ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯಮಿ ಕಗ್ಗಲೀಪುರದ ಪ್ರದೀಪ್ ಅವರ ನಿವಾಸಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲಾ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಸೇರಿದಂತೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ವೇಳೆ ರಣದೀಪ್ ಸುರ್ಜೆವಾಲಾ ಮಾತನಾಡಿ, ಪ್ರದೀಪ್ ಕುಟುಂಬ ಅತೀವ ದುಃಖದಲ್ಲಿದೆ. ಪ್ರದೀಪ್ ಕುಟುಂಬದ ದುಃಖ ಹಂಚಿಕೊಳ್ಳಲು ಬಂದಿದ್ದೇವೆ. ಪ್ರದೀಪ್ ದುಡುಕಿ ನಿರ್ಧಾರ ತೆಗೆದುಕೊಂಡಿದ್ದಾರೆ. ಸಂತೋಷ್ ಪಾಟೀಲ್, ಪ್ರದೀಪ್, ಪ್ರಸಾದ್ ಇವೆಲ್ಲ ಕೇವಲ ಹೆಸರುಗಳಲ್ಲ, ಭ್ರಷ್ಟ ಸರ್ಕಾರದಿಂದ ಆಗುತ್ತಿರುವ ಸಾವುಗಳು. ಶೇ 40ರಷ್ಟು ಕಮಿಷನ್ನಿಂದ ಜೀವದ ಮೇಲೆ ಜೀವ ಬಲಿಯಾಗುತ್ತಿದೆ ಎಂದರು.
ಕೊಲೆಗೆ ಕಾರಣರಾದವರಿಗೆ ಶಿಕ್ಷೆ ವಿಧಿಸಬೇಕು:ಸಂತೋಷ್ ಪಾಟೀಲ್ ಕೂಡ ಬಿಜೆಪಿ ಲೀಡರ್ ಆಗಿದ್ದ. ಅವರಿಗೂ ಹಣಕಾಸಿನ ಸಮಸ್ಯೆ ಆಗಿತ್ತು. ಪ್ರಸಾದ್ ಸಾವಿಗೂ ಹಣಕಾಸಿನ ಸಮಸ್ಯೆಯೇ ಕಾರಣವಾಗಿದೆ. ಬಿಜೆಪಿ ನಾಯಕರು ಯಾಕೆ ಹಣಕಾಸಿನ ವ್ಯವಹಾರಗಳಲ್ಲಿ ತಲೆ ಹಾಕ್ತಿದ್ದಾರೆ? ಪ್ರದೀಪ್ ಸಾವು ಆತ್ಮಹತ್ಯೆಯಲ್ಲ, ಅದೊಂದು ಕೊಲೆ. ಪ್ರದೀಪ್ ಪುತ್ರಿ, ಹೆಂಡತಿ ಕಣ್ಣೀರು ಒರೆಸುವುದಕ್ಕೆ ಸರ್ಕಾರದ ಕೈಲಿ ಸಾಧ್ಯ ಇದೆಯಾ? ಭ್ರಷ್ಟಾಚಾರದಿಂದಾಗಿಯೇ ಇದೆಲ್ಲ ಆಗ್ತಾ ಇದೆ. ಪ್ರದೀಪ್ ಕೊಲೆಗೆ ಕಾರಣ ಆದವರಿಗೆ ಸರ್ಕಾರ ಶಿಕ್ಷೆ ಕೊಡಬೇಕು. ಅದು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡ ಅವರಿಗೆ ಶಿಕ್ಷೆ ಆಗಬೇಕು. ಅವರನ್ನು ಬಂಧಿಸಬೇಕು ಕಂಬಿ ಹಿಂದೆ ಕಳುಹಿಸಬೇಕು ಎಂದು ಒತ್ತಾಯಿಸಿದರು.
ಪ್ರದೀಪ್ ಪತ್ನಿಗೆ ನ್ಯಾಯ ಕೊಡಿಸಿ:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಇದು ನಡೆಯಬಾರದ ಘಟನೆ. ಹಣಕಾಸಿನ ವ್ಯವಹಾರದಲ್ಲಿ ಇಂತಹ ಘಟನೆ ಆಗಿದೆ. ಪ್ರದೀಪ್ ಪತ್ನಿಗೆ ನ್ಯಾಯ ಕೊಡಿಸಿ ಅಂತ ಕೇಳಿದ್ದಾರೆ. 1.5 ಕೋಟಿ ರೂ ನಾವು ಇನ್ವೆಸ್ಟ್ ಮಾಡಿದ್ವಿ. ಒಂದೇ ಒಂದು ಪೈಸೆ ಲಾಭ ಬಂದಿಲ್ಲ. ನಮ್ಮ ಹಣ ವಾಪಸ್ ಕೊಡಿ ಅನ್ನೋದು ಇವರ ವಾದ. ಲಿಂಬಾವಳಿ ಈ ಭಾಗದ ಶಾಸಕರು. ಸೆಟ್ಲಮೆಂಟ್ಗೆ ಮಾಡಿದ್ದಾರೆ. ಡೆತ್ ನೋಟ್‌ನಲ್ಲಿ 6 ಜನರ ಹೆಸರು ಇದೆ. ಲಿಂಬಾವಳಿ ಹೆಸರೂ ಇದೆ.