ಬೆಂಗಳೂರು: ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ.
ಕೊರೊನಾ ಬಳಿಕ ಮೂರನೇ ತುರ್ತು ಕ್ಯಾಬಿನೆಟ್ ಸಭೆ ಇದಾಗಿದ್ದು, ಲಾಕ್ಡೌನ್ ಮುಂದುವರಿಕೆ, ಟಾಸ್ಕ್ ಪೋರ್ಸ್ ಸಭೆಯ ತೀರ್ಮಾನ, ತಜ್ಞರ ಅಭಿಪ್ರಾಯ ಹಾಗೂ ಚಿಕಿತ್ಸೆ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ವಿಧಾನಸೌಧದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಜಿಲ್ಲೆಗಳಲ್ಲಿ ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಲಾಕ್ಡೌನ್ ಹಿನ್ನೆಲೆ ಸಾರ್ವಜನಿಕರ ಸ್ಪಂದನೆ, ಲಾಕ್ಡೌನ್ ಮುಂದೂಡಿಕೆ, ಸೋಂಕು ಹೆಚ್ಚು ಇರುವ ಜಿಲ್ಲೆಗಳಲ್ಲಿ ಹೆಚ್ಚಿನ ಜಾಗೃತೆ ವಹಿಸುವ ಕುರಿತು, ಪ್ರತಿ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳು, ಹಳ್ಳಿಗಳ ಪರಿಸ್ಥಿತಿ, ನಿತ್ಯದ ಅವಶ್ಯ ವಸ್ತುಗಳ ಖರೀದಿಗೆ ಮುಗಿಬೀಳುವ ಜನರನ್ನು ಕಂಟ್ರೋಲ್ ಮಾಡುವ ವಿಚಾರ, ಸೋಂಕು ಮತ್ತಷ್ಟು ಹೆಚ್ಚಿದಂತೆ ಇನ್ನು ಯಾವ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬೆಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಲಾಕ್ಡೌನ್ ಮತ್ತಷ್ಟು ದಿನಗಳ ಕಾಲ ವಿಸ್ತರಿಸುವ ಅಗತ್ಯತೆ ಇರುವ ಕಾರಣ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗುತ್ತದೆ. ಒಂದು ವೇಳೆ ವಿಸ್ತರಣೆ ಅನಿವಾರ್ಯವಾದರೆ ಯಾವ ರೀತಿ ಲಾಕ್ಡೌನ್ ಮಾಡಬೇಕು? ಯಾವ ಜಿಲ್ಲೆಗಳಲ್ಲಿ ಯಾವ ರೀತಿ ಲಾಕ್ಡೌನ್ ವಿಸ್ತರಿಸಬೇಕು? ಎನ್ನುವ ಕುರಿತು ಮಹತ್ವದ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.