ಬೆಂಗಳೂರು: ಇಂದು ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಎಲ್ಲ ಪ್ರಾರ್ಥನಾ ಮಂದಿರಗಳ ಸಂರಕ್ಷಣೆಗಾಗಿ ತಿದ್ದುಪಡಿ ವಿಧೇಯಕ ಮಂಡನೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಇರುವ ದೇಗುಲ ತೆರವು ಮಾಡದಿರುವ ಬಗ್ಗೆ ಸದನದಲ್ಲಿ ಪ್ರತ್ಯೇಕ ವಿಧೇಯಕ ಮಂಡನೆಗೆ ನಿರ್ಧರಿಸಲಾಗಿದೆ.
ನಂಜನಗೂಡು ದೇವಸ್ಥಾನ ತೆರವು ಭಾರಿ ವಿವಾದ ಸೃಷ್ಟಿಸಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸುಪ್ರೀಂ ಕೋರ್ಟ್ ಆದೇಶದನ್ವಯ ಪ್ರಾರ್ಥನಾ ಮಂದಿರಗಳ ತೆರವು ಮಾಡಲಾಗಿತ್ತಾದರೂ, ಇದಕ್ಕೆ ಪ್ರತಿಪಕ್ಷಗಳು ಸೇರಿದಂತೆ ಸಾರ್ವಜನಿಕ ವಲಯದಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ದೇವಸ್ಥಾನ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಬೊಮ್ಮಾಯಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು. ಇದೀಗ ಡ್ಯಾಮೇಜ್ ಕಂಟ್ರೋಲ್ ಎಂಬಂತೆ ಸದ್ಯಕ್ಕೆ ಸರ್ಕಾರ ಸುಮಾರು 6,300 ಅಕ್ರಮ ಪ್ರಾರ್ಥನಾ ಮಂದಿರಗಳ ತೆರವು ಕಾರ್ಯ ತಡೆ ಹಿಡಿದಿದೆ.
ಇದನ್ನು ಓದಿ:ಇಂದು ಸಚಿವ ಸಂಪುಟ ಸಭೆ: ಅಕ್ರಮ ಪ್ರಾರ್ಥನಾ ಮಂದಿರ ತೆರವು ಸಂಬಂಧ ಹೊಸ ನೀತಿ ಬಗ್ಗೆ ಚರ್ಚೆ ಸಾಧ್ಯತೆ
ಅಕ್ರಮ ಪ್ರಾರ್ಥನಾ ಮಂದಿರಗಳ ತೆರವು ಸಂಬಂಧ ತಿದ್ದುಪಡಿ ಮಸೂದೆಯೊಂದನ್ನು ಸದನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ. ಆ ಮೂಲಕ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ, ಅಕ್ರಮ ಪ್ರಾರ್ಥನಾ ಮಂದಿರಗಳ ತೆರವಿಗೆ ಸದ್ಯಕ್ಕೆ ತಡೆಯೊಡ್ಡಲು ಸರ್ಕಾರ ಮುಂದಾಗಿದೆ. ಈ ವಿಧೇಯಕದಿಂದ ತಾತ್ಕಾಲಿಕ ವಿವಾದ ಶಮನಕ್ಕೆ ಸರ್ಕಾರ ಮುಂದಾಗಿದೆ. ಈಗಾಗಲೇ ವಿಧೇಯಕ ಸಿದ್ಧಗೊಂಡಿದ್ದು, ಇಂದೇ ಸದನದಲ್ಲಿ ಮಂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಂಪುಟ ಸಭೆಯ ಇತರೆ ತೀರ್ಮಾನಗಳೇನು?:
- ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು.
- ತಾಂತ್ರಿಕ ಶಿಕ್ಷಣ ಇಲಾಖೆಯ 3 ವರ್ಷಗಳ ಡಿಪ್ಲೋಮಾ ಕೋರ್ಸ್ ಶಿಕ್ಷಣವನ್ನು ಪಿಯುಸಿ ತತ್ಸಮಾನ ವಿದ್ಯಾರ್ಹತೆ ಎಂದು ಸರ್ಕಾರಿ ನೇಮಕಾತಿಗೆ ಪರಿಗಣಿಸಲು ತೀರ್ಮಾನ
- ಕರ್ನಾಟಕ ರಾಜ್ಯ (ವಿಧಿ ವಿಜ್ಞಾನ ಪ್ರಯೋಗಾಲಯ ಸೇವೆಗಳು) (ನೇಮಕಾತಿ) (ತಿದ್ದುಪಡಿ) ನಿಯಮಗಳು 2021ಕ್ಕೆ ಅನುಮೋದನೆ
- ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ವಿಧೇಯಕ 2021ಕ್ಕೆ ಅನುಮೋದನೆ
- ಕರ್ನಾಟಕ ಭೂ ಮಂಜೂರಾತಿ (ತಿದ್ದುಪಡಿ) ನಿಯಮಗಳು 2021ಕ್ಕೆ ಅನುಮೋದನೆ
- ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಹಾಗೂ 17 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿಯ 38.78 ಕೋಟಿ ರೂ. ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ
- 2021-22ನೇ ಸಾಲಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು ಹಾಗೂ ಆಶ್ರಮ ಶಾಲೆಗಳ ವಿದ್ಯಾರ್ಥಿಗಳಿಗೆ ಆಹಾರ ಸಾಮಗ್ರಿಗಳು/ ಶುಚಿ ಸಂಭ್ರಮ ಕಿಟ್ ಹಾಗೂ ಶೂ ಮತ್ತು ಸಾಕ್ಸ್‌ಗಳನ್ನು ಒಟ್ಟು 69.49 ಕೋಟಿ ರೂ. ಅಂದಾಜು ಮೊತ್ತದಲ್ಲಿ ಒದಗಿಸಲು ಅನುಮೋದನೆ
- ನವೆಂಬರ್ 4, 2019ರ ಸರ್ಕಾರಿ ಆದೇಶದಲ್ಲಿ ಅನುಮೋದನೆ ನೀಡಿರುವ "ಶುಭ್ರ ಬೆಂಗಳೂರು" ಯೋಜನೆಯಲ್ಲಿ ನಮೂದಿಸಿರುವ ಕಾಮಗಾರಿಯ ಬದಲಿಗೆ ಮಲ್ಲತ್ತಹಳ್ಳಿ ಕೆರೆಗೆ ಸೇರುತ್ತಿರುವ ಕೊಳಚೆ ನೀರನ್ನು ತಡೆಯುವ ಕಾಮಗಾರಿಗಳನ್ನು 22.40 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಯಿತು.