ಕರ್ನಾಟಕ

karnataka

ETV Bharat / state

ಹಿಜಾಬ್, ಕೇಸರಿ ಶಾಲು, ಶಿವಮೊಗ್ಗ ಘಟನೆಯಿಂದ ರಾಜ್ಯ ಕೆಂಡದಂತಾಗಿದೆ: ಹೆಚ್.ಡಿ.ಕೆ ಆತಂಕ - Political covid from national parties

ಹಿಜಾಬ್, ಕೇಸರಿ ಶಾಲು, ಶಿವಮೊಗ್ಗ ಘಟನೆಯಿಂದ ಇಡೀ ರಾಜ್ಯವೇ ಕೆಂಡದಂತಾಗಿದೆ. ಹಾಗಾಗಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಅಲ್ಲದೇ ಜೆಡಿಎಸ್​​ನಿಂದ ಶೀಘ್ರವೇ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದಿದ್ದಾರೆ.

Kumaraswamy
ಹೆಚ್.ಡಿ. ಕುಮಾರಸ್ವಾಮಿ

By

Published : Feb 22, 2022, 9:22 PM IST

Updated : Feb 22, 2022, 9:41 PM IST

ಬೆಂಗಳೂರು: ರಾಜ್ಯದಲ್ಲಿ ಶಾಂತಿ ಭದ್ರತೆಗೆ ದೊಡ್ಡ ಅಪಾಯ ಎದುರಾಗಿದ್ದು, ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಂತಿಯುತವಾಗಿದ್ದ ರಾಜ್ಯವು ಹಿಜಾಬ್, ಕೇಸರಿ ಶಾಲು, ಇದೀಗ ಶಿವಮೊಗ್ಗದಲ್ಲಿ ಯುವಕನೊಬ್ಬನ ಕೊಲೆ ಕಾರಣದಿಂದ ಇಡೀ ರಾಜ್ಯವೇ ಕುದಿಯುವ ಕುಲುಮೆಯಾಗಿದೆ. ಇಂಥ ಸೂಕ್ಷ್ಮ ಸಮಯದಲ್ಲಿ ರಾಜ್ಯಪಾಲರು ಮೌನವಾಗಿರುವುದು ಸರಿಯಲ್ಲ. ಅವರು ಯಾರ ಕೈಗೊಂಬೆಯೂ ಅಲ್ಲ, ಕೈಗೊಂಬೆ ಆಗಲೂ ಬಾರದು. ಹೀಗಾಗಿ ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶ ಮಾಡಿ ಸರ್ಕಾರದಿಂದ ಮಾಹಿತಿ ಪಡೆದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಅಲ್ಲದೇ, ಶೀಘ್ರವೇ ತಾವು ಕೂಡ ಖುದ್ದು ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು ಹಾಗೂ ವಿಧಾನಮಂಡಲ ಕಲಾಪವನ್ನು ಸರ್ಕಾರ ಸಮರ್ಪಕವಾಗಿ ನಡೆಸದ ಬಗ್ಗೆ ನಮ್ಮ ಪಕ್ಷದಿಂದ ದೂರು ನೀಡಲಾಗುವುದು ಎಂದು ಅವರು ತಿಳಿಸಿದರು.

ಸರ್ಕಾರ ವಜಾ ಆಗುವಂತಹ ಪರಿಸ್ಥಿತಿ:ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರವನ್ನು ವಜಾ ಮಾಡುವಂಥ ಪರಿಸ್ಥಿತಿ ರಾಜ್ಯದಲ್ಲಿ ಸೃಷ್ಟಿಯಾಗಿದೆ. ಬಿಜೆಪಿಯ ಲೋಕಸಭಾ ಸದಸ್ಯರೊಬ್ಬರೇ ಸರ್ಕಾರದ ಅಸಮರ್ಥತೆ ನಮಗೆ ನಾಚಿಕೆ ಉಂಟು ಮಾಡುತ್ತಿದೆ ಎಂದು ಹೇಳಿದ್ದಾರೆ. ಜನರು ಕೂಡ ರೋಸಿ ಹೋಗಿದ್ದಾರೆ. ಹೀಗಾಗಿ ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶ ಮಾಡಲೇಬೇಕು ಎಂದು ಹೆಚ್​​ಡಿಕೆ ಆಗ್ರಹಿಸಿದರು.

