ಬೆಂಗಳೂರು: ಜ.13 ಅಥವಾ 14 ರಂದು ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಜ.13 ಅಥವಾ 14 ರಂದು ಸಂಪುಟ ವಿಸ್ತರಣೆ: ಸಿಎಂ ಬಿಎಸ್ವೈ
09:51 January 11
ಜ. 13 ಅಥವಾ 14 ರಂದು ಸಂಪುಟ ವಿಸ್ತರಣೆ ಮಾಡಲಾಗುವುದು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಲಿದ್ದಾರೆ ಎಂದು ಸಿಎಂ ಬಿಎಸ್ವೈ ತಿಳಿಸಿದ್ದಾರೆ.
ಮಾಜಿ ಪ್ರಧಾನ ಮಂತ್ರಿ ದಿ.ಲಾಲ್ ಬಹದ್ದೂರ್ ಶಾಸ್ತ್ರಿ ಅವರ 54ನೇ ಪುಣ್ಯ ತಿಥಿಯ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಯ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಲಾಗುವುದು. ಅವರ ಅನುಕೂಲಕ್ಕೆ ತಕ್ಕಂತೆ 13 ಅಥವಾ 14 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ಮಾಡಲಾಗುವುದು ಎಂದರು.
ಈ ಬಾರಿ 7 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಸ್ತರಣೆಯೋ ಅಥವಾ ಪುನಾರಚನೆಯೋ ನೋಡೋಣ. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಧೀಮಂತ ರಾಜಕಾರಣಿಯಾಗಿದ್ದರು. ದೇಶದ ರಕ್ಷಣೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದರು. ಭಾರತದ ಮೊದಲ ರೈಲ್ವೆ ಸಚಿವರಾಗಿ, ಸಾರಿಗೆ ಮತ್ತು ಸಂಪರ್ಕ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಅತ್ಯಂತ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದರು.
ರೈಲು ಅಪಘಾತವಾದಾಗ ರಾಜೀನಾಮೆ ನೀಡಿದ ಅಪರೂಪದ ರಾಜಕಾರಣಿ. ದೂರದೃಷ್ಟಿ ನಾಯಕರಾಗಿದ್ದರು. ಅವರ ಜೈ ಜವಾನ್, ಜೈ ಕಿಸಾನ್ ಘೋಷವಾಕ್ಯ ಇಂದಿಗೂ ಪ್ರಸ್ತುತವಾಗಿದೆ. ಇದಕ್ಕೆ ಮಾಜಿ ಪ್ರಧಾನಿ ದಿ. ವಾಜಪೇಯಿ ಅವರ ಜೈ ವಿಜ್ಞಾನ್, ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅನುಸಂದಾನ್ ಘೋಷವಾಕ್ಯಗಳು ನಮ್ಮ ಭಾರತದ ಅಭಿವೃದ್ಧಿಗೆ ಸ್ಪೂರ್ತಿದಾಯಕವಾಗಿವೆ ಎಂದು ಬಣ್ಣಿಸಿದರು.