ಬೆಂಗಳೂರು:ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾದ ಬಳಿಕ 3ನೇ ಬಾರಿಗೆ ಉಪಚುನಾವಣೆ ನಡೆಯುತ್ತಿದ್ದು, ಪ್ರತಿ ಉಪಚುನಾವಣೆಯಲ್ಲೂ ಗೆಲ್ಲುತ್ತಾ ಪ್ರಬಲರಾಗುತ್ತಲೇ ಬಂದಿದ್ದಾರೆ. ನಾಯಕತ್ವ ಬದಲಾವಣೆ ಕೂಗಿಗೆ ಉಪ ಸಮರದ ಫಲಿತಾಂಶದ ಮೂಲಕ ತಿರುಗೇಟು ನೀಡುತ್ತಲೇ ಬಂದಿದ್ದು, ಇದೀಗ ಮತ್ತೊಮ್ಮೆ ಅಗ್ನಿ ಪರೀಕ್ಷೆ ಎದುರಿಸುತ್ತಿದ್ದಾರೆ.
ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದ ದಿನದಿಂದಲೂ ಯಡಿಯೂರಪ್ಪ ನಾಯಕತ್ವದ ಬಗ್ಗೆ ಮಾತುಗಳು ಕೇಳಿ ಬರುತ್ತಲೇ ಇವೆ. ಒಂದು ಬಣ ಪ್ರತ್ಯೇಕ ಸಭೆಯಂತಹ ಚಟುವಟಿಕೆ ಮೂಲಕ ಪದೇ ಪದೆ ಅತೃಪ್ತಿ ಹೊರಹಾಕುತ್ತಲೇ ಬರುತ್ತಿದೆ. ಸಚಿವ ಸ್ಥಾನದ ಆಕಾಂಕ್ಷಿಗಳ ಒತ್ತಡದ ನಡುವೆಯೂ ಸಿಎಂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಂಡೇ ಬರುತ್ತಿದ್ದಾರೆ.
ಕಾಂಗ್ರೆಸ್, ಬಿಜೆಪಿಯ ನಾಯಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ 2019ರ ಡಿಸೆಂಬರ್ನಲ್ಲಿ ನಡೆದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ12 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ತಮ್ಮ ಸರ್ಕಾರಕ್ಕೆ ಜನಾದೇಶವಿದೆ ಎನ್ನುವುದನ್ನು ಸಾಬೀತುಪಡಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ನಾಯಕತ್ವ ಪ್ರಶ್ನೆ ಮಾಡಿದ್ದವರಿಗೂ ಟಾಂಗ್ ನೀಡಿ, ಹೈಕಮಾಂಡ್ ಮಟ್ಟದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.
ಬಿಎಸ್ವೈಗೆ 'ಬಲ' ತುಂಬಿದ ಆರ್ಆರ್ ನಗರ, ಶಿರಾ ಬೈಎಲೆಕ್ಷನ್:
ನಂತರ 2020ರ ನವೆಂಬರ್ನಲ್ಲಿ ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳ ಉಪಚುನಾವಣೆ ನಡೆದಿದ್ದು, ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಯಡಿಯೂರಪ್ಪ ನಾಯಕತ್ವಕ್ಕೆ ಈ ಗೆಲುವು ಬಲ ತಂದುಕೊಟ್ಟಿತು. ನಾಯಕತ್ವ ಬದಲಾವಣೆ ಕೂಗು ಹಾಕುತ್ತಿದ್ದ ಕೆಲವರ ಬಾಯಿ ಮುಚ್ಚಿಸುವಂತೆ ಮಾಡಿತು.
ಉಪಚುನಾವಣೆ ನಂತರ ಯಡಿಯೂರಪ್ಪ ರಿಸೈನ್ ಮಾಡುತ್ತಾರೆ. ಹೊಸ ವರ್ಷಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ. ಬಜೆಟ್ ಅಧಿವೇಶನದ ನಂತರ ರಾಜೀನಾಮೆ ನೀಡುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಾಗಲೆಲ್ಲ ಉಪಚುನಾವಣಾ ಫಲಿತಾಂಶದ ಮೂಲಕವೇ ಉತ್ತರ ನೀಡಿ ಸ್ಥಾನ ಗಟ್ಟಿ ಮಾಡಿಕೊಳ್ಳುತ್ತಾ ಬಂದಿದ್ದಾರೆ.
ಯಡಿಯೂರಪ್ಪಗೆ ಮತ್ತೆ ಅಗ್ನಿ ಪರೀಕ್ಷೆ:
ಇದೀಗ ಮತ್ತೊಮ್ಮೆ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಯಡಿಯೂರಪ್ಪ ಅವರಿಗೆ ಮತ್ತೆ ಅಗ್ನಿ ಪರೀಕ್ಷೆ ಎದುರಾಗಿದೆ. ಈ ಬಾರಿ ವಿಷಯ ಗಂಭೀರತೆ ಪಡೆದುಕೊಂಡಿರುವುದಕ್ಕೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಡಿಸುತ್ತಿರುವ ಮಾತಿನ ಬಾಂಬ್ಗಳು. ಯಡಿಯೂರಪ್ಪ ನಾಯಕತ್ವ ಪ್ರಶ್ನಿಸಿ, ಟೀಕಿಸುತ್ತಿದ್ದರೂ ಕ್ರಮಕ್ಕೆ ಹೈಕಮಾಂಡ್ ಹಿಂದೇಟು ಹಾಕುತ್ತಿದೆ. ರಾಜ್ಯದ ನಾಯಕರೂ ತೀಕ್ಷ್ಣವಾಗಿ ತಿರುಗೇಟು ನೀಡಲು ಹಿಂದೇಟು ಹಾಕುತ್ತಿದ್ದಾರೆ.