ಬೆಂಗಳೂರು: ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರು ಕಾರಣವಾದರು. ಹಾಗೆಯೇ ತಮಿಳುನಾಡು ಮತ್ತು ತೆಲಂಗಾಣದಲ್ಲಿಯೂ ಪಕ್ಷ ಶಕ್ತಿಶಾಲಿಯಾಗಲು ಅವರ ಸೇವೆ ನೆರೆ ರಾಜ್ಯಗಳಿಗೂ ಸಿಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ಯಡಿಯೂರಪ್ಪ ನಿವಾಸದಲ್ಲಿ ಮಾತನಾಡಿದ ಅವರು, ಬಿಎಸ್ವೈ ಸಾಮಾನ್ಯ ಕಾರ್ಯಕರ್ತರಾಗಿ ಹಲವು ಜವಾಬ್ದಾರಿ ನಿರ್ವಹಿಸಿದ್ದಾರೆ. ಇಂದು ಪಕ್ಷದ ಅತ್ಯುನ್ನತ ಮಂಡಳಿಗೆ ನೇಮಕವಾಗಿರುವುದು ಸಂತಸ ತಂದಿದೆ. ಕರ್ನಾಟಕದಿಂದ ಯಡಿಯೂರಪ್ಪ ಮತ್ತು ಬಿ ಎಲ್ ಸಂತೋಷ್ ಹಾಗೂ ಆಂಧ್ರ, ತಮಿಳುನಾಡಿನಿಂದ ತಲಾ ಒಬ್ಬರಿಗೆ ಸಂಸದೀಯ ಮಂಡಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಪಕ್ಷದ ಉನ್ನತ ನಿರ್ಧಾರ ಕೈಗೊಳ್ಳುವ ಮಂಡಳಿ ಇದಾಗಿದೆ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಯಡಿಯೂರಪ್ಪ ಕಾರಣ. ಅದರಂತೆ ತೆಲಂಗಾಣ, ಆಂಧ್ರದಲ್ಲೂ ಅವರ ಸೇವೆ ಸಿಗಲಿದೆ. ಎಲ್ಲಾ ರೀತಿಯ ಊಹಾಪೋಹದ ಪ್ರಶ್ನೆಗಳಿಗೆ ಇಂದು ಉತ್ತರ ಸಿಕ್ಕಿದೆ ಎಂದರು.
ಟವೆಲ್ ಹಾಕಿದವರ ಕೈ ಕಟ್ಟಿಹಾಕಲಿದ್ದಾರೆ ಬಿಎಸ್ವೈ: ಯಾರು ಯಾರನ್ನ ಎಲ್ಲೆಲ್ಲಿ ಕಟ್ಟಿಹಾಕಬೇಕು ಎಂದು ಯಡಿಯೂರಪ್ಪ ತೀರ್ಮಾನ ಮಾಡಲಿದ್ದಾರೆ. ಎಲ್ಲೆಲ್ಲಿ ಟವೆಲ್ ಹಾಕಿದ್ದಾರೋ ಅಲ್ಲಿ ಅಂತವರ ಕೈ ಕಟ್ಟಿಹಾಕಲಿದ್ದಾರೆ. ಇತರ ಪಕ್ಷದ ಕೈ ಕಟ್ಟಿ ಹಾಕಲು ಯಡಿಯೂರಪ್ಪ ಈಗ ಸಂಸದೀಯ ಮಂಡಳಿಗೆ ಹೋಗಿದ್ದಾರೆ. ಇದು ಸ್ವಪಕ್ಷೀಯ ನಾಯಕರಿಗೂ ಅನ್ವಯವಾಗಲಿದೆಯಾ ಎನ್ನುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಟಿ ರವಿ, ಟವೆಲ್ ಹಾಕಿದ್ದು ಕಾಂಗ್ರೆಸ್, ನಮ್ಮ ಪಕ್ಷದಲ್ಲಿ ಅಲ್ಲ. ನಮ್ಮಲ್ಲಿ ಆ ರೀತಿ ಯಾವ ವಿದ್ಯಮಾನ ನಡೆಯುತ್ತಿಲ್ಲ. ಸಿಎಂ ಖುರ್ಚಿ ಖಾಲಿ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ:ಸಂಸದೀಯ ಮಂಡಳಿಯಲ್ಲಿ ಬಿಎಸ್ವೈಗೆ ಸ್ಥಾನ: ಪಕ್ಷ, ಸರ್ಕಾರದ ಹುಮ್ಮಸ್ಸು ಇಮ್ಮಡಿ ಎಂದ ಬೊಮ್ಮಾಯಿ
ನಿರ್ಧಾರ ಸ್ವಾಗತಿಸಿದ ಈರಣ್ಣ ಕಡಾಡಿ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಪಕ್ಷದ ಕೇಂದ್ರ ಸಂಸದೀಯ ಮಂಡಳಿಯಲ್ಲಿ ಸ್ಥಾನ ಕಲ್ಪಿಸಿದ ಹೈಕಮಾಂಡ್ ನಿರ್ಧಾರವನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸ್ವಾಗತಿಸಿದ್ದಾರೆ.ಯಡಿಯೂರಪ್ಪ ಅವರಿಗೆ ಅವಕಾಶ ನೀಡಿದ ರಾಷ್ಟ್ರೀಯ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಮೂಲಕ ಯಡಿಯೂರಪ್ಪ ಅವರಿಗೂ ಶುಭಾಶಯ ತಿಳಿಸುತ್ತೇನೆ. ಇದರಿಂದ ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭಿವೃದ್ಧಿಗೆ ಸಹಾಯ ಆಗುತ್ತದೆ ಎಂದರು.