ಬೆಂಗಳೂರು:ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಇಂದು ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದರು. ವಿಧಾನಸಭಾ ಕಲಾಪಕ್ಕೆ ಹಾಜರಾಗುವ ಮುನ್ನ ತಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಆಶೀರ್ವಾದವನ್ನು ವಿಜಯೇಂದ್ರ ಪಡೆದರು.
2023ರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಟಕಗೊಂಡ ಬಳಿಕ ಸೋಮವಾರದಿಂದ ಮೂರು ದಿನಗಳ ಕಾಲ ಮೊದಲ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ನಿನ್ನೆ ಮತ್ತು ಇಂದು ನೂತನ ಶಾಸಕರು ವಿಧಾನಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆದಿದೆ. ನಾಳೆ ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ. ಶಿಕಾರಿಪುರ ಶಾಸಕರಾಗಿ ಆಯ್ಕೆಯಾದ ವಿಜಯೇಂದ್ರ ಇಂದು ತಮ್ಮ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಬೆಳಗ್ಗೆ ವಿಧಾನಸೌಧಕ್ಕೆ ಆಗಮಿಸುವ ಮುನ್ನ ಅವರು ತಮ್ಮ ಮನೆಯಲ್ಲಿ ತಂದೆ ಬಿಎಸ್ವೈ ಅವರ ಆಶೀರ್ವಾದ ತೆಗೆದುಕೊಂಡಿದರು.
ಇದನ್ನೂ ಓದಿ:ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಶಾಸಕ ಯು ಟಿ ಖಾದರ್.. ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಸಾಥ್
ಈ ಬಗ್ಗೆ ಖುದ್ದು ವಿಜಯೇಂದ್ರ ಟ್ವೀಟ್ ಮಾಡಿದ್ದು, ''ವಿಧಾನಸಭಾ ಸದಸ್ಯನಾಗಿ ಆಯ್ಕೆಯಾದ ನಂತರ ಮೊದಲ ಬಾರಿ ಇಂದು ವಿಧಾನಸಭಾ ಅಧಿವೇಶನಕ್ಕೆ ತೆರಳುವ ಮುನ್ನ ನನ್ನ ತಂದೆಯವರಾದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಹಾಗೂ ಸಹೋದರರಾದ ಸಂಸದ ಬಿ ವೈ ರಾಘವೇಂದ್ರ ಅವರ ಆಶೀರ್ವಾದ ಪಡೆಯಲಾಯಿತು. ನಾಡಿನ ಹಾಗೂ ಶಿಕಾರಿಪುರ ಕ್ಷೇತ್ರದ ಜನತೆಯ ಧ್ವನಿಯಾಗಿ ಶ್ರಮಿಸಲು ತಮ್ಮ ಆಶೀರ್ವಾದ ನನಗೆ ಬಹುದೊಡ್ಡ ಶಕ್ತಿ'' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕುಟುಂಬ ಸಮೇತವಾಗಿರುವ ಫೋಟೋಗಳನ್ನು ಅವರು ತಮ್ಮ ಟ್ವಿಟರ್ ಖಾತೆನಲ್ಲಿ ಹಂಚಿಕೊಂಡಿದ್ದಾರೆ.
ಅಲ್ಲದೇ, ಪ್ರಮಾಣ ವಚನ ಸ್ವೀಕರಿಸಿದ ಬಗ್ಗೆ ಟ್ವೀಟ್ ಮಾಡಿರುವ ವಿಜಯೇಂದ್ರ, ''ಇಂದು ವಿಧಾನಸಭಾ ಸದಸ್ಯನಾಗಿ ನಮ್ಮ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಆರಾಧ್ಯ ದೈವ ಶ್ರೀ ಹುಚ್ಚರಾಯಸ್ವಾಮಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲಾಯಿತು. ಕರ್ತವ್ಯ ಸೌಧದಿಂದ ನಮ್ಮ ಕ್ಷೇತ್ರದ ಅಭಿವೃದ್ಧಿಯ ರಥವನ್ನು ಹೊತ್ತು ಸಾಗುವ ಮಹತ್ವದ ಜವಾಬ್ದಾರಿ ನನ್ನದು'' ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಶುಭ ಹಾರೈಕೆ:ಮತ್ತೊಂದೆಡೆ, ಮೊದಲ ಬಾರಿಗೆ ವಿಧಾನಸೌಧಕ್ಕೆ ಆಗಮಿಸಿದ ವಿಜಯೇಂದ್ರ ಅವರಿಗೆ ತಮ್ಮ ಬಿಜೆಪಿ ಪಕ್ಷದ ಶಾಸಕರು ಮತ್ತು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರು ಸಹ ಅಭಿನಂದಿಸಿ ಶುಭ ಹಾರೈಸಿದರು. ಮೊದಲ ಸಲ ವಿಧಾನಸೌಧ ಪ್ರವೇಶಿಸುವ ಮುನ್ನ ಅವರು ಮೆಟ್ಟಿಲಿಗೆ ಬಾಗಿ ಕೈ ಮುಗಿದು ನಮಸ್ಕರಿಸಿದರು. ನಂತರದಲ್ಲಿ ವಿಧಾನಸಭೆಯ ಮೊಗಸಾಲೆಗೆ ಬರುತ್ತಿದ್ದಂತೆ ವಿಜಯೇಂದ್ರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ನಾಯಕರು ಎದುರಾದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನು ಕಂಡ ಕೂಡಲೇ ವಿಜಯೇಂದ್ರ ನಮಸ್ಕರಿಸಿದರು. ಆಗ ಉಭಯ ನಾಯಕರು ಕೂಡ ನುಗುತ್ತಲೇ ಕೈ ಕುಲುಕಿ ಮಾತನಾಡಿದರು. ಇದೇ ಕ್ಷಣದಲ್ಲಿ ಸಿದ್ದರಾಮಯ್ಯ ನೂತನ ಶಾಸಕರಾಗಿ ಬಂದ ವಿಜಯೇಂದ್ರ ಅವರಿಗೆ ಭುಜ ತಟ್ಟಿ ಶುಭ ಕೋರಿದರು. ಸಿಎಂ ಜೊತೆಯಲ್ಲಿದ್ದ ಕಾಂಗ್ರೆಸ್ ಶಾಸಕ ಯುಟಿ ಖಾದರ್ ಅವರಿಗೆ ವಿಜಯೇಂದ್ರ ಕೈ ಕುಲುಕಿ ಮಾತನಾಡಿದರು. ಬಳಿಕ ಸಚಿವ ಕೆ.ಹೆಚ್. ಮುನಿಯಪ್ಪ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ತನ್ವೀರ್ ಸೇಠ್ ಸೇರಿ ಇತರ ಕಾಂಗ್ರೆಸ್ ಶಾಸಕರನ್ನು ಭೇಟಿಯಾದ ವಿಜಯೇಂದ್ರ ಮಾಡಿ ಪರಸ್ಪರ ಅಭಿನಂದಿಸಿದರು. ಬಿಜೆಪಿ ಶಾಸಕ ಬಸವರಾಜ ಮತ್ತಿಮಡು, ಶೈಲೇಂದ್ರ ಬೆಲ್ದಾಳೆ, ಸಿಮೆಂಟ್ ಮಂಜು ಸಹ ಜೊತೆಗಿದ್ದರು.
ಇದನ್ನೂ ಓದಿ:ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಬಿ ವೈ ವಿಜಯೇಂದ್ರ: ಭುಜ ತಟ್ಟಿ ಹಾರೈಸಿದ ಸಿಎಂ ಸಿದ್ದರಾಮಯ್ಯ.. ವಿಡಿಯೋ