ಬೆಂಗಳೂರು: ರಾಜ್ಯದ ಆಯ್ದ 22 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ತಮ್ಮ ಸಿಎಸ್ಆರ್ ದೇಣಿಗೆ ಮೂಲಕ ಅಭಿವೃದ್ಧಿಪಡಿಸುವುದಾಗಿ ವಿವಿಧ ಉದ್ಯಮಿಗಳು ಶುಕ್ರವಾರ ನಡೆದ ಸಿಎಸ್ಆರ್(ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ) ಸಮಾವೇಶದಲ್ಲಿ ಘೋಷಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸಮಾವೇಶದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯದ ಉಳಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿಗೂ ನೆರವು ನೀಡಲಾಗುವುದು. ಜತೆಗೆ ಶೌಚಾಲಯ, ಪ್ರಯೋಗಾಲಯ, ಗ್ರಂಥಾಲಯ ಮತ್ತು ಇತರ ಸಾಧನ ಸಲಕರಣೆಗಳ ವ್ಯವಸ್ಥೆಗೆ ಸಹಕರಿಸಲಾಗುವುದು ಎಂದು ಉದ್ಯಮಿಗಳು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಉದ್ಯಮಿಗಳು ದೇಣಿಗೆ ನೀಡಿ ತೃಪ್ತರಾಗಬಾರದು. ಸರ್ಕಾರಿ ಕಾಲೇಜುಗಳಿಗೆ ಭೇಟಿ ನೀಡಿ ತಮ್ಮ ಅನುಭವ ಮತ್ತು ಅರಿವನ್ನು ಹಂಚಿಕೊಳ್ಳಬೇಕು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಂದ ಬರುವ ಮಕ್ಕಳ ಆತ್ಮವಿಶ್ವಾಸ ಹೆಚ್ಚುತ್ತದೆ. ಸುಂದರ ಸಮಾಜವನ್ನು ಸೃಷ್ಟಿಸುವ ಕೆಲಸಕ್ಕೆ ಎಲ್ಲರೂ ಹೆಗಲು ಕೊಡಬೇಕು' ಎಂದು ಮನವಿ ಮಾಡಿದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಘಟ್ಟದಲ್ಲಿ ಒಂದೊಂದು ಕಂಪನಿಯೂ ಕನಿಷ್ಠ ಪಕ್ಷ ಒಂದು ಸರ್ಕಾರಿ ಕಾಲೇಜಿನ ಅಭಿವೃದ್ಧಿಗೆ ಮುಂದಾದರೂ ಅದು ಶೈಕ್ಷಣಿಕ ಮನ್ವಂತರವನ್ನೇ ಸೃಷ್ಟಿಸುತ್ತದೆ. ರಾಜ್ಯವು ಶಿಕ್ಷಣದ ಖಾಸಗೀಕರಣಕ್ಕೆ ಎಲ್ಲರಿಗಿಂತಲೂ ಮೊದಲು ತೆರೆದುಕೊಂಡ ಹೆಗ್ಗಳಿಕೆ ಹೊಂದಿದೆ ಎಂದರು.
ರಾಜ್ಯದಲ್ಲಿ ಎನ್‌ಇಪಿಗೆ ತಕ್ಕಂತೆ ಶೈಕ್ಷಣಿಕ ಸುಧಾರಣೆ ಮತ್ತು ಪರಿಷ್ಕರಣೆ ನಡೆಯುತ್ತಿದೆ. ಇದರಲ್ಲಿ ಉದ್ಯಮಗಳನ್ನೂ ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಈಗ ಇಂಟರ್ನ್ ಶಿಪ್ ಅವಧಿಯನ್ನು ಆರು ತಿಂಗಳಿಗೆ ವಿಸ್ತರಿಸಲಾಗಿದೆ. ಜತೆಗೆ ಉದ್ಯಮಗಳೊಂದಿಗೆ ಸಂಶೋಧನಾ ಸಹಭಾಗಿತ್ವಕ್ಕೆ ಉತ್ತೇಜನ ನೀಡಲಾಗುತ್ತಿದೆ. ಕೊಡುಕೊಳ್ಳುವಿಕೆಯಿಂದ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧಿಸಬಹುದು ಎಂದು ಹೇಳಿದರು.
