ಬೆಂಗಳೂರು: ಯುಪಿಎಸ್ಸಿಯಲ್ಲಿ ತಾಳಿ ಭಾಗ್ಯ, ಡೊನೇಷನ್ ಹಾಗೂ ಜಾತಿ ಮೇಲೆ ಆಯ್ಕೆ ಮಾಡುವ ಸ್ಕೀಂ ಇಲ್ಲ. ಇಲ್ಲಿ ಮೆರಿಟ್ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೆಚ್‌ಡಿಕೆಗೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ವಿಧಾನಸೌಧದಲ್ಲಿ ಕುಮಾರಸ್ವಾಮಿ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು. ಯುಪಿಎಸ್ಸಿಯಲ್ಲಿ ಮದುವೆ ಮಾಡಿಸಿ ಆಯ್ಕೆ ಮಾಡುವ ಪದ್ದತಿ ಇಲ್ಲ. ನಕಲು ಪದ್ದತಿ ಇಲ್ಲ. ಸಂದರ್ಶನದಲ್ಲಿ ವಂಚನೆ ಮಾಡುವ ಪದ್ದತಿ ಇಲ್ಲ. ಮೆರಿಟ್ ಮೇಲೆ ರ‍್ಯಾಂಕ್ ಬಂದರೆ ಯಾರು ಬೇಕಾದರೂ ಆಯ್ಕೆ ಆಗುತ್ತಾರೆ ಎಂದರು.
ಕೆಲವರಿಗೆ ಎಲ್ಲವನ್ನೂ ಅನುಮಾನಿಸುವುದು ಸ್ವಭಾವ ಆಗಿದೆ. ಚುನಾವಣೆಯಲ್ಲಿ ಸೋತರೆ ಇವಿಎಂ ಮೇಲೆ ಅನುಮಾನ, ಸುಪ್ರೀಂಕೋರ್ಟ್ ತೀರ್ಪು ಬಂದರೆ ಸುಪ್ರೀಂಕೋರ್ಟ್ ಮೇಲೆ ಅನುಮಾನ. ಈ ಅನುಮಾನದ ಕಾಯಿಲೆಗೆ ನಮ್ಮಲ್ಲಿ ಔಷಧ ಇಲ್ಲ. ಕಷ್ಟ ಪಟ್ಟು ಓದಿದವರು ಯಾರು ಬೇಕಾದರೂ ಐಎಎಸ್, ಐಪಿಎಸ್ ಆಗುತ್ತಾರೆ ಎಂದು ವಿವರಿಸಿದರು.
ಸ್ವಯಂ ಸೇವಕರು ಹಲವು ಕೆಲಸ ಮಾಡುತ್ತಿದ್ದಾರೆ. ಸಂಘ ಸ್ವಯಂ ಸೇವಕರನ್ನು ನಿರ್ಮಾಣ ಮಾಡುತ್ತದೆ. ಅವರಿಗೆ ದೇಶಭಕ್ತಿಯ ಸಂಸ್ಕಾರ ನೀಡುತ್ತದೆ. ಇಷ್ಟೇ ಸಂಘದ ಕೆಲಸ. ಇದರಲ್ಲಿ ಹಿಡನ್ ಅಜೆಂಡಾ ಇಲ್ಲ. ಎಲ್ಲವೂ ಅಂಜೆಡಾನೇ ಇರುವುದು. ಆರ್ಎಸ್ಎಸ್ಗೆ ದೇಶ ಶಕ್ತಿಶಾಲಿ ಆಗಬೇಕು ಎಂಬುವುದು ಅಜೆಂಡಾ. ವಿಶ್ವ ಗುರು ಆಗಬೇಕು ಎಂಬುದು ಅಜೆಂಡಾ. ಇದರ ಹೊರತಾಗಿ ಹಿಡನ್ ಅಜೆಂಡಾ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಂಘಟನೆಯಲ್ಲಿ ಕ್ರೀಡಾ ಭಾರತಿ, ವಿದ್ಯಾ ಭಾರತಿ ಇದೆ. ಸೇವೆ ಎಂಬ ಕಾರಣದಿಂದ ಇವುಗಳನ್ನು ತೆರೆದಿರುತ್ತಾರೆ. ಸೇವೆ ಎಂದು ಕೋಚಿಂಗ್ ಕೊಡುತ್ತಾರೆ. ಅದರಲ್ಲಿ ರ‍್ಯಾಂಕ್ ಬಂದರೆ ಅದು ಕೋಚಿಂಗ್ ಕಾರಣ. ಯುಪಿಎಸ್ಸಿ ಸಾಂವಿಧಾನಿಕ ಸಂಸ್ಥೆ, ತನ್ನದೇ ಆದ ಘನತೆ ಉಳಿಸಿಕೊಂಡಿದೆ. ಸೈನ್ಯಕ್ಕೆ ಸೇರಿದವರು ಹೊಟ್ಟೆ ಪಾಡಿಗೆ ಸೇರುತ್ತಾರೆ ಅಂದಿದ್ದರು. ದಿಲ್, ದಮ್ ಇದ್ದವರು ಮಾತ್ರ ಸೈನ್ಯಕ್ಕೆ ಸೇರುತ್ತಾರೆ. ಅವರಿಗೆ ದೇಶಭಕ್ತಿ ಇರುತ್ತದೆ. ಅಂತವರನ್ನು ಅನುಮಾನಿಸಿದ ಜನರು ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓದಿ:ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಬಿಜೆಪಿ ಬಡವರಿಗೆ ಮನೆ ಹಕ್ಕುಪತ್ರ ನೀಡುತ್ತಿದೆ: ಸಚಿವ ವಿ.ಸೋಮಣ್ಣ