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ

ರಾಜ್ಯದಲ್ಲಿ ಇಂಥ ಕೆಟ್ಟ ವಾತಾವರಣ ಉಂಟಾಗಲು ರಾಜ್ಯ ಸರ್ಕಾರವೇ ಕಾರಣ. ಅವರ ಅಸಮರ್ಪಕ ಕಾರ್ಯ ವೈಖರಿಯಿಂದ ಇಡೀ ಶಿಕ್ಷಣ ಕ್ಷೇತ್ರ ಬಂದ್ ಮಾಡಿಸಿ‌ ಕೂರಿಸಿದ್ದಾರೆ. ಶಾಲಾ- ಕಾಲೇಜುಗಳಲ್ಲಿ ಸಂಘರ್ಷದ ವಾತಾವರಣ ಸೃಷ್ಟಿ ಆಗಿದೆ. ಹೈಕೋರ್ಟ್ ಅಂತೂ ಬಿಬಿಎಂಪಿಗೆ ನಿತ್ಯವೂ ಛೀಮಾರಿ ಹಾಕುತ್ತಿದೆ. ಅಧಿಕಾರಿಗಳನ್ನು ಜೈಲಿಗೆ ಕಳಿಸುವ ಎಚ್ಚರಿಕೆಯನ್ನು ನೀಡಿದೆ. ನಿಮ್ಮನ್ನು ಜೈಲಿಗೆ ಹಾಕಬೇಕಿತ್ತು. ಆದರೂ ಔದಾರ್ಯ ತೋರಿಸಿದ್ದೇವೆ ಎಂದು ನ್ಯಾಯಮೂರ್ತಿಗಳೇ ಎಚ್ಚರಿಕೆ ನೀಡುತ್ತಿದ್ದಾರೆ. ಈ ಸರ್ಕಾರಕ್ಕೆ ಜನರ ಬಗ್ಗೆ ಬದ್ಧತೆ ಇದೆಯಾ? ಬಹಳ ನೊಂದು ಈ ಮಾತನ್ನು ಹೇಳುತ್ತಿದ್ದೇನೆ ಎಂದು ಹೇಳಿದರು.

ಅಮೂಲ್ಯ ಕಲಾಪ ಹಾಳು:ಆಡಳಿತಾರೂಢ ಬಿಜೆಪಿ ಹಾಗೂ ಅಧಿಕೃತ ಪ್ರತಿಪಕ್ಷ ಕಾಂಗ್ರೆಸ್ ವಿಧಾನಮಂಡಲದ ಕಲಾಪವನ್ನು ಸಂಪೂರ್ಣವಾಗಿ ಹಾಳು ಮಾಡಿವೆ. 2022-2023ನೇ ವರ್ಷದ ಮೊದಲ ರಾಜ್ಯಪಾಲರ ಜಂಟಿ ಅಧಿವೇಶನ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ಇದಾಗಿತ್ತು. ಸದನದಲ್ಲಿ ಚರ್ಚೆಗೆ ಅವಕಾಶಗಳು ಸಿಗಲಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಗಳಿಂದ ಇದು ಆಗಲಿಲ್ಲ. ಆದರೆ ಆಡಳಿತ ಪಕ್ಷದ ಸದಸ್ಯರು ವಂದನಾ ನಿರ್ಣಯದ ಮೇಲೆ ಮಾತನಾಡಿದರೂ ಅವರು ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡುವುದು ಬಿಟ್ಟು ಬರೀ ಮೋದಿ ಅವರ ಸಾಧನೆಗಳ ಬಗ್ಗೆ ಮಾತ್ರ ಹೇಳಿದರು ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಸಿಎಂ ಅವರು ಕಾಂಗ್ರೆಸ್ ಧರಣಿ ಮಧ್ಯೆ ಉತ್ತರ ನೀಡಿದ್ದಾರೆ. ರಾಜ್ಯದ ವಿಧಾನ ಮಂಡಲದ ಇತಿಹಾಸದಲ್ಲಿ ಮೊದಲನೇ ಬಾರಿ ಈ ರೀತಿ ಕಲಾಪ ಬಲಿಯಾಗಿದೆ. ಅತ್ಯಂತ ಮಹತ್ವದ ವಿಚಾರಗಳು ಸದನದಲ್ಲಿ ಚರ್ಚೆ ಆಗಬೇಕಿತ್ತು. ಹಲವಾರು ಬಾರಿ ನಾನು ಹೇಳಿದ್ದೇನೆ. ಗಲಾಟೆ ಮಾಡುವವರನ್ನು ಹೊರ ಹಾಕಿ ಅಥವಾ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹಾಕಿ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದ್ದೆ. ಆದರೆ, ನಮ್ಮ ಮನವಿಯನ್ನು ಪರಿಗಣಿಸದೇ, ನಮ್ಮ ಪಕ್ಷಕ್ಕೆ ಮಾತನಾಡಲು ಅವಕಾಶವನ್ನು ನೀಡದೇ ಕಲಾಪವನ್ನು ಪ್ರತಿಷ್ಠೆಗೆ ಬಲಿ ಕೊಡಲಾಗಿದೆ ಎಂದು ಹೆಚ್​ಡಿಕೆ ದೂರಿದರು.

