ಬೆಂಗಳೂರು: ಛಂಬಲ್ ಡಕಾಯಿತರಿಂದ ದೇಗುಲಗಳನ್ನು ಕಟ್ಟಲು ಕಲ್ಲು ಹೊರಿಸಿ ಅವರ ಮನಃಪರಿವರ್ತನೆ ಕಾರಣನಾದೆ ಎನ್ನುವ ಸಂತೃಪ್ತಿ ನನಗಿದೆ. ನನ್ನ ಪುನರುತ್ಥಾನದ ಕೆಲಸಗಳಿಂದ ನಮ್ಮ ಪೂರ್ವಜರಾದ ಘಜ್ನಿ ಮೊಹಮ್ಮದ್, ಮೊಹಮ್ಮದ್ ಘೋರಿ ತರಹದ ರಾಜರುಗಳು ಭಾರತದ ಜನರ, ಮಂದಿರಗಳ, ಸಂಸ್ಕೃತಿಯ ಮೇಲೆ ಮಾಡಿದ ಅನಾಚಾರಗಳನ್ನು ಸ್ವಲ್ಪಮಟ್ಟಿಗೆ ಸರಿಪಡಿಸಿದೆ ಎನ್ನುವ ಕೃತಾರ್ಥ ಭಾವವಿದೆ ಎಂದು ಪುರಾತತ್ವ ಶಾಸ್ತ್ರಜ್ಞ ಕೆ ಕೆ ಮೊಹಮ್ಮದ್ ಹೇಳಿದರು.
ಭಾನುವಾರ ಹುಳಿಮಾವು ಬಳಿಯ ಅಕ್ಷಯನಗರದ ವಾದಿರಾಜ ಕಲಾಭವನದಲ್ಲಿ ವಿವೇಕಾನಂದ ವಿಚಾರ ವೇದಿಕೆ ಆಶ್ರಯದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಧ್ಯಪ್ರದೇಶದ ಪುರಾತತ್ವ ಸರ್ವೇಕ್ಷಣ ಅಧಿಕಾರಿಯಾಗಿ ಕ್ಷೇತ್ರೀಯ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಂತೆ ಅಲ್ಲಿನ ಪಾಳು ಬಿದ್ದ ಪ್ರಾಚೀನ ಅವಶೇಷಗಳ ಬಗ್ಗೆ ದಾಖಲೆ ಸಂಗ್ರಹಿಸತೊಡಗಿದೆ. ಮುಖ್ಯವಾಗಿ ಮೋರೇನಾ ಜಿಲ್ಲೆಯ ಕಾಡುಗುಡ್ಡದ ನಡುವೆ ದೇವಾಲಯಗಳ ಅವಶೇಷಗಳು ರಾಶಿ ಬಿದ್ದಿವೆ. ಆ ಕಲ್ಲು ಚಪ್ಪಡಿ, ವಿಗ್ರಹ, ಕಂಬ, ಬೋದಿಗೆಗಳ ರಾಶಿಯೇ ಒಂದು ಗುಡ್ಡದಷ್ಟಿದೆ ಎಂದು ಕಚೇರಿಯ ಜವಾನ ಹೇಳಿದ ಮೇಲೆ ಛಂಬಲ್ ಕಣಿವೆಯ ದೇಗುಲಗಳ ಬಗೆಗೆ ವಿಶೇಷ ಆಸಕ್ತಿ ಬೆಳೆಯಿತು ಎಂದು ತಿಳಿಸಿದರು.
