ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯಗೆ ಏಕವಚನದಲ್ಲಿ ಬೈದ ಮುನಿಯಪ್ಪ: ಜಗಳ ಬಿಡಿಸುವಲ್ಲಿ ಸುಸ್ತಾಗಿ ಹೋದ ವೇಣುಗೋಪಾಲ್​!

ಟಿಕೆಟ್ ಹಂಚಿಕೆಯ ಅಂತಿಮ ತೀರ್ಮಾನ ವಾಗಬೇಕಿದ್ದ ಸಭೆ ಮೂಲ ಹಾಗೂ ವಲಸಿಗ ಕಾಂಗ್ರೆಸ್ಸಿಗರ ತಾರತಮ್ಯದ ವೇದಿಕೆಯಾಗಿ ಪರಿಣಮಿಸಿತು. ಈ ಹಿನ್ನೆಲೆಯಲ್ಲಿ ನಿಜವಾಗಿ ನಡೆಯಬೇಕಿದ್ದ ಅಭ್ಯರ್ಥಿ ಆಯ್ಕೆ ನಗಣ್ಯವಾಗಿ ಪರಿಣಮಿಸಿತು.

ಅಭ್ಯರ್ಥಿ ಆಯ್ಕೆ ಅಂತಿಮವಾಗಬೇಕಿದ್ದ ಮಹತ್ವದ ಸಭೆ ಗದ್ದಲ ಗಲಾಟೆ ವಾಕ್ಸಮರಕ್ಕೆ ಸೀಮಿತ

By

Published : Sep 26, 2019, 5:27 PM IST

Updated : Sep 26, 2019, 9:44 PM IST

ಬೆಂಗಳೂರು: ಉಪ ಚುನಾವಣೆ ಅಭ್ಯರ್ಥಿ ಆಯ್ಕೆಗೆ ನಡೆದ ಸಭೆ ಹಿರಿಯ ಕಾಂಗ್ರೆಸ್ ನಾಯಕರ ವಾಕ್ಸಮರಕ್ಕೆ ವೇದಿಕೆಯಾಗಿದ್ದು ವಿಪರ್ಯಾಸ.

ಏಕವಚನದಲ್ಲಿ ಇಬ್ಬರು ನಾಯಕರ ನಡುವೆ ವಾಗ್ದಾಳಿ

ಅಭ್ಯರ್ಥಿ ಆಯ್ಕೆ ಅಂತಿಮವಾಗಬೇಕಿದ್ದ ಮಹತ್ವದ ಸಭೆ ಗದ್ದಲ ಗಲಾಟೆ ವಾಕ್ಸಮರಕ್ಕೆ ಸೀಮಿತ

ಸಭೆಯಲ್ಲಿ ಮಾಜಿ ಸಂಸದ ಕೆಎಚ್ ಮುನಿಯಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ವಾಕ್ಸಮರ ತಾರಕಕ್ಕೇರಿದ ಪರಿಣಾಮ ನಡೆಯಬೇಕಾಗಿದ್ದ ಮಹತ್ವದ ಮಾತುಕತೆಗೆ ತಡೆ ಬಿತ್ತು. ಮೂಲಗಳ ಪ್ರಕಾರ ಉಭಯ ನಾಯಕರ ವಾಕ್ಸಮರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಎದ್ದು ನಿಂತು ಪರಸ್ಪರ ವಾಗ್ದಾಳಿ ಮಾಡಿದ ನಾಯಕರ ಗಲಾಟೆಯನ್ನು ಉಳಿದ ಕಾಂಗ್ರೆಸ್ ನಾಯಕರು ಮೌನವಾಗಿ ವೀಕ್ಷಿಸಿದರು. ಬಳಿಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಇಬ್ಬರನ್ನು ಸಮಾಧಾನ ಮಾಡಿ ಕೂರಿಸಿದರು.

