ಬೆಂಗಳೂರು :ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಉಪ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗದ ಆದೇಶದಂತೆ ಪೊಲೀಸ್ ಇಲಾಖೆ ನಗರಾದ್ಯಂತ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಿದೆ.
ಉಪ ಚುನಾವಣೆ ಹಿನ್ನೆಲೆ : 48 ಗಂಟೆಗಳ ಕಾಲ ಮದ್ಯ ಬ್ಯಾನ್ - ಮಧ್ಯ ನಿಷೇಧ ಲೆಟೆಸ್ಟ್ ನ್ಯೂಸ್
ನಾಳೆ ಉಪ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ನಗರಾದ್ಯಂತ ಬಿಗಿ ಭದ್ರತೆ ಒದಗಿಸಿದ್ದು, 48 ಗಂಟೆಗಳ ಕಾಲ ಮದ್ಯನಿಷೇಧ ಮಾಡಿ ಆದೇಶ ಹೊರಡಿಸಿದೆ.
ನಗರದ ಕೆ.ಆರ್ ಪುರಂ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಆದೇಶದ ಮೇರೆಗೆ ನಾಳೆ ನಡೆಯುವ ಚುನಾವಣೆಯಲ್ಲಿ ಮತದಾರರಿಗೆ ಮುಕ್ತ ಮತ್ತು ನ್ಯಾಯೋಚಿತ ಮತದಾನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ 48 ಗಂಟೆಗಳ ಕಾಲದ ಅಂದರೆ ನಿನ್ನೆ ಸಂಜೆ ಆರು ಗಂಟೆಯಿಂದ ನಾಳೆ ಮಧ್ಯರಾತ್ರಿ 12ರವರೆಗೆ 'ಪಾನ ನಿರೋಧ ದಿನ'ವೆಂದು ಘೋಷಣೆ ಮಾಡಿದ್ದಾರೆ.
ಮತಪ್ರಭುಗಳನ್ನು ಸೆಳೆಯುವ ದೃಷ್ಟಿಯಿಂದ ಮಧ್ಯ ನೀಡಿ ಮತ ಹಾಕುವಂತೆ ಪುಸಲಾಯಿಸುವ ಸಾಧ್ಯತೆ ಇದ್ದು, ಹೀಗಾಗಿ ಒಂದು ವೇಳೆ ಮದ್ಯ ಮಾರಾಟ ಮಾಡಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಸೂಚನೆ ನೀಡಿದ್ದಾರೆ.