ಬೆಂಗಳೂರು: ಗೃಹ ಜ್ಯೋತಿ ಯೋಜನೆಯಡಿ ರಾಜ್ಯದಲ್ಲಿ ಕಡಿಮೆ ವಿದ್ಯುತ್ ಬಳಸುವ ಕುಟುಂಬಗಳಿಗೆ ಸಬ್ಸಿಡಿ ಅರ್ಹತೆಯ ಷರತ್ತುಗಳಲ್ಲಿ ಮಾರ್ಪಾಡು ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ಗೃಹ ಜ್ಯೋತಿ ಯೋಜನೆಯಡಿಯಲ್ಲಿ 48 ಯೂನಿಟ್‍ಗಳಿಗಿಂತ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಹೆಚ್ಚುವರಿ ಶೇ.10ರ ಬದಲಿಗೆ ಹೆಚ್ಚುವರಿ 10 ಯೂನಿಟ್‍ಗಳನ್ನು ಒದಗಿಸಲು ಸರ್ಕಾರ ನಿರ್ಧಾರ ಮಾಡಿದೆ. ಕಡಿಮೆ ವಿದ್ಯುತ್ ಬಳಕೆ ಮಾಡುವ ಗ್ರಾಹಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಶೇ.10ರ ಬದಲು ಹೆಚ್ಚುವರಿಯಾಗಿ 10 ಯೂನಿಟ್ ನೀಡುವುದು ಸರ್ಕಾರಕ್ಕೆ ಹೊರೆಯಾಗಲಿದೆ. ಆದ್ರೆ ಬಡವರಿಗೆ ಮತ್ತು ಜನಸಾಮಾನ್ಯರಿಗೆ ಅನುಕೂಲ ಆಗಬೇಕೆಂದು ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ವರ್ಷದ ವಿದ್ಯುತ್ ಬಳಕೆಯ ಸರಾಸರಿ ಲೆಕ್ಕದಲ್ಲಿ ಕಡಿಮೆ ವಿದ್ಯುತ್ ಯೂನಿಟ್ ಬಳಕೆ ಮಾಡುವವರು ಹೆಚ್ಚುವರಿಯಾಗಿ ಉಚಿತವಾಗಿ 10 ಯೂನಿಟ್ ವಿದ್ಯುತ್ ಪಡೆದುಕೊಳ್ಳಲಿದ್ದಾರೆ ಎಂದು ಇಂಧನ ಸಚಿವ ಜಾರ್ಜ್ ಪ್ರತಿಕ್ರಿಯೆ ನೀಡಿದರು.
ಕಳೆದ 12 ತಿಂಗಳು ಸರಾಸರಿ ಬಳಕೆ + ಹೆಚ್ಚುವರಿ ಶೇ.10ರಷ್ಟು ಯೂನಿಟ್ ಉಚಿತವಾಗಿ ಬಳಸಿಕೊಳ್ಳಲು ಗೃಹ ಜ್ಯೋತಿ ಯೋಜನೆಯಲ್ಲಿ ಪ್ರತಿ ಗ್ರಾಹಕರಿಗೆ ಅವಕಾಶ ನೀಡಲಾಗಿದೆ. ಇದಕ್ಕಿಂತ ಹೆಚ್ಚು ವಿದ್ಯುತ್ ಬಳಸಿಕೊಂಡವರಿಗೆ ಬಿಲ್ ಬರಲಿದೆ. ರಾಜ್ಯದಲ್ಲಿ 1.95 ಕೋಟಿ ಗೃಹ ಬಳಕೆ ಗ್ರಾಹಕರು ಸರಾಸರಿ 53 ಯೂನಿಟ್ ಬಳಕೆ ಮಾಡುತ್ತಿದ್ದಾರೆ. ಅದರಂತೆ ಸರಾಸರಿ ಬಳಕೆಗೆ ಶೇ.10ರಷ್ಟು ಹೆಚ್ಚುವರಿ ಬಳಕೆ ಸೇರ್ಪಡೆಗೊಳಿಸಿದರೆ ಅರ್ಹತಾ ಯೂನಿಟ್‍ಗಳು ಒಟ್ಟು 58 ಯೂನಿಟ್‍ಗಳಾಗುತ್ತದೆ.