ಬೆಂಗಳೂರು: ಸಂಪುಟ ಪುನಾರಚನೆ ವಿಚಾರ ನಮ್ಮ ಮುಂದೆ ಇಲ್ಲ. ಇದೆಲ್ಲಾ ಊಹಾಪೋಹ ಅಷ್ಟೇ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಂಪುಟ ಪುನಾರಚನೆ ವಿಚಾರ ನಮ್ಮ ಮುಂದೆ ಇಲ್ಲ. ಇದೆಲ್ಲವೂ ಊಹಾಪೋಹ. ಯಾವುದೇ ರೀತಿಯ ಆ ತರದ ಯೋಚನೆಗಳು ನಮ್ಮ ಕಣ್ಮುಂದೆ ಇಲ್ಲ. ಕೇಂದ್ರ ಸರ್ಕಾರವೂ ಈವರೆಗೆ ಯಾವುದೇ ಸೂಚನೆ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಮುಂದೆ ಸೂಚನೆ ಕೊಟ್ರೆ ಅವರು ಹೇಳಿದಂತೆ ನಾವು ಮಾಡ್ತೇವೆ ಎಂದರು.
ಸಿಎಂ ಬಿ ಎಸ್ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಸುಧಾಕರ್ ಮಾತನಾಡಿದರು ಪಿಯುಸಿ,ಎಸ್ಎಸ್ಎಲ್‌ಸಿ ಪರೀಕ್ಷೆ ಬಗ್ಗೆ ಚರ್ಚೆ ನಡೀತಿದೆ: ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್‌ಸಿ ಪರೀಕ್ಷೆ ರದ್ದು ಬಗ್ಗೆ ಚರ್ಚೆ ನಡೆಯುತ್ತಿದೆ. ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಜತೆ ಚರ್ಚೆ ಮಾಡಿದ್ದೇವೆ. ಕೇಂದ್ರ ಸರ್ಕಾರದ ಮನಸ್ಸಿನಲ್ಲಿ ಪರೀಕ್ಷೆ ನಡೆಸೋದು ಬೇಡ ಅಂತ ಇದೆ. ಮುಂದೇನು ಅನ್ನೋದನ್ನು ತಿಳ್ಕೊಂಡು ಕೆಲವು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಚಾಲಕರಿಗೆ ಪರಿಹಾರ ವಿತರಣೆಯಲ್ಲಿ ಗೊಂದಲ ವಿಚಾರವಾಗಿ ಮಾತನಾಡಿದ ಅವರು, 100 ಕ್ಕೆ 70 ಭಾಗ ಪರಿಹಾರ ವಿತರಣೆ ಆಗಿದೆ. ಇನ್ನೊಂದು ವಾರದಲ್ಲಿ ಎಲ್ಲರಿಗೂ ಪರಿಹಾರ ಸಿಗಲಿದೆ. ಯಾವುದೇ ಕಾರಣಕ್ಕೂ ವಿಳಂಬ ಮಾಡಲ್ಲ ಎಂದು ಸಿಎಂ ಹೇಳಿದರು.
ರಾಜ್ಯಕ್ಕೆ 58 ಲಕ್ಷ ಲಸಿಕೆ ಬರಲಿದೆ: ಇದೇ ತಿಂಗಳಲ್ಲಿ 58 ಲಕ್ಷ ಲಸಿಕೆ ಕೊಡುವ ಅವಕಾಶ ಇದೆ. ನಾವು ಖರೀದಿ ಮಾಡಿರುವುದರಲ್ಲಿ ಸುಮಾರು 13-14 ಲಕ್ಷ ಇದೇ ತಿಂಗಳಲ್ಲಿ ಬರುತ್ತದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಜೂನ್ ತಿಂಗಳಲ್ಲಿ ಕೇಂದ್ರದಿಂದ 58 ಲಕ್ಷ ಲಸಿಕೆ ಬರಲಿದೆ. 44 ಲಕ್ಷ ಲಸಿಕೆಯನ್ನು ಉಚಿತವಾಗಿ ಕೇಂದ್ರ ಸರ್ಕಾರ ಕೊಡುತ್ತಿದೆ. ಈಗಾಗಲೇ 1.22 ಕೋಟಿ ರಾಜ್ಯದಲ್ಲಿ ಲಸಿಕೆ ಕೊಟ್ಟಿದ್ದೇವೆ. ಈ ತಿಂಗಳು 58 ಲಕ್ಷ ಜನರಿಗೆ ಲಸಿಕೆ ಕೊಡ್ತೇವೆ ಎಂದು ಮಾಹಿತಿ ನೀಡಿದರು.
ಓದಿ:ಶಿಲ್ಪಾ ನಾಗ್ ಆರೋಪಕ್ಕೆ ಸಿಂಧೂರಿ ದಿಢೀರ್ ಸ್ಪಷ್ಟನೆ.. ಪತ್ರಿಕಾ ಪ್ರಕಟಣೆಯಲ್ಲಿ ಡಿಸಿ ಎಡವಟ್ಟು