ಬೆಂಗಳೂರು: ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಮೊದಲ ವೋಟ್ ಕಾಂಗ್ರೆಸ್ಗೆ, ಬಿಜೆಪಿಗೆ ಎರಡನೇ ವೋಟ್ ಹಾಕಿಸಿದ್ದು. ತಕ್ಷಣವೇ ಅವರನ್ನು ಪಕ್ಷದಿಂದ ವಜಾ ಮಾಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಕಿಡಿಕಾರಿದರು. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಅಡ್ಡ ಮತದಾನ ಹಾಕಿದ ಗುಬ್ಬಿ ಶ್ರೀನಿವಾಸ್ ಹಾಗೂ ಕೋಲಾರ ಶ್ರೀನಿವಾಸ್ ಗೌಡ ವಿರುದ್ಧ ಜೆಡಿಎಸ್ ಕಾರ್ಯಕರ್ತರು ನಗರದ ಫ್ರೀಡಂ ಪಾರ್ಕ್ ನಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿ.ಎಂ.ಇಬ್ರಾಹಿಂ, ಹೆಚ್ಡಿಕೆ ಸಿಎಂ ಆಗಲು ಸಿದ್ದು, ಡಿಕೆಶಿ ಫೌಂಡೇಶನ್ ಹಾಕಿದ್ದಾರೆ. ಜೆಡಿಎಸ್ ರಾಜ್ಯದಲ್ಲಿ ನಂ.1 ಆಗುತ್ತೆ, ಬಿಜೆಪಿ ನಂ.2, ಕಾಂಗ್ರೆಸ್ ನಂ.3 ಆಗುತ್ತದೆ ಅಂತ ಎಲ್ಲಿರಿಗೂ ಗೊತ್ತಿದೆ. ಸಿದ್ದರಾಮಯ್ಯ, ಡಿಕೆಶಿ ಮೊದಲ ವೋಟ್ ಕಾಂಗ್ರೆಸ್ಸಿಗೆ, ಎರಡನೇ ವೋಟ್ ಬಿಜೆಪಿಗೆ ಹಾಕಿಸಿದ್ದಾರೆ. ಅವರನ್ನು ಪಕ್ಷದಿಂದ ವಜಾ ಮಾಡಿ ಅಂತ ಸೋನಿಯಾ ಗಾಂಧಿಯವರಿಗೆ ವಿನಂತಿ ಮಾಡುತ್ತೇನೆ. ಸಿದ್ದರಾಮಯ್ಯ ಯಡಿಯೂರಪ್ಪರ ಜೊತೆಗೆ ಈಗಲೂ ಡೀಲ್ ಮಾಡಿಕೊಂಡ್ರು. ಅದಕ್ಕೆ ಸಿ.ಟಿ ರವಿ ಕಾಂಗ್ರೆಸ್ ಆಫೀಸಿಗೆ ಹೋಗಿ ಅಭಿನಂದನೆ ಸಲ್ಲಿಸಿದ್ದು. ಜೆಡಿಎಸ್ ಕಾರ್ಯಕರ್ತರಿಗೆ ನೋವಿದೆ, ಜನರಲ್ಲಿ ಆಕ್ರೋಶ ಇದೆ ಎಂದರು.
ಪರಾಜಿತ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮಾತನಾಡಿ, ಜೆಡಿಎಸ್ ಎಂದಿಗೂ ಬಿ ಟೀಂ ಅಲ್ಲ. ನಾವು ನಿಮ್ಮ ಜೊತೆ ಸರ್ಕಾರ ಮಾಡಿದರೆ ಒಂದು ವರ್ಷ ಸರ್ಕಾರ ನಡೆಸುವುದಕ್ಕೂ ಬಿಡಲಿಲ್ಲ ನೀವು. ರಾಜಕೀಯಕ್ಕೆ ಹಣ ಮಾಡಲು ಬಂದವನಲ್ಲ ನಾನು. ರಾಜಕೀಯದಲ್ಲಿ ದುಡ್ಡು ಮಾಡಬೇಕು ಅನ್ನೋ ಸ್ವಾರ್ಥ ಇಲ್ಲ. ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ ಎಂದು ಹೇಳಿದರು.