ಬೆಂಗಳೂರು: ವಿಧಾನಪರಿಷತ್ನಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆದ ಹಿನ್ನೆಲೆ ಸಭಾಪತಿಗಳು ಕಲಾಪವನ್ನು 10ನಿಮಿಷ ಮುಂದೂಡಿದ ಪ್ರಸಂಗ ನಡೆಯಿತು.
ವಿಧಾನಸಭೆ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ನಿಯಮ 59ರ ಅಡಿ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ವಿಚಾರದ ಕುರಿತು ಚರ್ಚೆಗೆ ಅವಕಾಶ ಕೋರಿದರು. ಇದೇ ಸಂದರ್ಭ ನಿಯಮ 330ರಡಿ ತಮ್ಮ ವಿಚಾರದ ಚರ್ಚೆಗೆ ಅವಕಾಶ ನೀಡುವಂತೆ ಜೆಡಿಎಸ್ ಸದಸ್ಯ ಮರಿತಿಬ್ಬೆಗೌಡರು ಸಭಾಪತಿಗಳನ್ನು ಒತ್ತಾಯಿಸಿದರು. ಈ ಮಧ್ಯೆ ಆಡಳಿತ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಿಧಾನಸಭೆಯಲ್ಲಿ ಅನುಮೋದನೆ ಪಡೆದಿರುವ ವಿವಿಧ ವಿಧೇಯಕಗಳ ಅನುಮೋದನೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ವಿರೋಧಿಸಿದ ಸಂದರ್ಭ ಒಂದಿಷ್ಟು ಗದ್ದಲದ ವಾತಾವರಣ ನಿರ್ಮಾಣವಾಯಿತು.
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಕಲಾಪ ಆರಂಭವಾದ ದಿನದಿಂದ ಇಲ್ಲಿಯವರೆಗೆ 32 ವಿಧೇಯಕಗಳನ್ನು ಅಂಗೀಕರಿಸಿ ಕೊಡಲಾಗಿದೆ. ಒಂದಿಷ್ಟು ಚರ್ಚೆಗೆ ಅವಕಾಶ ಬೇಡವೇ ಎಂದು ಪ್ರಶ್ನಿಸಿದರು. ಈ ಮಧ್ಯೆ ಆಡಳಿತ ಪಕ್ಷದವರು ವಿಧೇಯಕ ಮಂಡನೆಗೆ ಒತ್ತಾಯ ಹಿಡಿದು ಕುಳಿತಿದ್ದರೆ, ಇನ್ನೊಂದೆಡೆ ಪ್ರತಿಪಕ್ಷ ಸದಸ್ಯರು ಚರ್ಚೆಗೆ ಪಟ್ಟು ಹಿಡಿದು ಕುಳಿತರು. ಸುಗಮ ಕಲಾಪಕ್ಕೆ ತಡೆಯಾದ ಹಿನ್ನೆಲೆ, ಸಭಾಪತಿಗಳು ಕಲಾಪವನ್ನು 10ನಿಮಿಷ ಮುಂದೂಡಿದರು.
ವಿಧಾನಮಂಡಲ ಅಧಿವೇಶನ ಇಂದೇ ಕೊನೆಗೊಳ್ಳಲಿದ್ದು, ಶತಾಯಗತಾಯ ವಿಧೇಯಕ ಅನುಮೋದನೆ ಪಡೆಯಲು ಆಡಳಿತ ಪಕ್ಷ ಹಾಗೂ ಸಾಧ್ಯವಾದಷ್ಟು ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷಗಳು ಸಭಾಪತಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಹಿನ್ನೆಲೆ ಕಲಾಪ ಆರಂಭವಾದ ತಕ್ಷಣ ವಿಧೇಯಕ ಮಂಡನೆಗೆ ಅವಕಾಶ ಸಿಗುವುದಾ ಅಥವಾ ಚರ್ಚೆಗೆ ಅವಕಾಶ ಸಿಗುವುದಾ ಎಂಬ ಕುತೂಹಲ ಮೂಡಿದೆ.