ಬೆಂಗಳೂರು :ಸಂಪುಟ ರಚನೆಗೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಅತಿ ಶೀಘ್ರದಲ್ಲಿ ಸಂಪುಟ ರಚನೆ ಆಗಲಿದೆ. ಸೋಮವಾರ ಕರೆ ಮಾಡುತ್ತೇವೆ ಎಂದು ವರಿಷ್ಠರು ಹೇಳಿದ್ದಾರೆ. ಬಳಿಕ ಸಂಪುಟ ರಚನೆ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದೆಹಲಿ ಭೇಟಿಯಿಂದ ಮರಳುತ್ತಲೇ ಗೃಹ ಕಚೇರಿ ಕೃಷ್ಣಾದಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚತ್ತಿರುವ ಹಿನ್ನೆಲೆಯಲ್ಲಿ ಗಡಿ ಭಾಗದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಯಾರೂ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿಲ್ಲ. ವಿ.ಸೋಮಣ್ಣ, ಆರ್.ಅಶೋಕ್ ಮಧ್ಯೆ ಸಂಘರ್ಷ ಆಗಿಲ್ಲ. ಅದು ಸತ್ಯಕ್ಕೆ ದೂರವಾಗಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ಮತ್ತು ಕೋವಿಡ್ ತಡೆಗಟ್ಟುವ ಕ್ರಮದ ಕುರಿತು ಸಿಎಂ ಹೇಳಿಕೆ ಕೇರಳ ಗಡಿಯಲ್ಲಿ ಕಟ್ಟುನಿಟ್ಟು, ಲಸಿಕೆಗಾಗಿ ಕೇಂದ್ರ ಸಚಿವರ ಜೊತೆ ಮಾತುಕತೆ
ಕೇರಳ ಗಡಿಗೆ ಹೊಂದಿರುವಂತ ಜಿಲ್ಲೆಗಳಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ಡಿಸಿಗಳ ಜೊತೆ ವಿಡಿಯೋ ಸಂವಾದ ಮಾಡಿದ್ದೇನೆ. ಕೇರಳದ ಗಡಿಯ ಜಿಲ್ಲೆಗಳಲ್ಲಿ ಕಟ್ಡುನಿಟ್ಟಾಗಿ ನಿಗಾ ವಹಿಸುವುದಲ್ಲದೆ, ವೈದ್ಯಕೀಯ ಮೂಲಸೌಕರ್ಯ ಹೆಚ್ಚಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಲಸಿಕೀಕರಣ ಮಾಡಬೇಕು. ಲಸಿಕೆ ಸಂಬಂಧ ಈಗಾಗಲೇ ಕೇಂದ್ರ ಆರೋಗ್ಯ ಸಚಿವರ ಜೊತೆ ಮಾತುಕತೆ ನಡೆಸಿದ್ದೇವೆ ಎಂದು ತಿಳಿಸಿದರು.
ಗಡಿಯಲ್ಲಿ ಹಿರಿಯ ಅಧಿಕಾರಿಗಳ ನಿಯೋಜನೆ
ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಬಿಗಿ ಮಾಡಿ. ಹಿರಿಯ ಅಧಿಕಾರಿಗಳನ್ನು ನಿಯೋಜಿಸಿ. ಡಿವೈಎಸ್ ಪಿ, ಉಪ ವಿಭಾಗಾಧಿಕಾರಿ, ವೈದ್ಯರು, ಮತ್ತು ಇತರ ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳು, ಎಸ್ ಪಿ ಪ್ರತಿ ಎರಡು ದಿನಕ್ಕೊಮ್ಮೆ ಭೇಟಿ ಮಾಡಿ ಪರಿಶೀಲಿಸಿ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡಲು ನಿರ್ದೇಶನ ನೀಡಲಾಗಿದೆ ಎಂದರು.