ಕೆ.ಎಚ್. ಮುನಿಯಪ್ಪ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ, ನನಗೆ ಗೊತ್ತಿದೆ ಏನ್ ಮಾಡ್ಬೇಕು ಅಂತ ಎಂದು ಸಭೆಯಲ್ಲೇ ಬಹಿರಂಗವಾಗಿ ಎಚ್ಚರಿಕೆ ಕೊಟ್ಟರು. ನಾನಾ​ ನೀನಾ ನೋಡೇ ಬಿಡೋಣ ಎಂದು ಪರಸ್ಪರ ಎದ್ದುನಿಂತ ನಾಯಕರಿಬ್ಬರನ್ನು ಸಮಾಧಾನ ಪಡಿಸುವುದು ವೇಣುಗೋಪಾಲ್ ಗೆ ದೊಡ್ಡ ಸಾಹಸವೇ ಆಯಿತು. ಇದರಿಂದಾಗಿ ಅಭ್ಯರ್ಥಿಯ ಆಯ್ಕೆಯ ಪಟ್ಟಿ ಅಂತಿಮಗೊಳಿಸಲು ಕೂಡ ನಾಯಕರಿಗೆ ಸಾಧ್ಯವಾಗಿಲ್ಲ.

ಕಳ್ಳರನ್ನ ಪಕ್ಕದಲ್ಲಿ ಕೂರಿಸಿಕೊಳ್ಳುವ ನೀನ್ಯಾವ ಸೀಮೆ ನಾಯಕ ಎಂದು ಸಿದ್ದರಾಮಯ್ಯಗೆ ಏಕವಚನದಲ್ಲಿ ಬೈದ ಮುನಿಯಪ್ಪ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿಚಾರದಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಮುನಿಯಪ್ಪ ನೀನು ಸರಿಯಾಗಿ ಮಾತನಾಡು ಎಂದ ಸಿದ್ದರಾಮಯ್ಯ ಬೇಸರ ಹೊರಹಾಕಿದರು. ಹೋಗಲೋ ನೀನು ಯಾವನು ಹೇಳೋಕೆ ಎಂದ ಮುನಿಯಪ್ಪ ಎದ್ದುನಿಂತು ವಾಕ್ಸಮರ ನಡೆಸಿದರು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಕೂಡ ನಿಂತು ಮಾತು ಮುಂದುವರಿಸಿದರು. ಆಗ ಇಬ್ಬರಿಗೂ ಕೈ ಮುಗಿದು ಕುಳಿತುಕೊಳ್ಳಿ ಎಂದ ವೇಣುಗೋಪಾಲ್​ ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಹೀಗೆಲ್ಲಾ ಮಾತನಾಡಿದ್ರೆ ನಾನು ಸಭೆಯಲ್ಲಿ ಇರಲ್ಲ ಎಂದು ಎದ್ದು ಹೊರಟ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಿ ಮತ್ತೆ ವಾಪಸ್ ಕರೆತಂದರು. ಈ ಸಂದರ್ಭ ಏನು ಮಾತನಾಡಬೇಕೆಂದು ತಿಳಿಯದೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಇತರ ನಾಯಕರು ಮೌನವಾಗಿ ಕುಳಿತು ನಡೆಯುತ್ತಿದ್ದ ಸನ್ನಿವೇಶವನ್ನು ವೀಕ್ಷಿಸಿದರು.

