ಬೆಂಗಳೂರು:ಸಿಎಎ ಪ್ರತಿಭಟನೆ ವೇಳೆ ಬೆಂಗಳೂರು ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದ ಪೊಲೀಸ್ ಆಯುಕ್ತರ ಆದೇಶ ಕಾನೂನುಬಾಹಿರ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಪ್ರತಿಭಟನೆ ನಿರ್ಬಂಧಿಸಿ ಡಿ.18 ರಂದು ಪೊಲೀಸ್ ಆಯುಕ್ತರು ನಗರದಾದ್ಯಂತ ಸಿಆರ್ಪಿಸಿ ಸೆಕ್ಷನ್ 144 ರಡಿ ನಿಷೇದಾಜ್ಞೆ ಜಾರಿ ಮಾಡಿದ್ದನ್ನು ಪ್ರಶ್ನಿಸಿ ರಾಜ್ಯಸಭಾ ಸದಸ್ಯ ರಾಜೀವ್ ಗೌಡ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಸುದೀರ್ಘವಾದ ಪ್ರತಿವಾದ ಆಲಿಸಿದ ಪೀಠ ಅಂತಿಮವಾಗಿ ನಗರ ಪೊಲೀಸ್ ಆಯುಕ್ತರು ಹೊರಡಿಸಿದ್ದ ನಿಷೇದಾಜ್ಞೆ ಆದೇಶ ಕಾನೂನು ಬಾಹಿರ ಎಂದು ತೀರ್ಪು ನೀಡಿತು. ಪೀಠ ತನ್ನ ತೀರ್ಪಿನಲ್ಲಿ, ಸೆಕ್ಷನ್ 144 ಜಾರಿಗೆ ಪೊಲೀಸ್ ಆಯುಕ್ತರಿಗೆ ಅಧಿಕಾರವಿದೆ. ಆದರೆ ಆದೇಶಕ್ಕೂ ಮುನ್ನ ಸೂಕ್ತ ವಿಚಾರಣೆ ನಡೆಸಬೇಕು. ಆದೇಶದಲ್ಲಿ ಸರಿಯಾದ ಕಾರಣವನ್ನು ನಮೂದಿಸಬೇಕು ಎಂದಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಸೆಕ್ಷನ್ 144 ಜಾರಿಗೊಳಿಸುವಾಗ ಆಯುಕ್ತರು ಜಿಲ್ಲಾ ಮ್ಯಾಜಿಸ್ಟ್ರೇಟ್ ರೀತಿ ಕಾರ್ಯ ನಿರ್ವಹಿಸಬೇಕು. ಈ ವೇಳೆ ವಿವೇಚನಾನುಸಾರ ನಿಷೇದಾಜ್ಞೆ ಜಾರಿಗೊಳಿಸಬೇಕೋ, ಬೇಡವೋ ಎಂಬ ಬಗ್ಗೆ ಸ್ವತಃ ನಿರ್ಧರಿಸಬೇಕು. ಆದರೆ ಆಯುಕ್ತರು ತಮ್ಮ ಮೇಲಾಧಿಕಾರಿ ಆಗಿರುವ ಡಿಜಿ ಐಜಿಪಿ ಪತ್ರ ಆಧರಿಸಿ ಸೆ.144 ಜಾರಿಗೊಳಿಸಿದ್ದಾಗಿ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ನಗರದ ಡಿಸಿಪಿಗಳ ವರದಿ ಆಧರಿಸಿದ್ದಾರೆ ಎಂದಿರುವ ಪೀಠ.
ಪೊಲೀಸ್ ಅಧಿಕಾರಿಗಳು ನೀಡಿರುವ ವರದಿ ಬಗ್ಗೆ ಪೊಲೀಸ್ ಆಯುಕ್ತರು ಸೂಕ್ತ ವಿಚಾರಣೆ ನಡೆಸಿಲ್ಲ. ಕೆಲ ಡಿಸಿಪಿಗಳು ಪ್ರತಿಭಟನೆಗೆ ಅನುಮತಿ ನೀಡಿದ್ದರು. ನಂತರ ಸೆ.144 ಜಾರಿ ಮಾಡುವಂತೆ ವರದಿ ನೀಡಿದ್ದಾರೆ. ಆಯುಕ್ತರು ನಿಷೇದಾಜ್ಞೆ ಜಾರಿ ಮಾಡುವ ಮುನ್ನ ತಮ್ಮ ಆದೇಶಕ್ಕೆ ಸಕಾರಣಗಳನ್ನು ಕೊಟ್ಟಿಲ್ಲ. ಹೀಗಾಗಿ ಆಯುಕ್ತರ ಆದೇಶ ರದ್ದುಪಡಿಸಿರುವುದಾಗಿ ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.