ಕರ್ನಾಟಕ

karnataka

ETV Bharat / state

ಪೌರಕಾರ್ಮಿಕರ ಖಾಯಂ ನೇಮಕಾತಿ, 35 ವ್ಯಕ್ತಿಗಳ ವಿರುದ್ಧದ ಮೊಕದ್ದಮೆ ವಾಪಸ್ ಗೆ ಸಂಪುಟ ಸಭೆ ಒಪ್ಪಿಗೆ

ರಾಜ್ಯದ 11,133 ಪೌರಕಾರ್ಮಿಕರನ್ನು ವಿಶೇಷ ನೇಮಕಾತಿ ಅಡಿ ಸರ್ಕಾರಿ ನೌಕರರಯ ಎಂದು ನೇಮಕಾತಿ ಮಾಡಿಕೊಳ್ಳುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟದಿಂದ ಅನುಮೋದನೆ ದೊರೆತಿದೆ. ಜೊತೆಗೆ ವಿವಿಧ ವಿಧೇಯಕಕ್ಕೆ ಅನುಮೋದನೆ ದೊರೆತಿದೆ.

By

Published : Sep 19, 2022, 9:30 PM IST

cabinet-approves-permanent-appointment-of-civil-labours
ಪೌರಕಾರ್ಮಿಕರ ಖಾಯಂ ನೇಮಕಾತಿ, 35 ವ್ಯಕ್ತಿಗಳ ವಿರುದ್ಧದ ಮೊಕದ್ದಮೆ ವಾಪಸ್ ಗೆ ಸಂಪುಟ ಸಭೆ ಒಪ್ಪಿಗೆ

ಬೆಂಗಳೂರು: ರಾಜ್ಯದ ನಗರಸಭೆ, ಪುರಸಭೆ ಮತ್ತು ಇತರ ಪಟ್ಟಣ, ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ 11,133 ಪೌರಕಾರ್ಮಿಕರನ್ನು ವಿಶೇಷ ನೇಮಕಾತಿ ನಿಯಮಗಳ ಅಡಿ ಸರ್ಕಾರಿ ನೌಕರರು ಎಂದು ನೇಮಕಾತಿ ಮಾಡಿಕೊಳ್ಳುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಇತ್ತೀಚೆಗೆ ಪೌರಕಾರ್ಮಿಕರು ಸೇವೆ ಖಾಯಮಾತಿಗೆ ಆಗ್ರಹಿಸಿ ರಾಜ್ಯಾದ್ಯಂತ ಮುಷ್ಕರ ನಡೆಸಿದ್ದರು. ಇದೀಗ ಸರ್ಕಾರ ವಿಶೇಷ ನೇಮಕಾತಿ ನಿಯಮಗಳ ಅಡಿ ಸರ್ಕಾರಿ ನೌಕರರೆಂದು ನೇಮಕ ಮಾಡಿಕೊಳ್ಳುವ ಪ್ರಸ್ತಾವನೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಈ ನೌಕರರು ಈಗ 17,000-28,980 ವೇತನ ಶ್ರೇಣಿ ಅಡಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ 11,133 ಪೌರ ಕಾರ್ಮಿಕರಿಗೆ ಖಾಯಮಾತಿಯಾಗಲಿದೆ.

35 ವ್ಯಕ್ತಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ವಾಪಸ್ : ಸಂಪುಟ ಸಭೆಯಲ್ಲಿ 35 ವ್ಯಕ್ತಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆಯಲು ಒಪ್ಪಿಗೆ ಸೂಚಿಸಲಾಗಿದೆ. ಸಚಿವ ಸಂಪುಟದ ಉಪಸಮಿತಿಯ ಶಿಫಾರಸು ಆಧರಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಿಜೆಪಿ ಕಾರ್ಯಕರ್ತರು, ಹಿಂದೂ ಪರ ಕಾರ್ಯಕರ್ತರು, ಕನ್ನಡಪರ ಮತ್ತು ರೈತ ಮುಖಂಡರ ವಿರುದ್ಧದ ಮೊಕದ್ದಮೆಗಳನ್ನು ವಾಪಸ್‌ ಪಡೆಯಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಎಸ್ಎಸ್ಎಲ್‌ಸಿ ಮತ್ತು ಪಿಯು ಬೋರ್ಡ್ ವಿಲೀನದ ಬಿಲ್​​ಗೆ ಅಸ್ತು: ಮಹತ್ವದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ‌ ತಿದ್ದುಪಡಿ ವಿಧೇಯಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಇದು ಎಸ್‌ಎಸ್‌ಎಲ್‌ಸಿ ಬೋರ್ಡ್‌ನಲ್ಲಿ ಪಿಯುಸಿ ಬೋರ್ಡ್ ವಿಲೀನ ಕುರಿತು ಇರುವ ವಿಧೇಯಕವಾಗಿದೆ. ನಾಳೆ ಸದನದಲ್ಲಿ ಈ ವಿಧೇಯಕ ಮಂಡನೆಗೆ ನಿರ್ಧರಿಸಲಾಗಿದೆ.

