ಬೆಂಗಳೂರು: ಕುಮಾರಸ್ವಾಮಿಯವರೇ ಇದುವರೆಗೂ ಬಡವ ಬಲ್ಲಿದ ಎಂಬ ಭೇದವಿಲ್ಲದೆ ಕೋಟ್ಯಂತರ ಮಂದಿ ರಾಮ ಭಕ್ತರು ಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಟಿದ್ದಾರೆ. ಅವರಿಗೆ ಇಲ್ಲದ ಅನುಮಾನ, ಅಪನಂಬಿಕೆ ದುಡ್ಡನ್ನೇ ಕೊಡದ ನಿಮಗೆ ಯಾಕೆ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಷ್ಟ್ರ ಮಂದಿರಕ್ಕೆ ಪ್ರತಿಯೊಬ್ಬ ಭಾರತೀಯನ, ರಾಮ ಭಕ್ತನ ಕಾಣಿಕೆ ಇರಬೇಕು ಅನ್ನುವ ಏಕೈಕ ದೃಷ್ಟಿಯಿಂದ ಕರಸೇವಕರು, ಸ್ವಯಂಸೇವಕರು ಸಮಾಜದ ಪ್ರತಿಯೊಬ್ಬರ ಮನೆಯನ್ನೂ ಸಂಪರ್ಕ ಮಾಡುತ್ತಿರುವುದು. ಅದು ಭಿಕ್ಷುಕನೇ ಇರಲಿ ಅಥವಾ ಅಗರ್ಭ ಸಿರಿವಂತನೇ ಇರಲಿ. ತಮ್ಮ ಕೈಯಲ್ಲಿ ಆದ ದೇಣಿಗೆ ಕೊಡಲಿ ಎನ್ನುವ ಕಾರಣಕ್ಕೆ ಕುಮಾರಸ್ವಾಮಿಯವರೇ. ಹಣದ ಸಂಗ್ರಹವೇ ನಮ್ಮ ಗುರಿ ಆಗಿದ್ದರೆ ನಾವು ಮನೆ ಮನೆಗೆ ಹೋಗಿ ಸಂಗ್ರಹ ಮಾಡುವ ಆವಶ್ಯಕತೆ ಇರಲಿಲ್ಲ ಎಂದು ಟಾಂಗ್ ನೀಡಿದ್ದಾರೆ.
ದೇಶದ ಉದ್ಯೋಗಪತಿಗಳೇ ಮಂದಿರದ ನಿರ್ಮಾಣದ ಸಂಪೂರ್ಣ ಖರ್ಚು ಕೊಡುತ್ತಿದ್ದರು. ಅದು ಹಾಗಾಗಬಾರದು, ಪ್ರಭು ಶ್ರೀ ರಾಮಚಂದ್ರ ಈ ದೇಶದ ರಾಷ್ಟ್ರ ಪುರುಷ, ಅವನಿಗೆ ನಿರ್ಮಾಣ ಮಾಡುವ ಮಂದಿರ ಅದು ರಾಷ್ಟ್ರ ಮಂದಿರ. ತುರ್ತುಪರಿಸ್ಥಿತಿ ದೇಶದಲ್ಲಿ ಇಲ್ಲ, ಇಲ್ಲಿ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಪೂರ್ಣ ಬಹುಮತದಿಂದ ಆಯ್ಕೆಯಾದ ಮೋದಿ ಸರ್ಕಾರ. ಆದರೆ ತುರ್ತುಸ್ಥಿತಿಯಂತಹ ಪರಿಸ್ಥಿತಿ ಇದ್ದದ್ದು ನಿಮ್ಮ ಮೂರು ಜಿಲ್ಲೆಯ ಸರ್ಕಾರ 2019ರಲ್ಲಿ ಅಧಿಕಾರಕ್ಕೆ ಬಂದಿದ್ದಾಗ ಎಂದು ತಿರುಗೇಟು ನೀಡಿದ್ದಾರೆ.