ಬೆಂಗಳೂರು: ಅತೃಪ್ತರಲ್ಲಿನ ಅಸಮಾಧಾನದ ಸ್ಫೋಟದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಕೊರೊನಾ ನಡುವೆ ಹೊಸ ಸಂಕಷ್ಟ ಎದುರಾಗಿದೆ. ರಾಜ್ಯಸಭಾ ಟಿಕೆಟ್ ಗೆ ಸೀಮಿತವಾದರೆ ಸಮಸ್ಯೆಯಲ್ಲ. ಅದನ್ನು ಮೀರಿದರೆ ಹೇಗೆ ಎನ್ನುವ ಸಂದಿಗ್ಧತೆಗೆ ಸಿಲುಕುವಂತೆ ಮಾಡಿದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಸಿಡಿದಿರುವ ಉತ್ತರ ಕರ್ನಾಟಕ ಭಾಗದ ಶಾಸಕರ ವರ್ತನೆಗೆ ಸಿಎಂ ತಲ್ಲಣಗೊಂಡಿದ್ದಾರೆ. ಪರಿಷತ್ ಟಿಕೆಟ್, ರಾಜ್ಯಸಭಾ ಟಿಕೆಟ್, ಕ್ಷೇತ್ರಕ್ಕೆ ಅನುದಾನ, ಮೂವರಿಗೆ ಸಚಿವ ಸ್ಥಾನ, ಆಡಳಿತದಲ್ಲಿ ಸಿಎಂ ಕುಟುಂಬದ ಹಸ್ತಕ್ಷೇಪ ನಿಲ್ಲಬೇಕು ಎನ್ನುವ ಬೇಡಿಕೆಗಳನ್ನು ಮುಂದಿಟ್ಟು ಸಭೆಗಳನ್ನು ನಡೆಸಿದ್ದಾರೆ.
ಈ ಸಭೆ ಕೇವಲ ಪರಿಷತ್, ರಾಜ್ಯಸಭಾ ಟಿಕೆಟ್ ಗೆ ಸೀಮಿತವಾದರೆ ಸರ್ಕಾರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಲ್ಲ, ಸಚಿವ ಸ್ಥಾನದ ಬೇಡಿಕೆನ್ನೂ ಸಿಎಂ ಪರಿಗಣಿಸಲು ಸಿದ್ದರಿದ್ದಾರೆ. ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡುವ ಹೇಳಿಕೆಯನ್ನು ಅವರೇ ಹೇಳಿದ್ದಾರೆ. ಹಾಗಾಗಿ ಇದು ಅಷ್ಟೇನು ಸಮಸ್ಯೆಯ ವಿಷಯವಾಗಲ್ಲ.
ಒಂದು ವೇಳೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬೇಕೇಬೇಕು ಎಂದು ಪಟ್ಟುಹಿಡಿದರೆ ಮಾತ್ರ ಪರಿಸ್ಥಿತಿ ಕೈಮೀರಲಿದೆ. ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲ. ಆರ್ಥಿಕ ಸ್ಥಿತಿ ಸರಿಯಿಲ್ಲ ಎಂದು ಸ್ವತಃ ಸಿಎಂ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಕೊರೊನಾ ಕಾರ್ಯಾಚರಣೆ, ವಿಶೇಷ ಪ್ಯಾಕೇಜ್ ಗೆ ಹಣ ಹೊಂದಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ವೇಳೆ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವುದು ಕಷ್ಟಸಾಧ್ಯ ಹಾಗಾಗಿ ಈ ವಿಚಾರದಲ್ಲಿ ಅತೃಪ್ತರರು ಪಟ್ಟು ಸಡಿಲಿಕೆ ಮಾಡದೇ ಇದ್ದರೆ ಯಡಿಯೂರಪ್ಪ ಅವರಿಗೆ ಹೊಸ ಸಂಕಷ್ಟ ಎದುರಾಗಲಿದೆ, ಬಂಡಾಯ ಚಟುವಟಕೆ ಮುಂದುವರೆಯಲಿದೆ ಎನ್ನಲಾಗ್ತಿದೆ.