ಬೆಂಗಳೂರು: ಹಿಜಾಬ್ ವಿಚಾರದಲ್ಲಿ ಟೂಲ್ ಕಿಟ್ ಅಜೆಂಡಾ ಥರ ಪ್ಲಾನ್ ಮಾಡಲಾಗಿದೆ. ಕಪಿಲ್ ಸಿಬಲ್, ದೇವದತ್ತ ಕಾಮತ್, ರವಿ ವರ್ಮ ಕುಮಾರ್, ಸೋಂದೆ ಇವರೆಲ್ಲ ಕಾಂಗ್ರೆಸ್ನ ಫಲಾನುಭವಿಗಳು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇವರು ಹಿಜಾಬ್ ಪ್ರಕರಣದಲ್ಲಿ ಬಂದಿರೋದು ಕಾಕತಾಳೀಯ ಅಲ್ಲ. ಇದರ ಹಿಂದೆ ಕಾಂಗ್ರೆಸ್ ತಾನು ಇಲ್ಲ ಅಂತ ಹೇಳಬಹುದು. ಆದರೂ ಏನೋ ಇದೆ ಅಂತ ಅನ್ಸತ್ತೆ. ಯುಪಿ ಚುನಾವಣೆ ಆಗೋವರೆಗೂ ಈ ವಿಚಾರಣೆ ಮುಂದೂಡಿ ಅಂತ ಅರ್ಜಿ ಹಾಕಿದ್ದಾರೆ. ರಾಜಕೀಯಕ್ಕೆ ಇದನ್ನು ದುರ್ಬಳಕೆ ಮಾಡಿಕೊಳ್ತಿದೆ ಕಾಂಗ್ರೆಸ್. ಅದಕ್ಕಾಗಿಯೇ ವಿವಾದ ಹುಟ್ಟು ಹಾಕುವ ಸಂಚು ನಡೆದಿದೆ ಎಂದು ಕಿಡಿ ಕಾರಿದರು.
ಇಲ್ಲದ ವಿವಾದ ಹುಟ್ಟು ಹಾಕಿರೋದು, ಇವರೆಲ್ಲರ ವಕಾಲತ್ತು ಕಾಂಗ್ರೆಸಿಗರೇ ಮಾಡ್ತಿರೋದು ಕಾಕತಾಳಿಯ ಅಲ್ಲ. ಕೋರ್ಟ್ ಮಧ್ಯಂತರ ಆದೇಶ ಎಲ್ರೂ ಪಾಲಿಸಬೇಕು. ಪಾಲಿಸದಿದ್ದರೆ ಅವರ ಅಜೆಂಡಾ ಬೇರೇನೋ ಇದೆ ಎಂದರ್ಥ. ಸಮವಸ್ತ್ರ ರೂಲ್ಸ್ ವಿರುದ್ಧ ನಡೆದುಕೊಂಡರೆ ಅದರ ಹಿಂದೆ ದುರುದ್ದೇಶ ಇದೆ ಎಂದರು.