ರಾಷ್ಟ್ರೀಯ ಪಕ್ಷಗಳಿಂದ ರಾಜಕೀಯ ಕೋವಿಡ್:ಬಡವರ ಮಕ್ಕಳು ವ್ಯಾಸಂಗ ಮಾಡುವಂಥ ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಮಕ್ಕಳ ನಡುವೆ ದ್ವೇಷ ಭಾವನೆ ಮೂಡಿಸಿ ಅಶಾಂತಿ ಉಂಟು ಮಾಡಲಾಗುತ್ತಿದೆ. ಸರ್ಕಾರಿ ಶಿಕ್ಷಣ ವ್ಯವಸ್ಥೆಯೇ ನಾಶವಾಗುವ ಹಂತ ಮುಟ್ಟಿದೆ. ಬಡಮಕ್ಕಳ ಮೇಲೆ ಆದ ಅನಾಹುತ ಇದರ ಬಗ್ಗೆ ಕಲಾಪದಲ್ಲಿ ಚರ್ಚೆ ಆಗಬೇಕಿತ್ತು. ಕೊರೊನಾ ಅನಾಹುತದಿಂದ ಎರಡು ವರ್ಷದಿಂದ ಶಿಕ್ಷಣ ರಂಗ ಪೂರ್ಣವಾಗಿ ನಾಶವಾಗಿದೆ. ಈ ವರ್ಷವೂ ಸಹ ಕೊರೊನಾ ಅನಾಹುತದ ನಂತರ 'ರಾಜಕೀಯದ ಕೋವಿಡ್' ಪ್ರಯೋಗವಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಇಡೀ ರಾಜ್ಯಕ್ಕೆ 'ರಾಜಕೀಯ ಕೋವಿಡ್ ' ಅನ್ನು ಹಬ್ಬಿಸುತ್ತಿವೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ರಾಜಕೀಯ ಕೋವಿಡ್ ಗೆ ಔಷಧಿ ಇಲ್ಲ. ಇಡೀ ರಾಜ್ಯದ ನೆಮ್ಮದಿ ಶಾಂತಿಯನ್ನು ಬುಡಮೇಲು ಮಾಡುವ ರಾಜಕೀಯ ಸ್ವಾರ್ಥಕ್ಕೆ ಕೊನೆ ಇಲ್ಲದಾಗಿದೆ. ಅದಕ್ಕೆ ಈ ರೀತಿ ಗದ್ದಲ ಎಬ್ಬಿಸಿ ಕಲಾಪವನ್ನು ಮುಗಿಸಿದರು. ಸದನ ಸುಗಮವಾಗಿ ನಡೆಸಲು ಅವಕಾಶ ಕೊಡಿ. ಮತಾಂತರ ನಿಷೇಧ ಕಾಯ್ದೆ ವಿಷಯ ಇಟ್ಟುಕೊಂಡು ಬೆಳಗಾವಿ ಅಧಿವೇಶನವನ್ನೂ ಹಾಳುಗೆಡವಿದ್ದಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್​ನಿಂದ ಯಾವ ಪುರುಷಾರ್ಥಕ್ಕೆ ರಾಜ್ಯಪಾಲರ ಭೇಟಿ?: ಸದನದ ಕಲಾಪವನ್ನು ಹಾಳು ಮಾಡಿದ ಅಧಿಕೃತ ಪ್ರತಿಪಕ್ಷವೇ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡಲು ಹೊರಟಿದೆ. ಅದೂ ರಾಜಭವನದ ತನಕ ನಡೆದುಕೊಂಡು ಹೋಗಿ ಮನವಿ ಕೊಟ್ಟು ಪ್ರಚಾರ ಪಡೆಯುವ ಹುನ್ನಾರ. ಯಾವ ಮುಖ ಇಟ್ಟುಕೊಂಡು ಆ ಪಕ್ಷದ ನಾಯಕರು ರಾಜ್ಯಪಾಲರನ್ನು ಭೇಟಿಯಾಗುತ್ತಾರೆ? ಈ ನಾಟಕವನ್ನು ಬೇರೆ ರಾಜ್ಯದ ಜನರು ನೋಡಬೇಕೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗುಡುಗಿದರು.

