ಬೆಂಗಳೂರು :ಅಕ್ರಮ ಸಂಬಂಧವನ್ನು ಮುಂದುವರಿಸಲು ಒತ್ತಡ ಹೇರಿ ಮಹಿಳೆಯ ಅಣ್ಣನನ್ನು ಅಪಹರಿಸಿ ಪೀಡಿಸಿದ್ದ ಆರೋಪಿ ಸೇರಿದಂತೆ ಆರು ಮಂದಿಯನ್ನು ನಗರದ ಪಶ್ಚಿಮ ವಿಭಾಗದ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಮಾಹಿತಿ ನೀಡಿದ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಸೀನಾ ಎಂಬ ಐನಾತಿಗೆ ಅದಾಗಲೇ ಎರಡು ಮದುವೆಯಾಗಿತ್ತು. ಎರಡನೇ ಹೆಂಡತಿಯ ಜೊತೆ ನಗರದ ಬ್ಯಾಡರಹಳ್ಳಿಯಲ್ಲಿ ವಾಸವಾಗಿದ್ದ. ಸಾಲದ್ದಕ್ಕೆ ಎದುರು ಮನೆಯಲ್ಲಿದ್ದ ವಿಚ್ಛೇದಿತ ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಶುರು ಮಾಡಿಕೊಂಡಿದ್ದನು. ಇವರ ಪ್ರೇಮ ಪ್ರಸಂಗ ಮನೆಯವರಿಗೂ ಗೊತ್ತಾಗಿ ಗಲಾಟೆ ಕೂಡ ನಡೆದಿತ್ತು.
ಇದಾದ ನಂತರ ಇಬ್ಬರು ಹೆಂಡತಿಯರ ಗಂಡ ಶ್ರೀನಿವಾಸ್ ಅಲಿಯಾಸ್ ಬೊಟ್ಟು ಸೀನಾ, ಮೂರನೇ ಪ್ರೇಯಸಿಗಾಗಿ ಬೇರೆ ಮನೆ ಮಾಡಿದ್ದನು. ಎರಡು ತಿಂಗಳ ನಂತರ ಮೂರನೇ ಪ್ರೇಮವೂ ಹಳಸಿ, ಬೊಟ್ಟು ಸೀನಾನನ್ನು ಬಿಟ್ಟು ಮಹಿಳೆ ತವರು ಸೇರಿದ್ದಳು.
ಇದರಿಂದ ಕೋಪಗೊಂಡ ಸೀನಾ ಪದೇಪದೆ ಆ ಮಹಿಳೆಯ ಅಣ್ಣ ವೆಂಕಟೇಶ್ಗೆ ಫೋನ್ ಮಾಡಿ ತಂಗಿ ಕಳುಹಿಸುಂತೆ ಹಿಂಸಿಸುತ್ತಿದ್ದನಂತೆ. ಇದಕ್ಕೆ ಒಪ್ಪದಿದ್ದಾಗ ವೆಂಕಟೇಶ್ನನ್ನು ಅಪಹರಿಸಲು ಪ್ಲಾನ್ ಮಾಡಿ ಸಿಕ್ಕಿಬಿದ್ದಿದ್ದಾನೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್.. ಇಬ್ಬರು ಆರೋಪಿಗಳ ಬಂಧನ
ರೌಡಿ ಶೀಟರ್ ಆಕಾಶ್ ಎಂಬುವವನ ಜೊತೆ ಸೇರಿ ಜನವರಿ.20 ರಂದು ಬಸ್ ಡ್ರೈವರ್ ಆಗಿದ್ದ ವೆಂಕಟೇಶ್ನನ್ನು ಸ್ವಿಫ್ಟ್ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದರು. ಕಿಡ್ನಾಪ್ ಮಾಡಿ ಊರು ಸುತ್ತಿಸಿ ಸೀನಾ ವೆಂಕಟೇಶ್ಗೆ ಹಲ್ಲೆ ನಡೆಸಿದ್ದರು. ತಂಗಿಗೆ ವಿಡಿಯೋ ಕಾಲ್ ಮಾಡಿ ನೀನು ಬರದಿದ್ದರೆ ಮುಗಿಸುವುದಾಗಿ ಧಮ್ಕಿ ಹಾಕಿದ್ದನು. ಈ ಕುರಿತು ಬ್ಯಾಡರಹಳ್ಳಿ ಠಾಣೆಗೆ ಮಹಿಳೆ ದೂರು ನೀಡಿದ್ದಳು ಎಂದು ಮಾಹಿತಿ ನೀಡಿದ್ದಾರೆ.
ದೂರು ದಾಖಲಾದ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್:
ದೂರು ದಾಖಲಾಗುತ್ತಿದ್ದಂತೆ ಕಾರ್ಯ ಪ್ರವೃತ್ತರಾದ ಬ್ಯಾಡರಹಳ್ಳಿ ಇನ್ಸ್ಪೆಕ್ಟರ್ ರವಿ ಕುಮಾರ್, ಸಬ್ ಇನ್ಸ್ಪೆಕ್ಟರ್ ನವೀನ್ ಪ್ರಸಾದ್ ನೇತೃತ್ವದಲ್ಲಿ ಒಂದು ತಂಡ ರಚಿಸಿ ಆರೋಪಿಗಳಿಗೆ ಕೆಲವೇ ಗಂಟೆಗಳಲ್ಲಿ ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಘಟನೆ ಸಂಬಂಧ ಸೀನಾ, ಆಕಾಶ್, ಶಿವಕುಮಾರ್, ಗಂಗಾಧರ ಸೇರಿ ಆರು ಆರೋಪಿಗಳನ್ನು ಬಂಧಿಸಿ ಕಿಡ್ನಾಪ್ ಆಗಿದ್ದ ವೆಂಕಟೇಶ್ನನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