನ್ನು ಮಾಡುತ್ತೇವೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಮೇಕೆದಾಟು ಯೋಜನೆ ಜಾರಿಗೆ ಕ್ರಮ:ಮೇಕೆದಾಟು ಯೋಜನೆಯನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ನಲ್ಲಿ ತಮಿಳುನಾಡು ಆಕ್ಷೇಪ ಹಾಕಿತ್ತು. ಆದರೆ ಗುರುವಾರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೌಖಿಕವಾಗಿ ಮೇಕೆದಾಟಿಗೆ ಏಕೆ ಅಡ್ಡ ಬರುತ್ತೀರ. ಕರ್ನಾಟಕ ಅವರ ಭೂಮಿಯಲ್ಲಿ ಯೋಜನೆಯನ್ನು ಮಾಡುತ್ತಿದೆ ಎಂದು ತಮಿಳುನಾಡಿಗೆ ತಾಕೀತು ಮಾಡಿದ್ದಾರೆ. ಹೀಗಾಗಿ ಮೇಕೆದಾಟು ಯೋಜನೆ ಮುಂದುವರಿಸಲು ತೀರ್ಮಾನಿಸಿದ್ದೇವೆ. ಈ ಸಂಬಂಧ ಕೇಂದ್ರ ಪರಿಸರ ಇಲಾಖೆಯ ಅನುಮೋದನೆ ಪಡೆಯುವುದು ಸೇರಿ ಬೇಕಾದ ಇತರೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.