ಬೆಂಗಳೂರು: ಜೆಡಿಎಸ್ ಸೋಲಿನ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಳೆ ಜೆಡಿಎಸ್ ಅವಲೋಕನ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೊದಲೇ ಅವರು ರಾಜೀನಾಮೆ ಕೊಟ್ಟಿದ್ದಾರೆ.
ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ನಡೆದ ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಎಂ. ಇಬ್ರಾಹಿಂ ಅವರು, ಪಕ್ಷ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ಪಕ್ಷದ ವರಿಷ್ಠರಿಗೆ ರಾಜೀನಾಮೆ ಸಲ್ಲಿಸಿದ್ದೇನೆ. ಅದನ್ನು ಅಂಗೀಕರಿಸುವುದು, ಬಿಡುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೇಳಿದರು.
ಇವತ್ತು ದೇವೇಗೌಡರು, ನೂತನ. ಶಾಸಕರು, ಹಿರಿಯರು, ಮುಖಂಡರು ಎಲ್ಲರನ್ನೂ ಕರೆದಿದ್ದರು. ಫಲಿತಾಂಶ ಬಂದ ಮಾರನೇ ದಿನವೇ ಸೋಲಿನ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಹೊಸ ಸರ್ಕಾರ ರಚನೆಯಾಗಿದೆ ಶುಭವಾಗಲಿ ಎಂದರು. ಕಾಂಗ್ರೆಸ್‌ನಲ್ಲಿದ್ದರೆ ಮಂತ್ರಿಯಾಗುತ್ತಿದ್ರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗೌರವ ಇಲ್ಲದ ಕಡೆ ಸ್ಥಾನಕ್ಕೆ ಹೋಗಲ್ಲ, ಮಾನಕ್ಕೆ ಹೋಗ್ತೀವಿ ಎಂದು ಹೇಳಿದರು.
ಯು.ಟಿ.ಖಾದರ್ ಅವರನ್ನು ಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವ ಕುರಿತು ಮಾತನಾಡಿದ ಇಬ್ರಾಹಿಂ, ಯು.ಟಿ.ಖಾದರ್ ಅವರನ್ನು ಡಿಸಿಎಂ ಮಾಡಬಹುದಿತ್ತಲ್ಲ. ಈಗ ಅವರು ಎದ್ದೇಳಂಗೂ ಇಲ್ಲ, ಮಾತಾಡಂಗು ಇಲ್ಲ ಎಂದು ಹೇಳುವ ಮೂಲಕ ಯು.ಟಿ.ಖಾದರ್ ಅವರನ್ನು ಸ್ಪೀಕರ್ ಮಾಡಿದ ಕಾಂಗ್ರೆಸ್ ನಡೆ ಟೀಕಿಸಿದರು.
ಬಿಜೆಪಿ ವಿರೋಧಿ ಅಲೆ ಲಾಭ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೂ ನಾವು ರಾಜ್ಯದಲ್ಲಿ 60 ಲಕ್ಷ ಮತ ಪಡೆದಿದ್ದೇವೆ. ನಮ್ಮಲ್ಲಿ ಮತ ಪರಿವರ್ತನೆಗಾಗಿ ಸಿದ್ದತೆ ಮಾಡಿಕೊಳ್ಳುವಲ್ಲಿ ವಿಫಲವಾದೆವು. ಕೊನೆಯ ನಾಲ್ಕು ದಿನದ ತಂತ್ರಗಾರಿಕೆಯಲ್ಲಿ ವಿಫಲವಾದೆವು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ ಚುನಾವಣೆಗೆ ಸಜ್ಜಾಗಿ ಅಂತ ಕಾರ್ಯಕರ್ತರಿಗೆ ಹೇಳುತ್ತೇನೆ. ಈ ಸರ್ಕಾರದ ಮೂರು ತಿಂಗಳ ಹನಿಮೂನ್ ಪಿರೇಡ್ ನೋಡುತ್ತೇವೆ ಎಂದು ಹೇಳಿದರು.