ಹಿಜಾಬ್, ಕೇಸರಿ ಶಾಲು ಹಾಗೂ ಶಿವಮೊಗ್ಗದಲ್ಲಿ ನಡೆದ ಕೊಲೆಗೆ ಸರ್ಕಾರದ ತಪ್ಪು ಹೆಜ್ಜೆಗಳೇ ಕಾರಣ. ಬಡವರ ಮನೆ ಮಕ್ಕಳನ್ನು ಇಂಥ ಘಟನೆಗಳು ಬಲಿ ತೆಗೆದುಕೊಳ್ಳುತ್ತವೆ. ಶ್ರೀಮಂತರ ಮಕ್ಕಳು, ಉಳ್ಳವರ ಮಕ್ಕಳು ಅಥವಾ ಮೇಲ್ಜಾತಿಯವರ ಮಕ್ಕಳು ಇಂಥ ಘಟನೆಗಳಲ್ಲಿ ಭಾಗಿಯಾಗುವುದಿಲ್ಲ. ಎರಡೂ ಹೊತ್ತು ಊಟಕ್ಕೂ ಕಷ್ಟ ಇರುವ ಬಡವರ ಮಕ್ಕಳು ಇಂಥ ಷಡ್ಯಂತ್ರಕ್ಕೆ ಬಲಿ ಆಗುತ್ತಿದ್ದಾರೆ. ಇಂಥ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕಿತ್ತು. ಇನ್ನಾದರೂ ರಾಷ್ಟ್ರೀಯ ಪಕ್ಷಗಳು ಬಡಮಕ್ಕಳ ಜೀವನದ ಜತೆ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ:ಹರ್ಷ ಹತ್ಯೆ ಕೇಸ್: ಆಡಳಿತಾರೂಢ ಪಕ್ಷದಿಂದಲೇ ಟೀಕೆ ಎದುರಿಸುತ್ತಿರುವ ಬೊಮ್ಮಾಯಿ ಸರ್ಕಾರ..!

ಇದಕ್ಕೆಲ್ಲಾ ಕಾರಣ ಯಾರು ಅಂತ ವಿರೋಧ ಪಕ್ಷ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿತ್ತು. ಹಾಗೆ ಆಗಲಿಲ್ಲ. ಇದು ಅಧಿಕೃತ ಪ್ರತಿಪಕ್ಷ ಕಾಂಗ್ರೆಸ್​​ನ ನೈತಿಕ ಅಧಃ ಪತನವನ್ನು ತೋರಿಸುತ್ತದೆ. ಇಂಥ ಘಟನೆಗಳಿಂದ ಅನೇಕ ಕುಟುಂಬಗಳು ಬೀದಿ ಪಾಲಾಗಿವೆ. ಇಂಥ ಒಬ್ಬ ಯುವಕ ಬಲಿಯಾದರೆ ಆ ಮನೆಯೇ ಬೀದಿಗೆ ಬಿದ್ದಂತೆ. ಆ ತಂದೆ-ತಾಯಿ ಭವಿಷ್ಯವೇನು? ಅಂಥ ಕುಟುಂಬಗಳ ಪರಿಸ್ಥಿತಿ ಬಗ್ಗೆ ಎರಡು ರಾಷ್ಟ್ರೀಯ ಪಕ್ಷಗಳು ಯೋಚನೆ ಮಾಡುತ್ತಿಲ್ಲ. ಶಿವಮೊಗ್ಗದಲ್ಲಿ ಕೊಲೆ ಆಗಿರುವ ಆ ಯುವಕನದ್ದು ಶ್ರೀಮಂತ ಕುಟುಂಬ ಅಲ್ಲ. ಸಣ್ಣ ಸಮಾಜದ ಹುಡುಗ ಆತ. ಹೀಗೆ ಅನೇಕ ಉದಹರಣೆಗಳನ್ನು ಕೊಡಬಹುದು ಎಂದು ಅವರು ಹೇಳಿದರು.