ಹರಿಪ್ರಸಾದ್ ವಿರುದ್ಧ ಬೇಸರ

ರಾಜ್ಯಸಭಾ ಸದಸ್ಯ ಬಿ ಕೆ ಹರಿಪ್ರಸಾದ್ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತವಾಯಿತು. 10ಕ್ಕೂ ಹೆಚ್ಚು ನಾಯಕರಿಂದ ಸಭೆಯಲ್ಲಿ ಅಸಮಾಧಾನ ಕೇಳಿಬಂತು. ನೀವು ಪಕ್ಷ ಕಟ್ಟಲ್ಲ, ಪಕ್ಷ ಕಟ್ಟುವವರನ್ನ ಬಿಡಲ್ಲ. ಪಕ್ಷದಲ್ಲಿ ಕಾಲು ಎಳೆಯೋದನ್ನ ಮೊದಲು ನೀವು ಬಿಡಿ. ನೀವು ಹೇಳಿದ ಅಭ್ಯರ್ಥಿಗೆ ಟಿಕೆಟ್ ಕೊಟ್ರೆ ಗೆಲ್ಲಿಸಿಕೊಂಡು ಬರಲು ಸಾಧ್ಯವಿಲ್ಲ. ನಮಗೆ ಈ ಉಪಚುನಾವಣೆ ತುಂಬಾ ಮಹತ್ವದ್ದು. ನೀವು ಪಕ್ಷದಲ್ಲಿ ಹಿರಿಯ ನಾಯಕರು. ಇದುವರೆಗೂ ಪಕ್ಷದಲ್ಲಿ ಎಷ್ಟು ಜನರನ್ನ ಗೆಲ್ಲಿಸಿಕೊಂಡು ಬಂದಿದ್ದೀರಾ ಮೊದಲು ಹೇಳಿ. ಗುಂಪು ರಾಜಕೀಯ ಮಾಡೋದನ್ನ ಮೊದಲು ಬಿಡಿ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡೋಣ ಎಂದು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಬಹುತೇಕ ನಾಯಕರು ಇವರು ಸೂಚಿಸುವ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂದು ಒತ್ತಡ ಹೇರಿದರು. ಈ ಸಂದರ್ಭದಲ್ಲಿ ಕೆಲ ಮೂಲ ಕಾಂಗ್ರೆಸ್ಸಿಗರು ಇದಕ್ಕೆ ವಿರೋಧಿಸಿದರು. ಹುಟ್ಟೂರು ಟಿಕೆಟ್ ಹಂಚಿಕೆ ವಿಚಾರದಲ್ಲಿ ಮೂಲ ಹಾಗೂ ವಲಸಿಗ ಕಾಂಗ್ರೆಸಿಗರ ನಡುವಿನ ತಿಕ್ಕಾಟದಲ್ಲಿ ತಮ್ಮ ಮಾತು ನಡೆಯುವುದಿಲ್ಲ ಎಂದು ಮನಗಂಡ ವೇಣುಗೋಪಾಲ್ ದೆಹಲಿಯಲ್ಲಿ ಕೇಂದ್ರ ಚುನಾವಣೆ ಸಮಿತಿ ಸಭೆ ನೆಪ ಹೇಳಿ ಅಲ್ಲಿಂದ ತೆರಳಿದರು.

ದೆಹಲಿಗೆ ತೆರಳಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಬೀಳ್ಕೊಡಲು ಅವರೊಂದಿಗೆ ವಿಮಾನ ನಿಲ್ದಾಣದತ್ತ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಕಂಡ್ರೆ ತೆರಳಿದರು. ಇದಾದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಕೆಲಕಾಲ ನಾಯಕರೊಂದಿಗೆ ಚರ್ಚೆ ನಡೆಸಿ ಹೊರನಡೆದರು. ಸಂಜೆ 6 ಗಂಟೆಯವರೆಗೆ ನಡೆಯಬೇಕಿದ್ದ ಸಭೆ 12ಗಂಟೆಗೆ ಮುಕ್ತಾಯವಾಯಿತು. ಒಟ್ಟು ಒಂಬತ್ತು ಗಂಟೆ ಕಾಲ ನಡೆಯಬೇಕಿದ್ದ ಸಭೆ ಕೇವಲ ಮೂರು ಘಂಟೆಗೆ ಸೀಮಿತವಾಗಿದ್ದು ವಿಪರ್ಯಾಸ.

Last Updated : Sep 26, 2019, 9:44 PM IST

ABOUT THE AUTHOR

...view details