ಬೆಂಗಳೂರು:ವಿಧಾನಸಭೆಯಿಂದ ವಿಧಾನ ಪರಿಷತ್‍ನ ಒಂದು ಸದಸ್ಯ ಸ್ಥಾನಕ್ಕೆ ಮಾರ್ಚ್ 15 ರಂದು ಮತದಾನ ನಡೆಯಲಿದ್ದು, ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾರ್ಚ್ 4 ರಂದು ಕಡೆ ದಿನವಾಗಿದೆ.
ವಿಧಾನ ಪರಿಷತ್ ಉಪಸಭಾಪತಿಯಾಗಿದ್ದ ಎಸ್.ಎಲ್. ಧರ್ಮೇಗೌಡ ಅವರ ನಿಧನದಿಂದಾಗಿ ಈ ಸ್ಥಾನ ತೆರವಾಗಿದ್ದು, ಇನ್ನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ನಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ. ಬಹುತೇಕ ಬಿಜೆಪಿ ಅಭ್ಯರ್ಥಿಗೆ ಈ ಸ್ಥಾನ ಲಭಿಸುವ ಸಾಧ್ಯತೆ ಇದೆ.
ಪರಿಷತ್ ಉಪಚುನಾವಣೆಗೆ ಫೆಬ್ರವರಿ 25 ರಂದು ಅಧಿಸೂಚನೆ ಪ್ರಕಟವಾಗಿತ್ತು. ಅಂದಿನಿಂದ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದರೂ ಯಾವುದೇ ಪಕ್ಷದ ಅಭ್ಯರ್ಥಿ ತಮ್ಮ ಉಮೇದುವಾರಿಕೆ ಸಲ್ಲಿಸಿಲ್ಲ. ಆಡಳಿತಾರೂಢ ಬಿಜೆಪಿ ವಿಧಾನ ಪರಿಷತ್‍ನ ಉಪಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಬೇಕಾದ ಅಗತ್ಯ ಶಾಸಕರ ಬಲವನ್ನು ಹೊಂದಿದೆ. ಆದರೂ ಇದುವರೆಗೂ ವಿಧಾನ ಪರಿಷತ್ ಉಪಚುನಾವಣೆಯ ಅಭ್ಯರ್ಥಿಯನ್ನು ಅಂತಿಮಗೊಳಿಸಿ ಅಧಿಕೃತವಾಗಿ ಪ್ರಕಟಿಸಿಲ್ಲ.