ಕರ್ನಾಟಕ

karnataka

ETV Bharat / state

ವಿಜಯೇಂದ್ರ ಕರ್ನಾಟಕ ಬಿಜೆಪಿಯ ನೂತನ ಸಾರಥಿ: ಮೋದಿ, ಶಾ, ಸಂತೋಷ್​ಗೆ ಧನ್ಯವಾದ ಹೇಳಿದ BYV​​​​​​ - ವಿಜಯೇಂದ್ರ

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರನ್ನು ನೇಮಕ ಮಾಡಿ ಪಕ್ಷದ ಹೈಕಮಾಂಡ್​ ಆದೇಶ ಹೊರಡಿಸಿದೆ.

Etv Bharat
Etv Bharat

By ETV Bharat Karnataka Team

Published : Nov 10, 2023, 6:42 PM IST

Updated : Nov 10, 2023, 8:58 PM IST

ನವದೆಹಲಿ:ಬಹು ದಿನಗಳಿಂದ ಚರ್ಚೆಯಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯು ಕೊನೆಗೂ ಆಗಿದೆ. ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಪುತ್ರ ಹಾಗೂ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಅವರನ್ನು ನೂತನ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಈ ನೇಮಕ ತಕ್ಷಣಕ್ಕೆ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ದಕ್ಷಿಣ ಕನ್ನಡ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್​ ಇದುವರೆಗೆ ರಾಜ್ಯಾಧ್ಯಕ್ಷರಾಗಿದ್ದರು. ಅವರ ಅಧಿಕಾರಾವಧಿ ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನವೇ ಪೂರ್ಣಗೊಂಡಿತ್ತು.

ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದ್ದವು. ಇದರ ನಡುವೆ ಹಲವು ನಾಯಕರ ಹೆಸರುಗಳು ಮುಂಚೂಣಿಗೆ ಬಂದಿದ್ದವು. ಇದೇ ವೇಳೆ, ಅಧಿಕೃತ ವಿಪಕ್ಷ ನಾಯಕರನ್ನು ಆಯ್ಕೆ ಮಾಡದ ವಿಷಯ ಕೂಡ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ರಾಜ್ಯದ ಉನ್ನತ ಹುದ್ದೆಗಳಿಗೆ ಯಾರನ್ನು ನೇಮಕ ಮಾಡಲಾಗುತ್ತದೆ ಎಂಬ ಪ್ರಶ್ನೆಗಳು ಎದ್ದಿದ್ದವು.

ಕೊನೆಗೆ ಇಂದು ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯ ಘಕಟದ ಅಧ್ಯಕ್ಷರನ್ನಾಗಿ ಹೈಕಮಾಂಡ್ ಆಯ್ಕೆ ಮಾಡಿದೆ. ಶಿಕಾರಿಪುರ ಹಾಲಿ ಶಾಸಕರೂ ಆಗಿರುವ ವಿಜಯೇಂದ್ರ, ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈಗ ಅವರಿಗೆ ಪಕ್ಷದಲ್ಲಿ ಬಡ್ತಿ ನೀಡಿದಂತಾಗಿದೆ. ಈ ಹಿಂದೆ ವಿಜಯೇಂದ್ರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಪ್ರಧಾನಿ, ಅಮಿತ್​ ಶಾ ಗೆ ಧನ್ಯವಾದ ಸಮರ್ಪಣೆ ಮಾಡಿದ ವಿಜಯೇಂದ್ರ: ’’ಅಚಲ ವಿಶ್ವಾಸವಿಟ್ಟು ಪಕ್ಷ ಸಂಘಟನೆಯ ಬಹುದೊಡ್ಡ ಜವಾಬ್ದಾರಿ ವಹಿಸಿದ ಮಾನ್ಯ ಪ್ರಧಾನಿ ಶ್ರೀ@narendramodiji ಅವರಿಗೆ , ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @JPNaddaji ಅವರಿಗೆ, ಗೃಹ ಸಚಿವ ಶ್ರೀ @AmitShahji ಅವರಿಗೆ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ@blsanthoshji ಅವರುಗಳಿಗೆ ತುಂಬು ಹೃದಯದ ಕೃತಜ್ಞತೆಗಳು. ಸಂಘದ ಹಾಗೂ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಸರ್ವರ ನಿರೀಕ್ಷೆ ಹಾಗೂ ಜನರ ಅಪೇಕ್ಷೆಗೆ ಪೂರಕವಾಗಿ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಗೆ ಹೊಸ ಚೈತನ್ಯ ತುಂಬಲು ಕಾರ್ಯಕರ್ತರೊಂದಿಗೆ ಕಾರ್ಯಕರ್ತನಾಗಿ ಅಹರ್ನಿಶಿ ದುಡಿಯುವ ಸಂಕಲ್ಪ ತೊಟ್ಟಿರುವೆ. ನಾಡಿನ ಜನರ ಆಶೀರ್ವಾದವೇ ನನಗೆ ಶ್ರೀರಕ್ಷೆ‘‘ ಎಂದು ವಿಜಯೇಂದ್ರ ಟ್ವೀಟ್​ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯೇಂದ್ರ ಆಯ್ಕೆ ಅಧಿಕೃತವಾಗಿ ಪ್ರಕಟಗೊಳ್ಳುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವೆ ನಿರ್ಮಲ ಸೀತಾರಮನ್, ಮಾಜಿ ಸಿಎಂ ಎಸ್.ಎಂ ಕೃಷ್ಣ,ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ದೂರವಾಣಿ ಕರೆ ಮಾಡಿ ವಿಜಯೇಂದ್ರಗೆ ಶುಭ ಕೋರಿದರು. ಇವರ ಜೊತೆ ಹೊಸ ದೋಸ್ತಿಯಾಗಿರುವ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ದೂರವಾಣಿ ಕರೆ ಮಾಡಿ ಶುಭ ಕೋರಿದ್ದಾರೆ.

