ಬೆಂಗಳೂರು:ದೂರವಾಣಿ ಕದ್ದಾಲಿಕೆ ಆರೋಪ ಕಾಂಗ್ರೆಸ್ ನಾಯಕರ ಹತಾಶಭಾವನೆಗೆ ಹಿಡಿದ ಕೈಗನ್ನಡಿಯಾಗಿದ್ದು ಗಲಭೆ ಕುರಿತು ಸತ್ಯ ಶೋಧನೆ ಬದಲು ಪಕ್ಷದ ಅಂತರಾಳ ಶೋಧನೆ ಮಾಡಿಕೊಳ್ಳಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಹೇಳಿಕೆ ಕೇಳಿದರೆ ನಗಬೇಕೊ ಅಳಬೇಕೊ ಗೊತ್ತಾಗುತ್ತಿಲ್ಲ. ಎಲ್ಲೋ ಒಂದು ಕಡೆ ಅವರಿಗೆ ಹತಾಶ ಮನೋಭಾವನೆ ಕಾಡುತ್ತಿದೆ. ಹಾಗಾಗಿಯೇ ದೂರವಾಣಿ ಕದ್ದಾಲಿಕೆ ಸೇರಿದಂತೆ ಬೇರೆ ಬೇರೆ ರೀತಿಯ ಆರೋಪಗಳ ಹೇಳಿಕೆ ಕೊಡುತ್ತಿದ್ದಾರೆ. ಕೊರೊನಾ ಇರುವ ಸಂದರ್ಭದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ನಡೆ ಖಂಡನೀಯ ಎಂದು ಕಿಡಿಕಾರಿದರು.
ಬಿ.ವೈ ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಇತ್ತೀಚೆಗೆ ಡಿಜೆ ಹಳ್ಳಿ ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ವೇಳೆ ರಾಜ್ಯದ ಜನತೆಯ ಮುಂದೆ ಕಾಂಗ್ರೆಸ್ ಪಕ್ಷ ಬೆತ್ತಲಾಗಿದೆ. ಹಾಗಾಗಿ ಈಗ ದೂರವಾಣಿ ಕದ್ದಾಲಿಕೆ ಆರೋಪದ ಹೇಳಿಕೆ ಕೊಡುವ ಮೂಲಕ ತಮ್ಮ ಪಕ್ಷವನ್ನು ರಾಜ್ಯದಲ್ಲಿ ಚಾಲ್ತಿಯಲ್ಲಿಡುವ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರು ಕೂಡ ಆಡಳಿತ ನಡೆಸಿದ್ದಾರೆ, ಕೊರೊನಾ ಸಂದರ್ಭದಲ್ಲಿ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕೆಲಸ ಮಾಡದೆ ಸರ್ಕಾರವನ್ನು ಟೀಕಿಸುತ್ತಾ ಕಾಲ ಕಳೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಘಟನೆಯಲ್ಲಿ ಕಾಂಗ್ರೆಸ್ ನಾಯಕರು ಸತ್ಯಶೋಧನಾ ಸಮಿತಿಯನ್ನು ಮಾಡಿಕೊಂಡಿದ್ದಾರೆ. ಆದರೆ ಎಲ್ಲೋ ಒಂದು ಕಡೆ ಅವರು ತಮ್ಮ ಮನಸ್ಸನ್ನು, ಅಂತರಾಳವನ್ನು ಅರ್ಥಮಾಡಿಕೊಳ್ಳುವ ಆತ್ಮ ಶೋಧನಾ ಸಮಿತಿಯನ್ನು ಮಾಡುವುದು ಒಳ್ಳೆಯದು ಎಂದು ಸತ್ಯಶೋಧನಾ ಸಮಿತಿಯನ್ನು ಟೀಕಿಸಿದರು. ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟವನ್ನು ಮುಚ್ಚಿಕೊಳ್ಳಲು ಸಮಾಜವಿರೋಧಿ ಶಕ್ತಿಯನ್ನು ಬಳಸಿಕೊಂಡು ಈ ಮಟ್ಟಕ್ಕೆ ಇಳಿದಿರುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ತಲೆಯೆತ್ತಿಕೊಂಡು ಓಡಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಹಾಗಾಗಿ ಬೇರೆ ಬೇರೆ ವಿಚಾರಗಳನ್ನು ಎತ್ತಿಕೊಂಡು ರಾಜ್ಯ ಸರ್ಕಾರಕ್ಕೆ ಮಸಿ ಬಳಿಯುವ ಕೆಲಸವನ್ನು ಮಾಡಲು ಹೊರಟಿದೆ. ರಾಜ್ಯ ಸರ್ಕಾರದ ವಿರುದ್ಧ ಜನತೆಯಲ್ಲಿ ತಪ್ಪು ಭಾವನೆ ಮೂಡಿಸುವ ಕೆಲಸಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ಮುಂದಾಗಿದ್ದಾರೆ. ಇದು ಯಾರೂ ಕೂಡ ಒಪ್ಪುವಂಥದ್ದಲ್ಲ. ರಾಜ್ಯದ ಜನತೆಯನ್ನು ಮೂರ್ಖರನ್ನಾಗಿ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ, ಆದರೆ ಇದೆಲ್ಲಾ ನಡೆಯುವುದಿಲ್ಲ ಎಂದು ಹರಿಹಾಯ್ದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಪಕ್ಷದ ಚಟುವಟಿಕೆಗಳು ಮುಂದೆ ಯಾವ ರೀತಿ ಇರಬೇಕು. ಕೊರೊನಾ ಇರುವ ಸಂದರ್ಭದಲ್ಲಿ ಯಾವ ರೀತಿ ನಮ್ಮ ಪಕ್ಷ ಸಂಘಟನೆ ಮಾಡಬೇಕು ಎನ್ನುವ ದೃಷ್ಟಿಕೋನದಿಂದ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಜೊತೆ ಚರ್ಚೆ ಮಾಡುತ್ತಾರೆ ಎಂದು ಬಿ.ವೈ. ವಿಜಯೇಂದ್ರ ಮಾಹಿತಿ ನೀಡಿದರು.