ಬೆಂಗಳೂರು:ರಾಜ್ಯದಲ್ಲಿ ಎಸ್‍ಡಿಪಿಐ ಸೇರಿದಂತೆ ಕೆಲವು ಸಂಘಟನೆಗಳ ನಿಷೇಧದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗಿದೆ. ನಿಷೇಧಕ್ಕೆ ನಮ್ಮ ಬಳಿ ಸಮರ್ಪಕ ಪುರಾವೆ ಇಲ್ಲ.ಕಾನೂನು ಪ್ರಕಾರ ಏನು ಮಾಡಬಹುದೆಂದು ಪರಿಶೀಲನೆ ಮಾಡುತ್ತೇವೆ. ಇವತ್ತು ನಿಷೇಧ ಬಗ್ಗೆ ಚರ್ಚೆ ಮಾತ್ರ ಆಗಿದೆ. ಯಾವುದೇ ನಿರ್ಧಾರ ಆಗಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಮತ್ತು ಇತರೆ ಇಲಾಖೆಗಳಿಂದ ಮಾಹಿತಿ ತರಿಸಿಕೊಳ್ಳುತ್ತೇವೆ. ಈಗಿರುವ ಕಾನೂನಿನಲ್ಲಿ ನಿಷೇಧ ಮಾಡಲು ಅವಕಾಶ ಇದೆಯೇ ಎಂಬುದರ ಬಗ್ಗೆಯೂ ಪರಿಶೀಲನೆ ಮಾಡುತ್ತಿದ್ದು, ಅವಕಾಶ ಇಲ್ಲದಿದ್ದರೆ ಬೇರೆ ಕಾನೂನು ತಿದ್ದುಪಡಿ ಮಾಡಬೇಕಾ ಎಂಬುದರ ಬಗ್ಗೆ ಪರಿಶೀಲಿಸುತ್ತವೆ ಎಂದರು.
ಎಸ್‍ಡಿಪಿಐ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ಮಾಡಲಾಗಿದೆ. ಹಾಲಿ ಇರುವ ಕಾನೂನಿನಡಿ ಸಂಘಟನೆಯನ್ನು ನಿಷೇಧಿಸಬೇಕೋ ಅಥವಾ 1981ರ ಕಾಯ್ದೆಗೆ ತಿದ್ದುಪಡಿ ಮಾಡಬೇಕಾ ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಸಂಘಟನೆಯು ಯಾವ ಯಾವ ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂಬ ಬಗ್ಗೆ ಗೃಹ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳಿಂದ ವರದಿ ನೀಡಲು ಸೂಚಿಸಲಾಗಿದೆ. ಕಾನೂನಿನಲ್ಲಿ ಅವಕಾಶ ಇದೆ, ಯಾವ ರೀತಿ ಇದೆ ಎಂಬುದನ್ನು ನೋಡಿದ ಬಳಿಕ ವರದಿ ನೋಡಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದರು.
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗಳಲ್ಲಿ ಆರೋಪಿಗಳಿಂದ ನಷ್ಟ ಭರ್ತಿ ವಿಚಾರ ಸಂಬಂಧವೂ ಚರ್ಚಿಸಲಾಗಿದೆ. ಸರ್ಕಾರ 1981 ರಲ್ಲಿ ಸಾರ್ವಜನಿಕ ಆಸ್ತಿ ನಾಶ ತಡೆ ಕಾಯ್ದೆ ತಂದಿದೆ. ಈ ಕಾಯ್ದೆ ಪ್ರಕಾರ ನಷ್ಟ ಮತ್ತು ಪರಿಹಾರ ನಿಗದಿಗೆ ಆಯುಕ್ತರ ನೇಮಕ ಮಾಡಬೇಕು. ಈ ಮಧ್ಯೆ ಇದಕ್ಕಿಂತ ಉಪಯುಕ್ತ ಕಾಯ್ದೆ ಯುಪಿಯಲ್ಲಿ ಜಾರಿ ಬಂದಿದೆ ಅನ್ನೋ ಸಲಹೆ ಬಂತು. ನಷ್ಟ ಭರ್ತಿ ಮತ್ತು ಪರಿಹಾರ ನಿಗದಿಗೆ ಹೊಸ ಕಾನೂನು ತರುವ ಬಗ್ಗೆಯೂ ಚರ್ಚೆ ಮಾಡ್ತೇವೆ. ಇದಕ್ಕೆ ಕಾನೂನಿನಲ್ಲಿ ಮತ್ತೊಂದು ಅವಕಾಶ ಕಂಡುಹಿಡಿಯುವ ಅಗತ್ಯ ಇದೆ ಎಂದು ಮಾಹಿತಿ ನೀಡಿದರು.