ಹಲವು ಉದ್ಯಮಿಗಳ ಉಪಸ್ಥಿತಿ: ಸಮಾವೇಶದಲ್ಲಿ ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಮತ್ತು ಆಕ್ಸೆಲ್ ಪಾರ್ಟ್ನರ್ಸ್ ಪ್ರಶಾಂತ್ ಪ್ರಕಾಶ್, ಖ್ಯಾತ ಐಟಿ ಉದ್ಯಮಿ ಮತ್ತು ಸರ್ಕಾರದ ಐಟಿ ವಿಷನ್ ಗ್ರೂಪ್ ಮುಖ್ಯಸ್ಥ ಕ್ರಿಸ್ ಗೋಪಾಲಕೃಷ್ಣ, ಖ್ಯಾತ ವೈದ್ಯ ಮತ್ತು ನಾರಾಯಣ ಹೆಲ್ತ್‌ನ ಡಾ.ದೇವಿ ಶೆಟ್ಟಿ, ಸತ್ತ್ವ ಸಮೂಹದ ಸಂಸ್ಥಾಪಕ ಕೃಷ್ಣ, ಎಂಪಿಎಲ್‌ನ ಸಾಯಿ ಶ್ರೀನಿವಾಸ್, ಎಕ್ಸೈಡ್ ಕಂಪನಿಯ ಸಿ.ಸುಬೀರ್, ಎಚ್‌ಡಿಎಫ್‌ಸಿಯ ಧೀರಜ್ ರೆಲ್ಲಿ, ಸೆಂಚುರಿ ಗ್ರೂಪ್‌ನ ರವಿ ಪೈ ಪಾಲ್ಗೊಂಡಿದ್ದರು.
ಅನ್ಅಕಾಡೆಮಿಯ ಗೌರವ್ ಮುಂಜಾಲ್, ಸತ್ವ ಸಮೂಹದ ಕೃಷ್ಣಮೂರ್ತಿ, ಗಿವ್ ಇಂಡಿಯಾದ ಅತುಲ್ ಸತೀಜಾ, ಜಿಎಸ್ ಗ್ಲೋಬಲ್‌ನ ಅರ್ಜುನ್ ಸಂತಾನಕೃಷ್ಣ, ಮರ್ಸಿಡಿಸ್‌ನ ಮನು ಸಾಲೆ, ಜೆರೋಧಾದ ನಿಖಿಲ್ ಕಾಮತ್, ಯುವಅನ್‌ಸ್ಟಾಪಬಲ್‌ನ ಅಮಿತಾಭ್ ಷಾ, ಮೆರ್ಕ್ ಕಂಪನಿಯ ಶ್ರೀನಾಥ್ ನಾರಾಯಣಯ್ಯ, ಬಗಾರಿಯಾ ಗ್ರೂಪ್ಸ್‌ನ ಕರಣ್ ಬಗಾರಿಯಾ, ಆರ್.ವಿ.ಶಿಕ್ಷಣ ಸಂಸ್ಥೆಗಳ ಶಾಮ್ ಶೆಟ್ಟಿ ಉಪಸ್ಥಿತರಿದ್ದರು.
ಉದ್ಯಮಿಗಳಾದ ಶ್ವೇತಾ ಪಾಂಡೆ, ಶ್ವೇತಾ ಖುರಾನಾ, ಸೋಹಿನಿ ಕರ್ಮಾಕರ್, ಇರ್ಫಾನ್ ರಜಾಕ್, ಕ್ಷಿತಿಜಾ ಕೃಷ್ಣಸ್ವಾಮಿ, ಅನುರಾಗ್ ಪ್ರತಾಪ್, ಅರ್ಚನಾ ಸಹಾಯ್, ಧೀರಜ್ ರಾಜಾರಾಂ, ಲವನೀಶ್ ಚಹಾನಾ, ಸುಜಿತ್‌ಕುಮಾರ್ ಮುಂತಾದವರು ಕೂಡ ಇದ್ದರು.
ಇದನ್ನೂ ಓದಿ:ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಂಕಷ್ಟ.. ರೈತರ ಸಾಲ ಮನ್ನಾ ಮಾಡಿ: ಎಚ್ ಕೆ ಪಾಟೀಲ್ ಒತ್ತಾಯ