ಬೆಂಗಳೂರು: ಈ ಬಾರಿಯ ಮೈಸೂರು ದಸರಾ ಉದ್ಘಾಟಕರನ್ನಾಗಿ ಖ್ಯಾತ ಹೃದ್ರೋಗ ತಜ್ಞ ಹಾಗೂ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ. ಸಿ. ಎನ್. ಮಂಜುನಾಥ್ ಅವರಿಗೆ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್ ಆಮಂತ್ರಣ ನೀಡಿ ಆಹ್ವಾನಿಸಿದರು.
ಆಹ್ವಾನ ಸ್ವೀಕರಿಸಿ ಮಾತನಾಡಿದ ಡಾ. ಸಿ.ಎನ್. ಮಂಜುನಾಥ್, ಮೈಸೂರು ದಸರಾ ಉದ್ಘಾಟನೆಗೆ ಪ್ರಪ್ರಥಮ ಬಾರಿಗೆ ವೈದ್ಯರನ್ನು ಆಹ್ವಾನಿಸಲಾಗಿದೆ. ಇದು ನನ್ನ ಜೀವಿತಾವಧಿಯಲ್ಲಿ ದೊರೆತ ಅತ್ಯಂತ ದೊಡ್ಡ ಗೌರವ. ಅಲ್ಲದೇ, ಇಡೀ ವೈದ್ಯಕೀಯ ಸಮುದಾಯ ಮತ್ತು ಫ್ರಂಟ್ ಲೈನ್ ವಾರಿಯರ್ಸ್ ಗೆ ಕೊಟ್ಟ ಮಾನ್ಯತೆ ಎಂದು ಭಾವಿಸುತ್ತೇನೆಂದು ಸಂತಸ ವ್ಯಕ್ತಪಡಿಸಿದರು.
ಪಿಯುಸಿ, ಮೆಡಿಕಲ್ ಸೇರಿದಂತೆ ಹಲವು ಘಟ್ಟಗಳನ್ನು ಮೈಸೂರಿನಲ್ಲಿಯೇ ಕಲಿತ್ತಿದ್ದೇನೆ. ಆಗೆಲ್ಲಾ ಗೆಳೆಯರ ಜೊತೆ ಸಯ್ಯಾಜಿ ರಾವ್ ರಸ್ತೆಯಲ್ಲಿ ನಿಂತು ದಸರಾ ನೋಡುತ್ತಿದ್ವಿ. ಎರಡು ವರ್ಷಗಳ ಹಿಂದೆ ಮತ್ತೊಮ್ಮೆ ಸ್ನೇಹಿತರ ಜೊತೆ ಇಡೀ ದಸರಾವನ್ನು ಕಾಲ್ನಡಿಗೆಯಲ್ಲಿ ತೆರಳಿ ನೋಡಿದ್ದೆವು. ಅಂದಿನ ಮೈಸೂರು ಇಂದಿನ ಕರ್ನಾಟಕ ಎರಡಕ್ಕೂ ದಸರಾ ವಿಶ್ವಮಾನ್ಯತೆ ತಂದುಕೊಟ್ಟಿದೆ ಎಂದರು.
ಜಂಬೂಸವಾರಿ, ಅರಮನೆಯ ಸಂಗೀತ ಕಚೇರಿ ಮತ್ತು ಚಾಮುಂಡಿ ಬೆಟ್ಟದ ಮೇಲೆ ನಿಂತು ದೀಪದಿಂದ ಅಲಂಕೃತವಾಗಿರುವ ಅರಮನೆ ನೋಡುವುದು ಅತ್ಯಂತ ಸಂತಸ ಕೊಡುವ ವಿಚಾರ ಎಂದ ಅವರು, ಇದೇ ವೇಳೆ ಕಾರ್ಯಕ್ರಮಕ್ಕೆ ಅವಕಾಶ ನೀಡಿದ ದಸರಾ ಸಮಿತಿ, ಮೇಯರ್, ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸಿದರು.