ಬೆಂಗಳೂರು:ಸಂಪುಟ ವಿಸ್ತರಣೆಯನ್ನು ಯಾವಾಗ ಮಾಡಬೇಕು, ಯಾರನ್ನು ತೆಗೆದುಕೊಳ್ಳಬೇಕು ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದಾಗಿದ್ದು, ಅವರ ನಿರ್ಧಾರಕ್ಕೆ ನಾವೆಲ್ಲರೂ ಬದ್ದರಾಗಿರಬೇಕು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಆರ್‌ಟಿ ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿವಾಸಕ್ಕೆ ಮಾಜಿ ಸಚಿವ ಮುರುಗೇಶ್ ನಿರಾಣಿ ಭೇಟಿ ನೀಡಿ, ನೂತನ ಸಿಎಂಗೆ ಅಭಿನಂದನೆ ಸಲ್ಲಿಸಿ ಕೆಲಕಾಲ ಮಾತುಕತೆ ನಡೆಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ನಿರಾಣಿ, ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದೆ. ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.
ಸಂಪುಟಕ್ಕೆ ಸೇರ್ಪಡೆಯಾಗದಿರಲು ತೀರ್ಮಾನಿಸಿರುವ ಜಗದೀಶ್ ಶೆಟ್ಟರ್ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ನಿರಾಣಿ, ಯಾರು ಯಾವ ನಿರ್ಧಾರವನ್ನು ಕೈಗೊಳ್ಳುತ್ತಾರೋ ನನಗೆ ಗೊತ್ತಿಲ್ಲ. ಶೆಟ್ಟರ್ ಅವರದ್ದು ವೈಯಕ್ತಿಕ ವಿಚಾರ. ಈ ಬಗ್ಗೆ ನಾನು ಯಾವುದೇ ಗೊಂದಲ ಸೃಷ್ಟಿಸಲು ಇಚ್ಚಿಸುವುದಿಲ್ಲ ಎಂದು ಹೇಳಿದರು.