ಕರ್ನಾಟಕ

karnataka

ETV Bharat / state

ಅನ್ನಭಾಗ್ಯ ಅಕ್ಕಿ ಹೆಚ್ಚಳಕ್ಕೆ ಸಿಎಂ ನಿರಾಕರಣೆ, ಯೋಜನೆ ದುರುಪಯೋಗ,ಹೊರೆ ಕಾರಣ - State government

ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ತಳ್ಳಿಹಾಕಿರುವ ಸಿಎಂ, ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಅಕ್ಕಿಯ ಪ್ರಮಾಣವನ್ನು 7 ಕೆಜಿ ಯಿಂದ 5 ಕೆ ಜಿಗೆ ಇಳಿಸುವ ಪ್ರಸ್ತಾಪ ಮಾಡಿರುವುದಾಗಿ ತಿಳಿದುಬಂದಿದೆ. ಅಕ್ಕಿಯ ಪ್ರಮಾಣ ಏರಿಕೆ ಮಾಡಿದರೆ, ಸರ್ಕಾರಕ್ಕೆ ಮತ್ತಷ್ಟು ಹೊರೆ ಬೀಳಲಿದೆ ಎನ್ನಲಾಗಿದೆ.

ಸಚಿವ ಸಂಪುಟ ಸಭೆ

By

Published : Jun 6, 2019, 9:17 PM IST

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಜನಪ್ರಿಯ ಯೋಜನೆಯಾದ 'ಅನ್ನಭಾಗ್ಯ ಯೋಜನೆ'ಯ ಅಕ್ಕಿ ಪ್ರಮಾಣ ಏರಿಕೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಒಪ್ಪಿಗೆ ನೀಡಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾದರೆ,ಅನ್ನಭಾಗ್ಯದ ಯೋಜನೆಯ ಅಕ್ಕಿಯನ್ನು 10 ಕೆ.ಜಿಗೆ ಹೆಚ್ಚಿಸುವುದಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈಗಿರುವ ಅಕ್ಕಿಯ ಪ್ರಮಾಣವನ್ನು 7 ಕೆಜಿ ಯಿಂದ 10 ಕೆಜಿ ಗೆ ಏರಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದರು.

ಆದ್ರೆ, ಸಿದ್ದು ಮನವಿ ತಳ್ಳಿಹಾಕಿರುವ ಸಿಎಂ, 7 ಕೆಜಿ ಯಿಂದ 5 ಕೆ ಜಿ ಇಳಿಸುವ ವಿಚಾರ ಪ್ರಸ್ತಾಪ ಮಾಡಿರುವುದಾಗಿ ತಿಳಿದುಬಂದಿದೆ. ಅಕ್ಕಿ ಏರಿಕೆ ಮಾಡಿದರೆ ಸರ್ಕಾರಕ್ಕೆ ಮತ್ತಷ್ಟು ಹೊರೆಯಾಗಲಿದೆ. ಈಗ ಪ್ರತಿ ತಲೆಗೆ 7 ಕೆಜಿ ಅಕ್ಕಿ ಸಿಗುತ್ತಿದೆ, ಒಂದು ತಿಂಗಳಿಗೆ ಒಬ್ಬರಿಗೆ 7 ಕೆಜಿ ಅಂದ್ರೆ ಹೆಚ್ಚು. ಅದೂ ಅಲ್ಲದೇ ಪಟ್ಟಣ ಪ್ರದೇಶಗಳಲ್ಲಿ ಈ ಯೋಜನೆಗಳ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಸಮರ್ಥನೆ ನೀಡಿದ್ದಾರೆ ಎನ್ನಲಾಗಿದೆ.

ನಮ್ಮ ಸರ್ಕಾರದ ಜನಪ್ರಿಯ ಯೋಜನೆ ಇದಾಗಿದ್ದು, ಕೇಂದ್ರದಿಂದಲೇ 5 ಕೆಜಿ ಅಕ್ಕಿ ಲಭ್ಯವಾಗುತ್ತಿದೆ. ಇದನ್ನೇ ನೀಡಿದರೆ ರಾಜ್ಯ ಸರ್ಕಾರ ಜನರಿಗೆ ಏನು ಕೊಟ್ಟ ಹಾಗೆ ಆಗುತ್ತದೆ? ಅಕ್ಕಿಯ ಪ್ರಮಾಣವನ್ನು 10 ಕೆಜಿಗೆ ಏರಿಸದಿದ್ದರೂ ಪರವಾಗಿಲ್ಲ, ಕಡಿತ ಬೇಡ. ಈ ಮೊದಲು ನೀಡುತ್ತಿದ್ದಂತೆ 7 ಕೆ.ಜಿ ಮುಂದುವರಿಸಿ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್‌ ಒತ್ತಡ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಖರೀದಿಸಲು ರಾಜ್ಯಸರ್ಕಾರ ಪ್ರತಿ ಬಜೆಟ್‌ನಲ್ಲೂ ಸುಮಾರು 1 ಸಾವಿರ ಕೋಟಿ ರೂ.ಗೂ ಅಧಿಕ ಹಣವನ್ನು ಮೀಸಲಿಡುತ್ತದೆ. ರಾಜ್ಯದಲ್ಲಿ ಸುಮಾರು ಒಂದೂವರೆ ಕೋಟಿಗೂ ಅಧಿಕ ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಜಿಂದಾಲ್ ಕಂಪನಿಗೆ ಭೂಮಿ ಕ್ರಯ ಮಾಡಿಕೊಡಲು ಸಂಪುಟ ಒಪ್ಪಿಗೆ ಸೂಚಿಸಿದ್ದರ ಕುರಿತು ಕೆಲ ಸಚಿವರಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದು ತಿಳಿದುಬಂದಿದೆ.

ABOUT THE AUTHOR

...view details