ಸಂಸದ ರಾಘವೇಂದ್ರ ಟ್ವೀಟ್​: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆಯಾದ ಬೆನ್ನಲ್ಲೇ ಶಿವಮೊಗ್ಗದ ಸಂಸದರಾದ ಸಹೋದರ ಬಿ.ವೈ.ರಾಘವೇಂದ್ರ ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಪೋಸ್ಟ್​ ಮಾಡಿದ್ದಾರೆ. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವ ಬಿ.ವೈ ವಿಜಯೇಂದ್ರ ಅವರಿಗೆ ಹಾರ್ದಿಕ ಶುಭಾಶಯಗಳು. ಹಿರಿಯರ ಆಶೀರ್ವಾದ ಹಾಗೂ ಕಿರಿಯರ ಬೆಂಬಲದೊಂದಿಗೆ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಿ ಮುನ್ನಡೆಸುತ್ತಾರೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಮುಂದುವರೆದು, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ದಿ. ಅನಂತಕುಮಾರ್ ಮುಂತಾದ ನಾಯಕರುಗಳ ದಾರಿಯಲ್ಲಿ ನಡೆಯುತ್ತಾರೆ ಅನ್ನುವ ಭರವಸೆ ನನಗಿದೆ. ಅವರ ನಾಯಕತ್ವದಲ್ಲಿ ಪಕ್ಷ ಹೊಸ ಚೈತನ್ಯದೊಂದಿಗೆ ಬೆಳೆಯಲಿ, ರಾಜ್ಯವನ್ನು ಆವರಿಸಿಕೊಂಡಿರುವ ಕಾಂಗ್ರೆಸ್ ದುರಾಡಳಿತದ ಕಾರ್ಮೋಡದ ನಡುವೆ ಭರವಸೆಯ ಒಂದು ಹೊಸ ಕಿರಣವಾಗಿ ಹೊರಹೊಮ್ಮಲಿ ಎಂದು ಹಾರೈಸುತ್ತೇನೆ ಎಂದು ರಾಘವೇಂದ್ರ ತಿಳಿಸಿದ್ದಾರೆ.

ಬೊಮ್ಮಾಯಿ ಟ್ವೀಟ್:ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಯುವ ನಾಯಕ ಬಿ.ವೈ. ವಿಜಯೇಂದ್ರ ಅವರಿಗೆ ಹಾರ್ಧಿಕ ಅಭಿನಂದನೆಗಳು. ನಿಮ್ಮ ಅಧ್ಯಕ್ಷ ಅವಧಿಯಲ್ಲಿ ಪಕ್ಷ ಮತ್ತಷ್ಟು ಸಂಘಟನಾತ್ಮಕವಾಗಿ ಬಲಗೊಂಡು ಇನ್ನಷ್ಟು ಶಕ್ತಿಯುತವಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್​ ಮಾಡಿದ್ದಾರೆ.