ಛಂಬಲ್ ಡಕಾಯಿತರು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಪ್ರದೇಶ ಮೂರೂ ರಾಜ್ಯದ ಪೊಲೀಸರಿಗೆ ಸೆಡ್ಡು ಹೊಡೆದು ತಮ್ಮದೇ ಪಾತಕ ಜಗತ್ತನ್ನು ಕಟ್ಟಿ ಆಳುತ್ತಿದ್ದವರು. ಈ ಪ್ರದೇಶಗಲ್ಲಿ ಹಲವು ಪ್ರಾಚೀನ ದೇಗುಲಗಳು ಪಾಳು ಬಿದ್ದಿವೆ ಎನ್ನುವ ಸಂಗತಿ ತಿಳಿದೆ. ಮಧ್ಯಪ್ರದೇಶದ ಮೊರೇನಾ ಜಿಲ್ಲೆಯಲ್ಲಿ ಭೂತನಾಥ್ ದೇವರ ಮಂದಿರ ಪಾಳು ಬಿದ್ದಿದೆ ಎಂಬುದು ತಿಳಿಯಿತು. ಸ್ಥಳೀಯ ಡ್ರೈವರ್ ಜೊತೆ ಆ ಪ್ರದೇಶ ನೋಡಲು ಹೊರಟೆ. ಅಲ್ಲಿನ ಡಕಾಯಿತರು ಮತ್ತು ಭೂತನಾಥನ ಗಣಗಳು ಅಲ್ಲಿ ಹೋದವರ ಜೀವ ತೆಗೆಯುತ್ತಾರೆ ಎನ್ನುವ ಭಯದಿಂದ ಕಾರು ಚಾಲಕ ಕೂಡ ಛಂಬಲ್ ಪ್ರದೇಶ ಬರುತ್ತಿದ್ದಂತೆ ಹೆದರಿದ ಎಂದು ತಮ್ಮ ವೃತ್ತಿ ಜೀವನದ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಸ್ವಾತಂತ್ರ್ಯ ಬಂದ ಕಾಲದಲ್ಲಿ ಮುದಿ ಡಕಾಯಿತ ಮಾನ್ಸಿಂಗ್ ಪ್ರದೇಶಗಳಲ್ಲಿ ಓಡಾಡಿಕೊಂಡಿದ್ದ. 1112 ರಾಬರಿ ಮತ್ತು 185 ಕೊಲೆ ಮಾಡಿದ್ದನು. ಅವನ ಕೈಯಲ್ಲಿ ಸತ್ತವರಲ್ಲಿ 32 ಜನ ಪೊಲೀಸರಾಗಿದ್ದರು. ನಂತರ ಛಂಬಲ್ ಕಣಿವೆ ನಿರ್ಭಯ್ ಗುರ್ಜರ್ ಎಂಬ ಮೋಸ್ಟ್ ವಾಂಟೆಡ್ ಡಕಾಯಿತನ ಕೈಯಲ್ಲಿತ್ತು. ಉಳಿದಂತೆ ರಾಂ ಬಾಬು ಗಡಾರಿಯಾ ಮೊದಲಾದವರು ಸಣ್ಣಪುಟ್ಟ ತಂಡ ಕಟ್ಟಿಕೊಂಡು ಛಂಬಲ್ ಕಣಿವೆಯೊಳಗೆ ಕುಳಿತು ಮೂರೂ ರಾಜ್ಯಗಳಲ್ಲಿ ಕಾನೂನಿಗೆ ಸಮಾಧಿ ಕಟ್ಟಿದ್ದರು. ಈ ಡಕಾಯಿತರ ಭಯದಿಂದಾಗಿ ಅಲ್ಲಿನ ಮಂದಿರಗಳ ಪರಿಸರಕ್ಕೆ ಯಾರ ನೆರಳೂ ಬಿದ್ದಿರಲಿಲ್ಲ ಎಂದು ವಿವರಿಸಿದರು.
ಭಾರತದ ಅಂಗ್‍ಕೋರ್‍ವಾಟ್ ಎನ್ನಬಹುದಾದ ಬಟೇಶ್ವರ ದೇಗುಲ ಸಮೂಹ ಸುಮಾರು 24 ಎಕ್ರೆ ವಿಸ್ತೀರ್ಣದಲ್ಲಿತ್ತು. ಕೇವಲ ಕಲ್ಲು ಚಪ್ಪಡಿಗಳ ಅಗಾಧ ರಾಶಿ, ಬೆಲೆಕಟ್ಟಲಾಗದ ಶಿಲ್ಪ ವೈವಿಧ್ಯಗಳು. ಕಣ್ಣು ಹಾಯಿಸಿದಷ್ಟು ದೂರಕ್ಕೂ ಹರಡಿರುವ ಅವಶೇಷಗಳ ಗುಪ್ಪೆಯನ್ನು ಸುಂದರ ದೇಗುಲವಾಗಿ ನಿರ್ಭಯ್ ಗುರ್ಜರ್ ಮನವೊಲಿಸಿ ಅಲ್ಲಿನ ಡಕಾಯಿತರಿಂದ ಸಹಾಯ ಪಡೆದು ನಿರ್ಮಿಸಿದ್ದು ಜೀವನದ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ. ಇದೇ ರೀತಿಯಲ್ಲಿ ಹಲವು ಸ್ಥಳೀಯ ಡಾಕುಗಳ ಮನಃಪರಿವರ್ತನೆ ಮಾಡಿ ಅವರಿಂದ ಸಹಾಯ ಪಡೆದು ಹಲವು ದೇಗುಲಗಳನ್ನು ಪುನರುತ್ಥಾನಗೊಳಿಸಿರುವೆ ಎಂದು ಮೊಹಮ್ಮದ್ ವಿವರಿಸಿದರು.