ಬೆಂಗಳೂರು:ಬೇರೆ ಸಮುದಾಯಕ್ಕೆ ಅನ್ಯಾಯವಾಗದ ಹಾಗೆ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ನ್ಯಾಯ ಕೊಡಿಸಬೇಕು. ಈ ಹೊಣೆಗಾರಿಕೆ ನಮ್ಮ ಮೇಲಿದೆ. ಆದರೆ ಯಾವ ವರ್ಗಕ್ಕೆ ನ್ಯಾಯ ಸಿಕ್ಕಿಲ್ಲವೋ ಆ ವರ್ಗಕ್ಕೆ ನ್ಯಾಯ ಕೊಡಬೇಕು. ತಕ್ಕಡಿ ಹಿಡಿದು ನ್ಯಾಯ ಮಾಡಬೇಕು, ಸಣ್ಣ ಸಮುದಾಯಗಳಿಗೆ ಆತಂಕ ಬಾರದ ಹಾಗೆ ವಿಶ್ವಾಸ ತುಂಬಬೇಕು ಎಂದು ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳ ಬೇಡಿಕೆ ಕುರಿತು ತಮ್ಮದೇ ಆದ ರೀತಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವ್ಯಾಖ್ಯಾನ ಮಾಡಿದ್ದಾರೆ.
ಸರ್ಕಾರಿ ನಿವಾಸದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ವಿಷಯ ಬಹಳ ಸೂಕ್ಷ್ಮ ವಿಚಾರವಾಗಿದೆ. ಮೀಸಲಾತಿ ದುರ್ಬಲ ವರ್ಗಕ್ಕೆ ಸಿಗಬೇಕು. ಕಾಲ ಕಾಲಕ್ಕೆ ಮಾರ್ಪಾಡಾಗಬೇಕು. ರಾಜಕಾರಣದಲ್ಲಿ ಸಾಂದರ್ಭಿಕವಾಗಿ ಹೇಳುವುದು ತಪ್ಪಾಗುತ್ತದೆ ಎಂದಿದ್ದಾರೆ.
ಒಕ್ಕಲಿಗ ಸಮುದಾಯ ಮೀಸಲಾತಿಗೆ ಬೀದಿಗಿಳಿದರೆ ನೀವು ಬೆಂಬಲಿಸ್ತೀರಾ.?ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೋಡೋಣ ಸಂದರ್ಭ ಬಂದಾಗ ನೋಡೋಣ, ಸಮಯ ಬಂದರೆ ನ್ಯಾಯದ ತಕ್ಕಡಿ ಹಿಡಿದೇ ಹೋಗೋದು. ಯಾವುದೇ ಸಮುದಾಯಕ್ಕೆ ಅನ್ಯಾಯ ಆಗದಂತೆ ಹಾಗೂ ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸುವುದೇ ನಮ್ಮ ಹೊಣೆ ಎಂದರು.
ತಂತ್ರಜ್ಞಾನ ಬಳಸಿಕೊಂಡು ರಸ್ತೆಗುಂಡಿ ಮುಚ್ಚಬೇಕು :ರಸ್ತೆ ಗುಂಡಿಗೆ ಮಹಿಳೆ ಬಲಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿ ಟಿ ರವಿ, ಆರು ಸಾವಿರ ಕೋಟಿ ವಿಶೇಷ ಅನುದಾನವನ್ನು ಬೆಂಗಳೂರಿಗೆ ಕೊಟ್ಟಿದ್ದಾರೆ. ಮಳೆ ಇನ್ನೂ ನಿಂತಿಲ್ಲ. ಸುವ್ಯವಸ್ಥೆ ರೀತಿಯಲ್ಲಿ ಪಾಥ್ ಹೋಲ್ ಮುಚ್ಚಬೇಕಿದೆ. ಟೆಕ್ನಾಲಜಿ ಬಳಸಿಕೊಂಡು ರಸ್ತೆ ಗುಂಡಿ ಮುಚ್ಚಬೇಕು. ಮುಚ್ಚುವ ಜವಾಬ್ದಾರಿ ಸರ್ಕಾರದ ಮೇಲಿದೆ. ಅದನ್ನು ಸರ್ಕಾರ ಮಾಡಲಿದೆ ಎಂದರು.
ರಾಹುಲ್ ಶಿವಭಕ್ತಿ ನಿಜವಾದರೆ ಒಳ್ಳೆಯದು :ನೆಹರು ನನ್ನನ್ನ ಕತ್ತೆ ಅಂತ ಕರೀರಿ, ಹಿಂದೂ ಅಂತ ಕರೀಬೇಡಿ ಅಂದಿದ್ದರು. ಈಗ ರಾಹುಲ್ ಗಾಂಧಿ ಶಿವ ಭಕ್ತ ಅಂತ ಹೇಳುತ್ತಿದ್ದಾರೆ. ಶಿವನ ಭಕ್ತಿ ನಿಜವಾಗಿಯೂ ಇದ್ದರೆ ಒಳ್ಳೆಯದು. ಅದು ನಾಟಕ ಆಗಬಾರದು. ಇವರ ಅಮ್ಮ ಕುಂಕುಮ ಇಡುತ್ತಾರೋ ಇಲ್ಲವೋ. ನಮ್ಮ ಕಡೆ ಮದುವೆಯಲ್ಲಾದರೂ ಅರಿಶಿಣ, ಕುಂಕುಮ ಇಡುತ್ತಾರೆ. ಇವರು ಮದುವೆಯಲ್ಲೂ ಇಟ್ಟಿದ್ದರೋ ಇಲ್ಲವೋ ಗೊತ್ತಿಲ್ಲ ಎಂದು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಬಗ್ಗೆ ಸಿ ಟಿ ರವಿ ವ್ಯಂಗ್ಯವಾಡಿದರು.
ಭಾರತ್ ಜೋಡೋ ಕೈ ಹಿಡಿದುಕೊಂಡು ಓಡೋದು, ವಾಟರ್ ಟ್ಯಾಂಕ್ ಹತ್ತೋದು ಮಾಡುತ್ತಾರೆ. ಸಹಜ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಯಾವ ಲೀಡರ್ ತಾನೆ ವಾಟರ್ ಟ್ಯಾಂಕ್ ಹತ್ತುತ್ತಾರೆ ಹೇಳಿ? ಬಸ್ಕಿ ಹೊಡೆದಿದ್ದು, ಸ್ವಿಮ್ ಮಾಡಿದ್ದು, ಕೈ ಹಿಡಿದಿದ್ದು ಅಷ್ಟೇ ಸುದ್ದಿ ಬಿಟ್ಟರೆ ಬೇರೇನು ಇಲ್ಲ. ಮೋದಿಯನ್ನ ಬೈಯೋದು, ವಿಧೂಷಕನ ಪಾತ್ರ ಹಚ್ಚೋದು ಅಷ್ಟೇ ಇವರ ಕೆಲಸ ಎಂದು ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಕಲುರಿತು ಕುಹಕವಾಡಿದರು.