ಬೆಂಗಳೂರು:ಉಪ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ. ಆದ್ರೆ ಕಂದಾಯ ಸಚಿವ ಆರ್.ಅಶೋಕ್ ಮಾತ್ರ ಈ ಸಭೆಗಳಿಂದ ಅಂತರ ಕಾಯ್ದುಕೊಂಡು ತಮ್ಮ ಅಸಮಧಾನವನ್ನು ಹೊರಹಾಕುತ್ತಲೇ ಇದ್ದಾರೆ.
ರಾಜ್ಯಾಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಪರೀಕ್ಷೆ ಎದುರಿಸಲು ನಳಿನ್ ಕುಮಾರ್ ಕಟೀಲ್ ತಾಲೀಮು ಆರಂಭಿಸಿದ್ದಾರೆ. ಇದರ ಭಾಗವಾಗಿ ಕಳೆದ ರಾತ್ರಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಟೀಲ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಬೆಂಗಳೂರಿನ ಬಿಜೆಪಿ ಪ್ರಮುಖರ ಸಭೆಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಡಿಸಿಎಂ ಡಾ. ಸಿ.ಎನ್ ಅಶ್ವಥ್ ನಾರಾಯಣ, ಸಂಸದರಾದ ಪಿ.ಸಿ ಮೋಹನ್, ತೇಜಸ್ವಿ ಸೂರ್ಯ ಮತ್ತು ಇತರ ಮುಖಂಡರು ಭಾಗಿಯಾಗಿದ್ದರು.
15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬೆಂಗಳೂರಿನ ಕೆ.ಆರ್. ಪುರಂ ಮತ್ತು ಪುಲಿಕೇಶಿನಗರ ಕ್ಷೇತ್ರ ಪಕ್ಕದ ಹೊಸಕೋಟೆ ಕ್ಷೇತ್ರ ಕೂಡ ಸೇರಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳ ಚುನಾವಣಾ ಸಿದ್ಧತಾ ಕಾರ್ಯದ ಕುರಿತು ಚರ್ಚೆ ನಡೆಸಲಾಯಿತು. ಬಿಬಿಎಂಪಿ ಮೇಯರ್ ಚುನಾವಣೆ ಕುರಿತೂ ಸಭೆ ನಡೆಸಲಾಯಿತು.