ಗೃಹ ಸಚಿವರು ಶಿವಮೊಗ್ಗ ಜಿಲ್ಲೆಯವರೇ. ಕೊಲೆಯಾದ ಯುವಕ ಬಿಜೆಪಿ ಪರಿವಾರಕ್ಕೆ ಸೇರಿದವನು. ಆತನ ಬಗ್ಗೆ ಎಲ್ಲ ಮಾಹಿತಿ ಸರ್ಕಾರದ ಬಳಿ ಇದೆ. ಆತನ ಪ್ರತೀ ಚಲನವಲನ ಎಲ್ಲಾ ಪೊಲೀಸರಿಗೆ ಗೊತ್ತಿದೆ. ಆದರೂ ರಕ್ಷಣೆ ನೀಡಲಿಲ್ಲ, ಆತನ ಜೀವ ಉಳಿಯಲಿಲ್ಲ ಎಂದು ಕುಮಾರಸ್ವಾಮಿ ಸರ್ಕಾರವನ್ನು ತರಾಟೆಗೆ ತೆಗೆದಕೊಂಡರು.

ಸಿಎಎ ಘಟನೆಯಲ್ಲಿ ಮಂಗಳೂರಲ್ಲಿ ಇಬ್ಬರು ಮುಸ್ಲಿಂ ಯುವಕರ ಮೇಲೆ ಗುಂಡು ಹಾರಿಸಲಾಯಿತು. ನಂತರ 10 ಲಕ್ಷ ಹಣ ಪರಿಹಾರ ನೀಡಿ ಮತ್ತೆ ಅವರನ್ನು ಗೂಂಡಾಗಳು ಅಂತ ಹೇಳಿದಿರಿ. ಡಿಜೆ ಹಳ್ಳಿಯಲ್ಲಿ ನಡೆದ ಘಟನೆಗೆ ಯಾರು ಕಾರಣ? ಇನ್ನೂ ಅನೇಕ ಯುವಕರನ್ನು ಈಗಲೂ ಜೈಲಿನಲ್ಲೇ ಇಡಲಾಗಿದೆ. ಆದರೆ ಘಟನೆಗೆ ಕಾರಣರಾದವರು ಕೆಪಿಸಿಸಿ ಅಧ್ಯಕ್ಷರ ಹಿಂದೆ ಮುಂದೆ ಆರಾಮಾಗಿ ಓಡಾಡಿಕೊಂಡಿದ್ದಾರೆ. ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆಯಂತೆ ಎಂದು ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.

ಇದು ಇಲ್ಲಿಗೇ ನಿಲ್ಲಲ್ಲ:ಶಿವಮೊಗ್ಗದಲ್ಲಿ ನಡೆದ ಘಟನೆ ಪರಿಣಾಮಗಳು ಇಲ್ಲಿಗೆ ನಿಲ್ಲಲ್ಲ. ಸರ್ಕಾರ ಎಚ್ಚರಿಕೆ ವಹಿಸಿ ಇದರ ಬಿಸಿ ಬೇರೆ ಕಡೆ ಹಬ್ಬದಂತೆ ಮಾಡಬೇಕು. ಆದರೆ ಎರಡೂ ಪಕ್ಷದವರು ಮತ ಬ್ಯಾಂಕ್ ಸೃಷ್ಟಿಸಲು ಹೀಗೆ ಮಾಡ್ತಾ ಇದ್ದಾರೆ. ಮತ ಬ್ಯಾಂಕ್​ಗಾಗಿ ಹೀಗೆ ಬಡವರನ್ನು ಬಳಸಿಕೊಳ್ತಾ ಇದ್ದಾರೆ. ಅದನ್ನು ಜನ ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಲಧಾರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್​​​ಡಿಕೆ, ನಮಗೇನು ಅರ್ಜೆಂಟ್ ಇಲ್ಲ. ನಾವು ಲೇಟ್ ಆದರೂ ಮಾಡುತ್ತೇವೆ. ಈ ಬಗ್ಗೆ ಇನ್ನೂ ಪ್ಲಾನ್ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ದಿನಾಂಕ ನಿಗದಿ ಮಾಡುತ್ತೇವೆ ಎಂದು ಹೇಳಿದರು.

Last Updated : Feb 22, 2022, 9:41 PM IST

ABOUT THE AUTHOR

...view details