ಇತರ ಪ್ರಮುಖ ತೀರ್ಮಾನಗಳು :

  • ಕರ್ನಾಟಕ ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ. ಶಿಕ್ಷಕರ ವರ್ಗಾವಣೆಯಲ್ಲಿ ಕೆಲ ಗೊಂದಲಗಳ ನಿವಾರಣೆ ಕುರಿತ ವಿಧೇಯಕಕ್ಕೆ ಒಪ್ಪಿಗೆ
  • ಮುಖ್ಯಮಂತ್ರಿ ವಿದ್ಯಾಸಿರಿ ಯೋಜನೆಯನ್ನು ಮೀನುಗಾರರ,ಮೀನು ಕೃಷಿಕರ ಮಕ್ಕಳಿಗೂ ವಿಸ್ತರಿಸಲು ಒಪ್ಪಿಗೆ
  • ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡ ಕುಟುಂಬಗಳ ಗೃಹ ವಿದ್ಯುತ್‌ ಬಳಕೆದಾರರಿಗೆ ಮಾಸಿಕ 75 ಯೂನಿಟ್‌ ಉಚಿತ ವಿದ್ಯುತ್‌ ಒದಗಿಸುವ ಸಂಬಂಧ ಆದೇಶಕ್ಕೆ ಅನುಮೋದನೆ
  • ರಾಜ್ಯದಲ್ಲಿನ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರಿಗೆ 10 ಹೆಚ್‌ ಪಿ ವರೆಗೆ ನೀರಾವರಿ ವಿದ್ಯುತ್‌ ಪಂಪ್‌ ಸೆಟ್‌ ಸ್ಥಾವರಗಳ ವಿದ್ಯುತ್‌ ಶುಲ್ಕವನ್ನು ಮರು ಪಾವತಿಸುವ ಸಂಬಂಧ ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ
  • ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್‌ ಕೇಂದ್ರವನ್ನು 50 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ
  • ಗುತ್ತಿಗೆ ಆಧಾರದಲ್ಲಿ ಬೆಂಗಳೂರಿನ ಕಬ್ಬನ್‌ ಉದ್ಯಾನದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ಕಟ್ಟಡದ ನೆಲ ಅಂತಸ್ಥಿನಲ್ಲಿರುವ 404.04 ಚ.ಮೀ ವಿಸ್ತೀರ್ಣದ ಗುತ್ತಿಗೆ ಅವಧಿಯನ್ನು ಮುಂದುವರೆಸಲು‌ ಸಮ್ಮತಿ
  • ಬೆಂಗಳೂರಿನ ಜಲಮಂಡಳಿಯ ಟಿ.ಕೆ.ಹಳ್ಳಿ,ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿನ ದಿನಂಪ್ರತಿ 500 ದಶಲಕ್ಷ ಲೀಟರ್‌ ಸಾಮರ್ಥ್ಯದ ಕಾವೇರಿ ನೀರು ಸರಬರಾಜು ಯೋಜನೆ ನಾಲ್ಕನೇ ಹಂತ, 2 ನೇ ಘಟ್ಟದ ಜಲರೇಚಕ ಯಂತ್ರಾಗಾರಗಳ ಹಾಗೂ ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ 220 ಕೆವಿ/66ಕೆವಿ/11ಕೆವಿ ವಿದ್ಯುತ್‌ ಉಪಕೇಂದ್ರಗಳ ಮೂರು ವರ್ಷಗಳ ಅವಧಿ ನಿರ್ವಹಣೆ ಮತ್ತು ಸಮಗ್ರ ಕಾರ್ಯಾಚರಣೆಯ ಕಾಮಗಾರಿಗಳ ರೂ.33.85ಕೋಟಿಗಳ ಅಂದಾಜಿಗೆ ಅನುಮೋದನೆ
  • ಬೆಂಗಳೂರಿನ ಟ್ರಾಫಿಕ್ ನಿರ್ವಹಣೆ ಸಂಬಂಧ ಬೆಂಗಳೂರು ಮೆಟ್ರೋಪಾಲಿಟಿನ್‌ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ 2022ಕ್ಕೆ ಅನುಮೋದನೆ
  • ಕರ್ನಾಟಕ ಭೂ ಕಂದಾಯ ವಿಧೇಯಕ(ಎರಡನೇ ತಿದ್ದುಪಡಿ) 2022ಗೆ ಸಮ್ಮತಿ

ಇದನ್ನೂ ಓದಿ :ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ಮಧ್ಯೆ ಪರಸ್ಪರ ಬಿತ್ತಿಪತ್ರ ಸಮರ

ABOUT THE AUTHOR

...view details