ಡಿವಿ ಸದಾನಂದಗೌಡ ಪತ್ರಿಕಾ‌ ಹೇಳಿಕೆ: ಭಾರತೀಯ ಜನತಾ ಪಾರ್ಟಿ ಕರ್ನಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ವೈ. ವಿಜಯೇಂದ್ರ ಅವರಿಗೆ ನನ್ನ ಹೃತ್ಫೂರ್ವಕ ಅಭಿನಂದನೆಗಳು. ಪಕ್ಷವು ತಮ್ಮ ಅವಧಿಯಲ್ಲಿ ಸಂಘಟನಾತ್ಮಕ ಬಲಗೊಂಡು ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಅತ್ಯಂತ ಯಶಸ್ಸನ್ನು ಗಳಿಸಲೆಂದು ಶುಭಹಾರೈಸುತ್ತೇನೆ. ಪಕ್ಷದ ಬಲವರ್ಧನೆಗೆ ಬಿ.ವೈ.ವಿಜಯೇಂದ್ರ ಅವರೊಂದಿಗೆ ನಾವೆಲ್ಲರೂ ಜೊತೆಯಲ್ಲಿದ್ದು, ಪಕ್ಷ ಸಂಘಟನೆಗೆ ನನ್ನ ಸಂಪೂರ್ಣವಿದೆ ಎಂದು ತಿಳಿಸುತ್ತಾ, ಮತ್ತೊಮ್ಮೆ ವಿಜಯೇಂದ್ರ ಅವರಿಗೆ ಶುಭಹಾರೈಸುತ್ತೇನೆ ಎಂದಿದ್ದಾರೆ.

ಶಾಸಕ ಪ್ರಭು ಚವ್ಹಾಣ ಹರ್ಷ: ಭಾರತೀಯ ಜನತಾ ಪಕ್ಷದ ನೂತನ ರಾಜ್ಯ ಅಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಅವರು ನೇಮಕವಾಗಿರುವುದಕ್ಕೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕ ಪ್ರಭು.ಬಿ ಚವ್ಹಾಣ ಹರ್ಷ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹಾದಿಯಲ್ಲಿ ಸಾಗುತ್ತಿರುವ ಬಿ.ವೈ. ವಿಜಯೇಂದ್ರ ಅವರು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದ ಶಾಸಕರಾಗಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಿಂದೆ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಇವರು ಮಾಡಿರುವ ಸೇವೆ ಅಮೋಘ. ಈ ಹಿಂದೆ ಪಕ್ಷ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಎಲ್ಲರ‌ ಮೆಚ್ಚುಗೆ ಗಳಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಯುವಜನತೆ ಸೇರಿದಂತೆ ಎಲ್ಲ ವರ್ಗದವರ ನೆಚ್ಚಿನ ನಾಯಕರಾಗಿರುವ ವಿಜಯೇಂದ್ರ ಅವರ ನಾಯಕತ್ವದಲ್ಲಿ ಪಕ್ಷದ ಬಲ ಮತ್ತಷ್ಟು ವೃದ್ಧಿಸಲಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಿಗಲಿದೆ ಎಂದು ಹೇಳಿದ್ದಾರೆ.

ಹೆಚ್​ಡಿಕೆ ಟ್ವೀಟ್​: ಕರ್ನಾಟಕದ ಬಿಜೆಪಿ ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕ ಬಿ.ವೈ. ವಿಜಯೇಂದ್ರ ಅವರಿಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಕೂಡ ಶುಭಾಶಯ ಕೋರಿದ್ದಾರೆ. ಯುವನಾಯಕರಾಗಿ ಸಂಘಟನೆಯಲ್ಲಿ ಈಗಾಗಲೇ ಕ್ರಿಯಾಶೀಲರಾಗಿರುವ ಅವರಿಗೆ ಕಿರಿಯ ವಯಸ್ಸಿನಲ್ಲಿಯೇ ಬಹುದೊಡ್ಡ ಜವಾಬ್ದಾರಿ ಅರಸಿ ಬಂದಿದೆ. ತಮಗೆ ವಹಿಸಿರುವ ಈ ಗುರುತರ ಹೊಣೆಯನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ವಿಜಯೇಂದ್ರ ಅವರಿಗೆ ಶುಭವಾಗಲಿ ಎಂದು ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ:ಕರ್ನಾಟಕ ಸಂಭ್ರಮ-50; ಕಾಂಗ್ರೆಸ್ ಸರ್ಕಾರಕ್ಕೆ ಅಷ್ಟ ಪ್ರಶ್ನೆ ಇಟ್ಟ ಬಿ ವೈ ವಿಜಯೇಂದ್ರ

Last Updated : Nov 10, 2023, 8:58 PM IST

ABOUT THE AUTHOR

...view details