ಬೆಂಗಳೂರು:ವಿಧಾನ ಪರಿಷತ್ನ 4 ಸ್ಥಾನಗಳು, ವಿಧಾನಸಭೆಯ 2 ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ಮತ್ತೊಮ್ಮೆ ಮುಂದೂಡಿಕೆಯಾಗುವ ಸಾಧ್ಯತೆಯಿದೆ.
ಉಪಚುನಾವಣೆ ಕಾರಣ ಸಿಎಂ ದೆಹಲಿ ಪ್ರವಾಸ ಮುಂದೂಡಿಕೆಯಾಗಲಿದ್ದು, ಸಂಪುಟ ವಿಸ್ತರಣೆ ಕೂಡ ವಿಳಂಬವಾಗುವ ಸಾಧ್ಯತೆ ಇದೆ. ಇದರಿಂದಾಗಿ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆ ಆಗಲಿದೆ. ಇನ್ನೇನು ಸಂಪುಟ ಸೇರಿಬಿಟ್ಟೆವು ಎನ್ನುತ್ತಿದ್ದ ಎಂಟಿಬಿ ನಾಗರಾಜ್, ಆರ್.ಶಂಕರ್ ಹಾಗೂ ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಸಂಪುಟ ಸೇರ್ಪಡೆ ಆಕಾಂಕ್ಷಿಗಳಾಗಿರುವ ಮೂಲ ಬಿಜೆಪಿಗರಿಗೂ ಮತ್ತೊಮ್ಮೆ ನಿರಾಸೆ ಮೂಡಿದೆ ಎನ್ನಲಾಗ್ತಿದೆ.
ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಣೆಗೆ ಮುಂದಾಗಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಹೈಕಮಾಂಡ್ ಅನುಮತಿ ಸಿಗದ ಕಾರಣಕ್ಕೆ ಸುಮ್ಮನಾಗಿದ್ದರು. ಅಧಿವೇಶನ ಮುಗಿಯುತ್ತಿದ್ದಂತೆ ದೆಹಲಿ ಪ್ರವಾಸಕ್ಕೆ ಸಜ್ಜಾಗಿದ್ದು, ಮೂರ್ನಾಲ್ಕು ದಿನದಲ್ಲಿ ದೆಹಲಿಗೆ ತೆರಳುವ ಬಗ್ಗೆ ಹೇಳಿದ್ದರು. ಆದರೆ ಇಂದು 6 ಕ್ಷೇತ್ರಗಳ ಚುನಾವಣೆ ಘೋಷಣೆಯಾಗಿದ್ದು ಸಿಎಂ ದೆಹಲಿ ಪ್ರವಾಸಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ.
ಸತ್ಯನಾರಾಯಣ ನಿಧನದಿಂದ ತೆರವಾದ ಶಿರಾ ವಿಧಾನಸಭಾ ಕ್ಷೇತ್ರ, ಚುನಾವಣಾ ತಕರಾರು ಇದ್ದ ಆರ್ಆರ್ ನಗರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಜೂನ್ ತಿಂಗಳಿನಲ್ಲೇ ಅವಧಿ ಮುಗಿದಿರುವ ಪಶ್ಚಿಮ ಪದವೀಧರ ಕ್ಷೇತ್ರ, ಆಗ್ನೇಯ ಪದವೀಧರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿದೆ.
6 ಕ್ಷೇತ್ರಗಳಿಗೆ ಚುನಾವಣೆ ನಿಗಧಿಯಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಕಾರ್ಯ, ಪ್ರಚಾರ ಕಾರ್ಯದ ಹಿನ್ನೆಲೆ ಸಂಪುಟ ವಿಸ್ತರಣೆಯನ್ನು ಸದ್ಯಕ್ಕೆ ಮುಂದೂಡಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಉಪಚುನಾವಣೆಗೆ ಸಂಪುಟ ವಿಸ್ತರಣೆ ಗೊಂದಲ, ಅಸಮಾಧಾನ ಉಂಟಾದರೆ ಚುನಾವಣೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಮತದಾನ ಮುಗಿದ ನಂತರ ನವೆಂಬರ್ ಮೊದಲ ಅಥವಾ 2ನೇ ವಾರದಲ್ಲಿ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.