ಪಾಸ್ ವಿರತಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದರು. ಜೊತೆಗೆ ರೈಲು ನಿಲ್ದಾಣದಲ್ಲಿಯೂ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ತಿಳಿಸಿದರು. ಬಂದರುಗಳಲ್ಲಿಯೂ ಕಟ್ಟೆಚ್ಚರ ವಹಿಸಬೇಕು. ಕೇರಳದಿಂದ ಶಿಕ್ಷಣ, ಉದ್ಯೋಗಕ್ಕೆಂದು ಪ್ರತಿದಿನ ಪ್ರಯಾಣಿಸುವವರಿಗೆ ಒಂದು ವಾರದ ಅವಧಿಗೆ ಪಾಸ್ ನೀಡುವ ವ್ಯವಸ್ಥೆ ಹಾಗೂ ಅವರಿಗೆ ಪ್ರತಿ ವಾರ ಪರೀಕ್ಷೆ ಮಾಡಿಕೊಳ್ಳುವುದು ಕಡ್ಡಾಯ ಮಾಡುವಂತೆ ಸೂಚಿಸಲಾಗಿದೆ. ಈ ಕುರಿತು ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ತಿಳಿಸಿದರು.
ಎರಡು ಡೋಸ್ ಲಸಿಕೆ ಮತ್ತು ಆರ್‌ಟಿಸಿಪಿಆರ್ ವರದಿ ಕಡ್ಡಾಯ
ರಾಜ್ಯಕ್ಕೆ ಬರಬೇಕಿದ್ರೇ ಎರಡು ಡೋಸ್ ಲಸಿಕೆ ಹಾಗೂ ಆರ್‌ಟಿಸಿಪಿಆರ್ ಟೆಸ್ಟ್ ವರದಿ ಹೊಂದಿರಬೇಕು. ಅಲ್ಲದೆ ದ.ಕನ್ನಡ ಜಿಲ್ಲೆಯಲ್ಲಿ ಏಳು ದಿನಗಳ ಅಂತರದಲ್ಲಿ ಆರ್‌ಟಿಸಿಪಿಆರ್ ಟೆಸ್ಟ್ ಮಾಡಿಸಬೇಕು. ರಾಜ್ಯದಲ್ಲಿ ಮೈಕ್ರೋ ಕಂಟೈಂನ್ಮೆಂಟ್ ಜೋನ್ ಹೆಚ್ಚಿಸಲು ಹಾಗೂ ರಾಂಡಂ ಟೆಸ್ಟಿಂಗ್, ಟ್ರೇಸಿಂಗ್ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಅಲ್ಲದೆ ಮಹಾರಾಷ್ಟ್ರ ಗಡಿಯ ಜಿಲ್ಲೆಗಳಲ್ಲೂ ಇದೇ ನಿಯಮ ಪಾಲಿಸಲು ಸೂಚಿಸಲಾಗಿದೆ. ಆಗಸ್ಟ್ 2ರವರೆಗೂ ಈಗಿರುವ ನಿರ್ಬಂಧ ಜಾರಿಯಲ್ಲಿರಲ್ಲಿದೆ. ಬಳಿಕ ಪರಿಸ್ಥಿತಿ ನೋಡಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಉಪನ್ಯಾಸಕರಿಗೆ ಲಸಿಕೆ
ರಾಜ್ಯದ 72% ಶಾಲೆ ಉಪನ್ಯಾಸಕರಿಗೆ ಲಸಿಕೆ ಹಾಕಲಾಗಿದೆ. ಅದನ್ನು 100% ಮಾಡಲು ಸೂಚನೆ ನೀಡುತ್ತೇವೆ. ಗಡಿ ಜಿಲ್ಲೆಗಳಲ್ಲಿ ಚೆಕ್ ಪೋಸ್ಟ್ ಮಾಡಬೇಕು. ಅಂತೆಯೇ ಹೋಂ ಸ್ಟೇ, ರೆಸಾರ್ಟ್ ಬುಕಿಂಗ್ ಮಾಡುವವರಿಗೆ ಆರ್‌ಟಿಸಿಪಿಆರ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ ಎಂದರು.